Advertisement

ರೈಲು ಪುನಾರಂಭಕ್ಕೆ ಪ್ರಯಾಣಿಕರಲ್ಲಿ ಸಂತಸ

07:34 AM Feb 17, 2019 | |

ಚಿಕ್ಕಬಳ್ಳಾಪುರ: ಬೆಂಗಳೂರಿನ ಯಶವಂತಪುರ ಹಾಗೂ ಚಿಕ್ಕಬಳ್ಳಾಪುರ ನಡುವೆ ಎರಡು ವರ್ಷಗಳ ಹಿಂದೆ ಸಂಚರಿಸುತ್ತಾ ಆದಾಯ ಕೊರತೆಯಿಂದ ಸ್ಥಗಿತಗೊಂಡಿದ್ದ ಪ್ಯಾಸೆಂಜರ್‌ ರೈಲು ಸಂಚಾರಕ್ಕೆ ಮತ್ತೆ ಹಸಿರು ನಿಶಾನೆ ಸಿಕ್ಕಿದ್ದು, ಶನಿವಾರದಿಂದ ರೈಲು ಸೇವೆ ಚಿಕ್ಕಬಳ್ಳಾಪುರಕ್ಕೆ ಪುನಾರಂಭಗೊಂಡಿರುವುದು ಜಿಲ್ಲೆಯ ಜನತೆಯಲ್ಲಿ, ರೈಲ್ವೆ ಪ್ರಯಾಣಿಕರಲ್ಲಿ ಹರ್ಷ ತಂದಿದೆ.

Advertisement

ಯಶವಂತಪುರದಲ್ಲಿ ಬೆಳಗ್ಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಯಶವಂತಪುರ ವಯಾ ದೇವನಹಳ್ಳಿ ಮೂಲಕ ಚಿಕ್ಕಬಳ್ಳಾಪುರ ಪ್ಯಾಸೆಂಜರ್‌ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಯಶವಂತಪುರದಿಂದ ಹೊರಟ ರೈಲು ಯಲಹಂಕ, ದೇವನಹಳ್ಳಿ ಮಾರ್ಗವಾಗಿ ಮಧ್ಯಾಹ್ನ 12:15ಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ರೈಲ್ವೆ ನಿಲ್ದಾಣಕ್ಕೆ ಆಗಮಿಸಿತು.

ಸ್ವಾಗತ, ವಿಶೇಷ ಪೂಜೆ: ಚಿಕ್ಕಬಳ್ಳಾಪುರ ರೈಲು ನಿಲ್ದಾಣಕ್ಕೆ ಆಗಮಿಸಿದ 06596 ಪ್ಯಾಸೆಂಜರ್‌ ರೈಲಿಗೆ ಪುನಃ ಯಶವಂತಪುರಕ್ಕೆ ಹೊರಡುವ ಮುನ್ನ ನಗರದ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಡಿಆರ್‌ಯುಸಿಸಿ ಸದಸ್ಯೆ ಆರ್‌.ಸುಬ್ಬಲಕ್ಷಿ ಮತ್ತು ಸಾರ್ವಜನಿಕರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. 

ಸಾರ್ವಜನಿಕರಿಗೆ ರೈಲ್ವೆ ಹೋರಾಟ ಸಮಿತಿ ಸದಸ್ಯರು ಸಿಹಿ ಹಂಚಿಕರು. ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ವೆಂಕಟಚಲರಾಜು, ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳಾದ ಯಲುವಹಳ್ಳಿ ಎನ್‌.ರಮೇಶ್‌, ಸೈಯದ್‌ ಮಹಮ್ಮದ್‌, ಎನ್‌.ಬ್ರಹ್ಮಚಾರಿ, ಪ್ರೇಮಲೀಲಾ ವೆಂಕಟೇಶ್‌, ಬಿಜೆಪಿ ಯುವ ಮುಖಂಡ ಸಿ.ಬಿ.ಕಿರಣ್‌ ಉಪಸ್ಥಿತರಿದ್ದರು.

ಈ ಹಿಂದೆ ಸಂಚಾರ ಸ್ಥಗಿತಗೊಂಡಿತ್ತು: ಹಿಂದೆಯು ಯಶವಂತಪುರದಿಂದ ಯಲಹಂಕ ಮಾರ್ಗವಾಗಿ ದೇವನಹಳ್ಳಿಯವರೆಗೂ ಬಂದು ನಿಲ್ಲುತ್ತಿದ್ದ ಪ್ಯಾಸೆಂಜರ್‌ ರೈಲನ್ನು ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸುವಂತೆ ಆಗ್ರಹಿಸಿದ್ದರ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಸಂಚಾರ ಆರಂಭಿಸಲಾಗಿತ್ತು.

Advertisement

ಆದರೆ ಪ್ರಯಾಣಿಕರ ಸಂಖ್ಯೆ ಕಡಿಮೆ, ಇಲಾಖೆಗೆ ಆದಾಯ ಇಲ್ಲ ಎಂಬ ಕಾರಣಕ್ಕೆ ನೈರುತ್ಯ ರೈಲ್ವೆ ಇಲಾಖೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಸಂಚಾರ ಪುನಾರಂಭಿಸಿದ್ದು, ಜಿಲ್ಲೆಯ ನಾಗರಿಕರು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಚಿಂತಾಮಣಿವರೆಗೂ ವಿಸ್ತರಣೆಗೆ ಆಗ್ರಹ: ಯಶವಂತಪುರದಿಂದ ಚಿಕ್ಕಬಳ್ಳಾಪುರಕ್ಕೆ ಬರುವ ಪ್ಯಾಸೆಂಜರ್‌ ರೈಲನ್ನು ಕನಿಷ್ಠ ಜಿಲ್ಲೆಯ ಚಿಂತಾಮಣಿವರೆಗೂ ವಿಸ್ತರಿಸಿದರೆ ಜಿಲ್ಲೆಯ ಜನತೆಗೆ ಅನುಕೂಲವಾಗುತ್ತದೆ. ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸುವುದರಿಂದ ಹೆಚ್ಚಿನ ಆದಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಚಿಂತಾಮಣಿ ಅಥವಾ ನೆರೆಯ ಕೋಲಾರದವರೆಗೂ ರೈಲು ವಿಸ್ತರಿಸಿದರೆ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಅಭಿಪ್ರಾಯಪಟ್ಟರು. 

ಈ ಹಿಂದೆಯು ದೇವನಹಳ್ಳಿವರೆಗೂ ಬರುತ್ತಿದ್ದ ಇದೇ ರೈಲು ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸಿ  ಮತ್ತೆ ಸ್ಥಗಿತಗೊಳಿಸಲಾಗಿತ್ತು. ಈ ಬಾರಿ ಆ ರೀತಿ ಆಗುವುದು ಬೇಡ. ಇದೇ ರೈಲನ್ನು ಕೋಲಾರ ಅಥವಾ ಚಿಂತಾಮಣಿಗೆ ವಿಸ್ತರಿಸಬೇಕೆಂಬ ಆಗ್ರಹ ಪ್ರಯಾಣಿಕರಿಂದ ಕೇಳಿ ಬಂತು.

ರೈಲು ಎಲ್ಲಿಂದ ಎಲ್ಲಿಗೆ ಹೋಗುತ್ತೆ?: ಹೊಸದಾಗಿ ಆರಂಭಗೊಂಡಿರುವ ಈ ರೈಲು ಪ್ರತಿದಿನ ಯಶವಂತಪುರವನ್ನು ಬೆಳಿಗ್ಗೆ 10.30ಕ್ಕೆ ಬಿಟ್ಟು ಹೆಬ್ಟಾಳ, ಯಲಹಂಕ, ದೇವನಹಳ್ಳಿ ಮೂಲಕ ಚಿಕ್ಕಬಳ್ಳಾಪುರ ನಗಕ್ಕೆ 12.15ಕ್ಕೆ ಆಗಮಿಸಿಲಿದೆ. ನಂತರ 12.40ಕ್ಕೆ ಚಿಕ್ಕಬಳ್ಳಾಪುರವನ್ನು ಬಿಟ್ಟು ಯಶವಂತಪುರಕ್ಕೆ ಹೊರಡುತ್ತದೆ.

ಅಲ್ಲಿಂದ ಹೆಬ್ಟಾಳ ಮಾರ್ಗವಾಗಿ ತಮಿಳುನಾಡಿನ ಹೊಸೂರಿಗೆ ಹೊರಡುತ್ತದೆಯೆಂದು ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ರಾಮರಾವ್‌ ಉದಯವಾಣಿಗೆ ತಿಳಿಸಿದರು. ಈ ರೈಲು ಸೌಲಭ್ಯವನ್ನು ಚಿಕ್ಕಬಳ್ಳಾಪುರ ನಗರದ ಜನತೆ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next