ಶೈಕ್ಷಣಿಕ ಉದ್ದೇಶಕ್ಕಾಗಿ ಅಥವಾ ಉದ್ಯೋಗಕ್ಕಾಗಿ ವಿದೇಶ ಪ್ರಯಾಣ ಮಾಡಲಿರುವವರು ಹಾಗೂ ಟೋಕಿಯೋ ಒಲಿಂಪಿಕ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ತೆರಳುವ ಕ್ರೀಡಾಳುಗಳಿಗೆ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು 4 ವಾರಗಳಿಗೆ ಇಳಿಸಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಗಸೂಚಿಯಲ್ಲಿರುವ ಅಂಶಗಳು ಹೀಗಿವೆ.
ಫಲಾನುಭವಿಗಳು ಯಾರು? :
- ಶಿಕ್ಷಣದ ಉದ್ದೇಶದಿಂದ ಅಂತಾರಾಷ್ಟ್ರೀಯ ಪ್ರಯಾಣ ಬೆಳೆಸಲಿರುವ ವಿದ್ಯಾರ್ಥಿಗಳು
- ವಿದೇಶಗಳಲ್ಲಿ ಉದ್ಯೋಗ ಪಡೆದಿರುವ ಭಾರತೀಯರು
- ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ತೆರಳುವ ಅಥ್ಲೀಟ್‌ಗಳು, ಕ್ರೀಡಾಳುಗಳು ಮತ್ತು ಸಂಬಂಧಪಟ್ಟ ಸಿಬ್ಬಂದಿ.
ರಾಜ್ಯಗಳೇನು ಮಾಡಬೇಕು? :
ಈ ಫಲಾನುಭವಿಗಳಿಗೆ 2ನೇ ಡೋಸ್ ಕೊವಿಶೀಲ್ಡ್ ಒದಗಿಸಲು ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿ ಜಿಲ್ಲೆಯಲ್ಲೂ ವ್ಯವಸ್ಥೆ ಮಾಡಬೇಕು. ಇದಕ್ಕೆ ಸಂಬಂಧಿಸಿದ ಪ್ರಾಧಿಕಾರ ಅಥವಾ ಅಧಿಕಾರಿಯು ಲಸಿಕೆಗೆ ಒಪ್ಪಿಗೆ ನೀಡುವ ಮುನ್ನ, ಮೊದಲ ಡೋಸ್ ನೀಡಿ 28 ದಿನಗಳಾಗಿ ವೆಯೇ ಎಂಬುದುನ್ನು ದೃಢಪಡಿಸಿಕೊಳ್ಳಬೇಕು, ದಾಖಲೆಗಳನ್ನು ಪರಿಶೀಲಿಸಿ ಪ್ರಯಾಣದ ಉದ್ದೇಶವನ್ನು ಅರಿತುಕೊಳ್ಳಬೇಕು. ಶೈಕ್ಷಣಿಕ ಉದ್ದೇಶಕ್ಕೆ ಹೋಗುವವರಿದ್ದರೆ ಕಾಲೇಜು ಪ್ರವೇಶ ಪತ್ರ, ಸಂದರ್ಶನದ ಕರೆ, ಉದ್ಯೋಗದ ಆಫರ್ ಲೆಟರ್, ಒಲಿಂಪಿಕ್ಸ್ ನಾಮಿನೇಷನ್ ಇತ್ಯಾದಿಗಳನ್ನು ಪರಿಶೀಲಿಸಬೇಕು.
ಪ್ರಸ್ತುತ, ಎಲ್ಲರೂ ಮೊದಲ ಡೋಸ್ ಪಡೆದ ಎಷ್ಟು ದಿನಗಳ ಬಳಿಕ 2ನೇ ಡೋಸ್ ಪಡೆಯಬೇಕು?
84 ದಿನಗಳು
ವಿದೇಶಕ್ಕೆ ತೆರಳುವವರು ಎಷ್ಟು ದಿನಗಳ ಬಳಿಕ 2ನೇ ಡೋಸ್ ಪಡೆಯಬಹುದು?
28 ದಿನಗಳು
ಪಾಸ್‌ಪೋರ್ಟ್‌ಗೆ ಸರ್ಟಿಫಿಕೇಟ್ ಲಿಂಕ್ :
ಲಸಿಕೆ ಸ್ವೀಕಾರವನ್ನು ಗುರುತಿನ ಚೀಟಿಯಾಗಿ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಅದರಂತೆ, ಲಸಿಕೆ ಪ್ರಮಾಣಪತ್ರದಲ್ಲಿ ಪಾಸ್‌ಪೋರ್ಟ್ ನಂಬರ್ ನಮೂದಿಸಲಾಗುತ್ತದೆ. ಇಲ್ಲದಿದ್ದರೆ, ಅಧಿಕಾರಿಯು, ಫಲಾನುಭವಿಯ ಕೋರಿಕೆ ಮೇರೆಗೆ ಆತನ ಪಾಸ್‌ಪೋರ್ಟ್‌ಗೆ ಪ್ರಮಾಣಪತ್ರವನ್ನು ಲಿಂಕ್ ಮಾಡಿ ಹೊಸ ಸರ್ಟಿಫಿಕೇಟ್ ನೀಡಬಹುದು.