Advertisement

ಇನ್ನೂ ಆರಂಭವಾಗದ ಪ್ಯಾಸೆಂಜರ್‌ ರೈಲು

01:42 AM Dec 15, 2020 | mahesh |

ಮಂಗಳೂರು: ಕೊರೊನಾ ತೀವ್ರತೆ ಕಡಿಮೆಯಾಗಿ ರೈಲು ಸಂಚಾರ ಸಹಜ ಸ್ಥಿತಿಯತ್ತ ಮರಳುತ್ತಿದ್ದರೂ, ಮಂಗಳೂರು-ಮಡಗಾಂವ್‌ ಮಧ್ಯೆ ಮಾತ್ರ ಯಾವುದೇ ಪ್ಯಾಸೆಂಜರ್‌ ರೈಲು ಆರಂಭಗೊಂಡಿಲ್ಲ. ಇದರಿಂದಾಗಿ ಕರಾವಳಿಯ ಪ್ರಯಾಣಿಕರು ಈ ರೈಲು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಮಂಗಳೂರು- ಮಡಗಾಂವ್‌ ಡೆಮು (ರೈಲು ನಂ.70105/06) ಮತ್ತು ಪ್ಯಾಸೆಂಜರ್‌ ರೈಲುಗಳನ್ನು (ರೈಲು ನಂ.56640/56641) ಕೊರೊನಾ ಹಿನ್ನೆಲೆಯಲ್ಲಿ ಮಾ. 21ರಿಂದ ಸ್ಥಗಿತಗೊಳಿಸಲಾಗಿತ್ತು.

Advertisement

ಹಗಲು ರೈಲಿನ ಕೊರತೆ
ಲಾಕ್‌ಡೌನ್‌ ಬಳಿಕ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು ಶುಭ ಸಮಾರಂಭ, ಪ್ರವಾಸ, ಉತ್ಸವಗಳು ಆರಂಭಗೊಂಡಿವೆ. ಇದರಿಂದಾಗಿ ಜನರ ಸಂಚಾರಕ್ಕೆ ರೈಲು ಸೇವೆ ಅಗತ್ಯವಿದೆ. ಆದರೆ ಮಂಗಳೂರು-ಮಡಗಾಂವ್‌ ನಡುವೆ ಹಗಲು ಹೊತ್ತಿನಲ್ಲಿ ಯಾವುದೇ ರೈಲು ಸಂಚರಿಸುತ್ತಿಲ್ಲ. ಹೀಗಾಗಿ ಈ ನಡುವಣ 22 ನಿಲ್ದಾಣಗಳ ಪ್ರಯಾಣಿಕರಿಗೆ ಬಹಳಷ್ಟು ತೊಂದರೆಯಾಗಿದೆ. ಇದರ ನಡುವೆ ಕೊಂಕಣ ಮಾರ್ಗದಲ್ಲಿ ಸಂಚರಿಸುವ ವಿಶೇಷ ರೈಲುಗಳು ರಾತ್ರಿ ವೇಳೆ ಸಂಚರಿಸುತ್ತಿದ್ದು ಸೀಮಿತ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಇವೆ. ಹೀಗಾಗಿ ಸಣ್ಣ ನಿಲ್ದಾಣಗಳಿರುವ ಪ್ರದೇಶಗಳ ಜನರು ರೈಲ್ವೇ ಸೌಲಭ್ಯ ವಂಚಿತರಾಗುತ್ತಿದ್ದಾರೆ.

ಪ್ಯಾಸೆಂಜರ್‌ ರೈಲು (ನಂ.56640) ಮಂಗಳೂರಿನಿಂದ ಪ್ರತಿದಿನ ಬೆಳಗ್ಗೆ 5.30ಕ್ಕೆ ಹೊರಟು ಮಡಗಾಂವ್‌ಗೆ ಅಪರಾಹ್ನ 12.40ಕ್ಕೆ ತಲುಪುತ್ತಿತ್ತು. ರೈಲು ನಂ. 56641 ಮಡಗಾಂವ್‌ನಿಂದ ಅಪರಾಹ್ನ 1 ಗಂಟೆಗೆ ಹೊರಟು ಮಂಗಳೂರಿಗೆ ರಾತ್ರಿ 9.20ಕ್ಕೆ ತಲುಪುತಿತ್ತು. ಡೆಮು ರೈಲು (ನಂ. 70106) ಮಂಗಳೂರು ಸೆಂಟ್ರಲ್‌ನಿಂದ ಅಪರಾಹ್ನ 2.45ಕ್ಕೆ ಹೊರಟು ಮಡಗಾಂವ್‌ಗೆ ರಾತ್ರಿ 10.30ಕ್ಕೆ ತಲುಪುತ್ತಿತ್ತು. ರೈಲು ನಂ. 70105 ಮಡಗಾಂವ್‌ನಿಂದ ಬೆಳಗ್ಗೆ 5 ಗಂಟೆಗೆ ಹೊರಟು ಅಪರಾಹ್ನ 12.05ಕ್ಕೆ ಮಂಗಳೂರು ಸೆಂಟ್ರಲ್‌ಗೆ ಬರುತ್ತಿತ್ತು. ಇದರ ಸಂಚಾರ ಸಮಯ ಜನರಿಗೆ ಬಹುತೇಕ ಉಪಯಕ್ತವಾಗಿತ್ತು.

ಬೆಂಗಳೂರಿನಲ್ಲಿ ವಿಶೇಷ ನೆಲೆಯಲ್ಲಿ ಈ ಹಿಂದೆ ಸಂಚರಿಸುತ್ತಿದ್ದ 7 ಸಬ್‌ ಅರ್ಬನ್‌ ರೈಲುಗಳನ್ನು ಡಿ.8ರಿಂದ ಪ್ರಾರಂಭಿಸಲಾಗಿದೆ. ಇದೇ ರೀತಿ ಮಂಗಳೂರು-ಮಡಗಾಂವ್‌ ಮಧ್ಯೆ ಒಂದಾದರೂ ಪ್ಯಾಸೆಂಜರ್‌ ರೈಲು ಆರಂಭಿಸಬೇಕೆಂಬುದು ಕರಾವಳಿ ಭಾಗದ ಜನರ ಆಗ್ರಹವಾಗಿದೆ.

ಮಂಗಳೂರು ಜಂಕ್ಷನ್‌- ಸಿಎಸ್‌ಎಂಟಿ ನಿರೀಕ್ಷೆ
ಮಂಗಳೂರು ಜಂಕ್ಷನ್‌-ಮುಂಬಯಿ ಸಿಎಸ್‌ಟಿ ರೈಲು ವಿಶೇಷ ನೆಲೆಯಲ್ಲಿ ಶೀಘ್ರ ಸಂಚಾರ ಆರಂಭಿಸುವ ನಿರೀಕ್ಷೆ ಇದೆ. ಈ ರೈಲನ್ನು ಮಂಗಳೂರು ಜಂಕ್ಷನ್‌ ಬದಲು ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಆರಂಭಿಸಬೇಕು ಎಂಬ ಒತ್ತಾಯ ಕೇಳಿಬಂದಿವೆ.

Advertisement

ಪ್ಯಾಸೆಂಜರ್‌ ರೈಲಾಗಿ ಮುಂದುವರಿಕೆ
200 ಕಿಮೀ. ಅಧಿಕ ದೂರದ ಎಲ್ಲ ಪ್ಯಾಸೆಂಜರ್‌ ರೈಲುಗಳನ್ನು ಎಕ್ಸ್‌ಪ್ರೆಸ್‌ ರೈಲುಗಳಾಗಿ ಪರಿವರ್ತಿಸುವ ರೈಲ್ವೇ ಮಂಡಳಿ ನಿರ್ಧಾರದಂತೆ ಮಂಗಳೂರು- ಮಡ್ಗಾಂವ್‌ ಡೆಮು ಮತ್ತು ಮಂಗಳೂರು-ಮಡಗಾಂವ್‌ ಪ್ಯಾಸೆಂಜರ್‌ ರೈಲುಗಳು ಎಕ್ಸ್‌ಪ್ರೆಸ್‌ ಆಗಿ ಪರಿವರ್ತನೆಗೊಳ್ಳಲಿವೆ. ಆದರೆ ಈ ಕ್ರಮಕ್ಕೆ ಕರಾವಳಿ ಭಾಗದಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಕಾರಣ ಈ ರೈಲನ್ನು ಪ್ಯಾಸೆಂಜರ್‌ ರೈಲು ಆಗಿ ಉಳಿಸಲು ಮತ್ತು ಎಲ್ಲ ಕಡೆ ನಿಲುಗಡೆಗೆ ಮಂಡಳಿ ಅನುಮತಿ ನೀಡಿದೆ ಎಂದು ಕೊಂಕಣ ರೈಲ್ವೇ ಮಾಹಿತಿ ನೀಡಿದೆ.

ಸಂಚಾರಕ್ಕೆ ಒತ್ತಾಯ
ಮಂಗಳೂರು-ಮಡಗಾಂವ್‌ ಮಧ್ಯೆ ಪ್ಯಾಸೆಂಜರ್‌ ರೈಲು ಸಂಚಾರ ಅತೀ ಅಗತ್ಯವಿದ್ದು ಈ ಬಗ್ಗೆ ರೈಲ್ವೇ ಮಂಡಳಿಯನ್ನು ಒತ್ತಾಯಿಸಲಾಗಿದೆ. ಮಂಡಳಿಯಿಂದಲೂ ಪೂರಕ ಸ್ಪಂದನೆ ದೊರಕಿದ್ದು ಶೀಘ್ರ ಪ್ರಾರಂಭವಾಗುವ ನಿರೀಕ್ಷೆ ಇದೆ.
-ರಾಜೀವ್‌ ಗಾಂವ್ಕರ್‌ , ಕೊಂಕಣ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next