Advertisement

ಪ್ರಯಾಣಿಕ ಸ್ನೇಹಿ ಬಸ್‌ ನಿಲ್ದಾಣಗಳಿಗೆ ಪೂರಕ ಕ್ರಮ ಅಗತ್ಯ

10:30 PM May 11, 2019 | Team Udayavani |

ನಗರದ ಸುವ್ಯವಸ್ಥೆಗೆ ರಸ್ತೆ ಸಂಚಾರ, ಸ್ವತ್ಛತೆ, ಮೂಲಸೌಕರ್ಯಗಳು ಪ್ರಮುಖ ಅಂಶಗಳಾಗಿರುತ್ತವೆ. ಮಂಗಳೂರು ಸ್ಮಾರ್ಟ್‌ಸಿಟಿನಗರದತ್ತ ಹೆಜ್ಜೆಯಿಟ್ಟಿದೆ. ಇದರೊಂದಿಗೆ ಮೂಲಸೌಕರ್ಯಗಳು ಸ್ಮಾರ್ಟ್‌ಗೊಳ್ಳುವುದು ಅವಶ್ಯ. ಮೂಲಸೌಕರ್ಯಗಳಲ್ಲಿ ಸಾರ್ವಜನಿಕ ಸಂಚಾರ ಸೌಲಭ್ಯಗಳು ಹೆಚ್ಚು ಪ್ರಯಾಣಿಕ ಸ್ನೇಹಿಯಾಗಿರಬೇಕು. ಸುಸಜ್ಜಿತ‌ ಬಸ್‌ನಿಲ್ದಾಣ ಇದರ ಒಂದು ಭಾಗವಾಗಿದೆ. ವ್ಯವಸ್ಥಿತ ಬಸ್‌ನಿಲ್ದಾಣಗಳು ನಗರದ ವರ್ಚಸ್ಸಿಗೆ ಪೂರಕವಾಗಿವೆ. ಉತ್ತಮ ವಿನ್ಯಾಸ, ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನ, ಕುಡಿಯುವ ನೀರು, ಸ್ವತ್ಛತೆ, ಬಸ್‌ಗಳ ವ್ಯವಸ್ಥಿತ ನಿಲುಗಡೆ ಮುಂತಾದುವುಗಳು ಅಪೇಕ್ಷಣೀಯ. ಮಂಗಳೂರು ನಗರದಲ್ಲಿ ಪ್ರಯಾಣಿಕ ಸ್ನೇಹಿ ಬಸ್‌ನಿಲ್ದಾಣಗಳ ಕೊರತೆ ಇದೆ. ಬಸ್‌ ನಿಲ್ದಾಣಗಳನ್ನು ಪ್ರಯಾಣಿಕ ಸ್ನೇಹಿಯಾಗಿ ರೂಪಿಸಲು ಆಡಳಿತ ವ್ಯವಸ್ಥೆ ಕ್ರಮಕೈಗೊಳ್ಳಬೇಕು ಎಂಬ ಬೇಡಿಕೆ ನಾಗರಿಕರಿಂದ ನಿರಂತರ ವ್ಯಕ್ತವಾಗುತ್ತಲೇ ಬಂದಿದೆ.

Advertisement

ಮಂಗಳೂರು ನಗರದಲ್ಲಿ ಸುಮಾರು 350 ಸಿಟಿಬಸ್‌ಗಳು ಸಾರ್ವಜನಿಕ ಸೇವೆ ನೀಡುತ್ತಿವೆ. ಹೆಚ್ಚಿನ ರೂಟ್‌ಗಳಲ್ಲಿ ಪ್ರತಿ ಅರ್ಧ ನಿಮಿಷಕ್ಕೊಂದು ಸಿಟಿಬಸ್‌ ಸಂಚಾರವಿದೆ.ಇದಲ್ಲದೆ ದಿನವೊಂದಕ್ಕೆ ಸುಮಾರು 450 ಸರ್ವಿಸ್‌ ಹಾಗೂ ಎಕ್ಸ್‌ಪ್ರೆಸ್‌ ಬಸ್‌ಗಳು ಸಂಚರಿಸುತ್ತಿವೆ. ಸರ್ವಿಸ್‌ ಹಾಗೂ ಎಕ್ಸ್‌ ಪ್ರಸ್‌ ಬಸ್‌ಗಳಿಗೆ ನೆಹರೂ ಮೈದಾನ್‌ನ ಪಕ್ಕದಲ್ಲಿರುವ ಸರ್ವಿಸ್‌ ಬಸ್‌ನಿಲ್ದಾಣ ಆರಂಭಿಕ ತಾಣ. ಸಿಟಿಬಸ್‌ಗಳಲ್ಲಿ ಶೇ. 90 ರಷ್ಟು ಬಸ್‌ಗಳಿಗೆ ಸ್ಟೇಟ್‌ಬ್ಯಾಂಕ್‌ ನಿಲ್ದಾಣ ಸಂಚಾರಕ್ಕೆ ಆರಂಭಿಕ ಮತ್ತು ಅಂತಿಮ ತಾಣ. ರೂಟ್‌ನಂಬ್ರ 15 ಬಸ್‌ಗಳು ಮಂಗಳಾದೇವಿಯಿಂದ ಸಂಚಾರ ನಡೆಸುತ್ತವೆ. ಕಂಕನಾಡಿ ಮಾರುಕಟ್ಟೆ ನಿಲ್ದಾಣದಿಂದಲೂ ಕೆಲವು ಬಸ್‌ಗಳ ಸಂಚಾರ ಆರಂಭಗೊಳ್ಳುತ್ತದೆ.

ಸ್ಟೇಟ್‌ಬ್ಯಾಂಕಿನಿಂದ ಪಣಂಬೂರು ಮಾರ್ಗವಾಗಿ ಸುರತ್ಕಲ್‌, ಕಾಟಿಪಳ್ಳ ಕೃಷ್ಣಾಪುರ, ಮುಕ್ಕ , ಜೋಕಟ್ಟೆ , ಕೂಳೂರು ಮಾರ್ಗವಾಗಿ ಕಾವೂರು, ನಂತೂರು, ಕುಲಶೇಖರ ಮಾರ್ಗವಾಗಿ ನೀರುಮಾರ್ಗ, ವಾಮಂಜೂರು, ಪಿಲಿಕುಳ, ಮೂಡುಶೆಡ್ಡೆ , ಬೆಂದೂರುವೆಲ್‌, ಪಂಪ್‌ವೆಲ್‌ ಮಾರ್ಗವಾಗಿ ತಲಪಾಡಿ, ಸೋಮೇಶ್ವರ, ತೊಕ್ಕೊಟ್ಟು ಮಾರ್ಗವಾಗಿ ದೇರಳಕಟ್ಟೆ, ಕೋಣಾಜೆ, ಮುಡಿಪು, ನಾಟೆಕಲ್‌ ಮಾರ್ಗವಾಗಿ ಮಂಜನಾಡಿ, ಕೆಎಸ್‌ಆರ್‌ಟಿಸಿ ನಿಲ್ದಾಣ, ಬಿಜೈ ಮಾರ್ಗವಾಗಿ ಯೆಯ್ನಾಡಿ, ಬೊಂದೇಲ್‌, ಬಿಜೈ ಕಾಪಿಕಾಡ್‌ ಮಾರ್ಗವಾಗಿ ಕುಂಟಿಕಾನ, ಕೊಂಚಾಡಿ, ಕಾವೂರು, ಸ್ಟೇಟ್‌ಬ್ಯಾಂಕ್‌ನಿಂದ ಕಂಕನಾಡಿ , ವೆಲೆನ್ಸಿಯಾ ಮಾರ್ಗವಾಗಿ ಮಾರ್ನಮಿಕಟ್ಟೆ, ಹಂಪನಕಟ್ಟೆ, ಫ‌ಳ್ನೀರ್‌ ಮಾರ್ಗವಾಗಿ ನಾಗುರಿ, ಪಡೀಲ್‌, ಬಜಾಲ್‌, ಸ್ಟೇಟ್‌ಬ್ಯಾಂಕ್‌ನಿಂದ ಪಾಂಡೇಶ್ವರ , ಬೋಳಾರ, ಬೋಳೂರು ಸಹಿತ ನಗರದ ವಿವಿಧ ಕಡೆಗಳಿಗೆ ಸಿಟಿಬಸ್‌ಗಳು ಸಂಚರಿಸುತ್ತಿವೆ. ಮಂಗಳಾದೇವಿಯಿಂದ 15 ಸಿಟಿ ಬಸ್‌ಗಳು, ಬೆಂದೂರುವೆಲ್‌, ಮಲ್ಲಿಕಟ್ಟೆ , ನಂತೂರು ಮೂಲಕ ಸುರತ್ಕಲ್‌, ಕಾಟಿಪಳ್ಳ, ಕೃಷ್ಣಾಪುರಕ್ಕೆ , 13 ನಂಬರ್‌ದ ಬಸ್‌ಗಳು ಬೆಂದೂರುವೆಲ್‌, ಮಲ್ಲಿಕಟ್ಟೆ , ನಂತೂರು, ಕೂಳೂರು ಮೂಲಕ ಕಾವೂರಿಗೆ ಓಡಾಟ ನಡೆಸುತ್ತವೆ. ಇದೇ ರೀತಿಯಾಗಿ ನಗರದಿಂದ ಬೇರೆಬೇರೆ ಊರುಗಳಿಗೆ ಸರ್ವಿಸ್‌ ಹಾಗೂ ಎಕ್ಸ್‌ಪ್ರೆಸ್‌ ಬಸ್‌ಗಳು ಸಂಚರಿಸುತ್ತವೆ.

ಮಾಹಿತಿ ಫಲಕಗಳು ಇರಲಿ
ಪ್ರಸ್ತುತ ಮಂಗಳೂರು ನಗರದಲ್ಲಿ ಬಸ್‌ನಿಲ್ದಾಣಗಳಲ್ಲಿ ಮಾಹಿತಿ ಫಲಕಗಳೇ ಇಲ್ಲ. ನಗರದಿಂದ ಹೊರ ಪ್ರದೇಶದ ಹಾಗೂ ಹೊರಜಿಲ್ಲೆಗಳಿಂದ ಬರುವ ಪ್ರಯಾಣಿಕರಿಗೆ ಬಸ್‌ಗಳ ಸಂಚಾರಮಾರ್ಗದ ಬಗ್ಗೆ ಮಾಹಿತಿ ನೀಡುವ ಯಾವುದೇ ವ್ಯವಸ್ಥೆ ಬಸ್‌ನಿಲ್ದಾಣಗಳಿಲ್ಲ. ಅವರು ನಿಲ್ದಾಣದಲ್ಲಿ ಇತರ ಪ್ರಯಾಣಿಕರಲ್ಲಿ ವಿಚಾರಿಸಿಕೊಂಡು ತಾವು ಸಾಗಬೇಕಾದ ಪ್ರದೇಶಕ್ಕೆ ಸಂಚರಿಸುವ ಬಸ್‌ಗಳ ಬಗ್ಗೆ ಮಾಹಿತಿ ಪಡೆಯಬೇಕಾಗುತ್ತದೆ. ಇಂತಹ ಪ್ರಸಂಗಗಳು ದಿನನಿತ್ಯವೂ ಬಸ್‌ನಿಲ್ದಾಣಗಳಲ್ಲಿ ಕಂಡುಬರುತ್ತವೆ. ಪ್ರಸ್ತುತ ಪುರಭವನದಿಂದ ಆರ್‌ಟಿಒ ಕಚೇರಿವರೆಗೆ ಇರುವ ಕೆಲವು ಬಸ್‌ನಿಲ್ದಾಣಗಳಲ್ಲಿ ಬಸ್‌ಗಳ ನಿಲುಗಡೆಯ ರೂಟ್‌ನಂಬ್ರಗಳನ್ನು ಹಾಕಿರುವುದು ಕಂಡುಬರುತ್ತಿವೆ. ಉಳಿದಂತೆ ಯಾವುದೇ ಬಸ್‌ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಇಲ್ಲ. ಬಸ್‌ನಿಲ್ದಾಣಗಳಲ್ಲಿ ಮುಖ್ಯವಾಗಿ ಪ್ರಮುಖ ಸ್ಥಳಗಳ ಬಸ್‌ನಿಲ್ದಾಣಗಳಲ್ಲಿ ನಿಲ್ದಾಣ ಮೂಲಕ ಸಂಚರಿಸುವ ಬಸ್‌ಗಳು ಅವುಗಳು ಸಾಗುವ ಪ್ರದೇಶಗಳು ಹಾಗೂ ವೇಳಾಪಟ್ಟಿಯನ್ನು ಒಳಗೊಂಡ ಮಾಹಿತಿ ಫಲಕವನ್ನು ಅಳವಡಿಸುವುದು ಪ್ರಯಾಣಿಕರ ಅನುಕೂಲತೆಯ ನಿಟ್ಟಿನಲ್ಲಿ ಅವಶ್ಯವಾಗಿದೆ. ಸಿಟಿಬಸ್‌ಗಳಾದರೆ ಅವುಗಳ ನಂಬ್ರಗಳು ಹಾಗೂ ಸಂಚರಿಸುವ ಪ್ರದೇಶಗಳನ್ನು ನಮೂದಿಸಬಹುದು. ಇದಲ್ಲದೆ ಬಸ್‌ನಿಲ್ದಾಣ ಮೂಲಕ ಯಾವ ಊರುಗಳಿಗೆ ಹೋಗುವ ಬಸ್‌ಗಳು ಬರುತ್ತವೆ ಎಂಬುದರ ಮಾಹಿತಿಯನ್ನೂ ಹಾಕಬಹುದು. ನಾಮಫಲಕಗಳನ್ನು ಸಾರ್ವಜನಿಕ , ವಾಣಿಜ್ಯ ಸಂಸ್ಥೆಗಳ ಸಹಭಾಗಿತ್ವ ಪಡೆದುಕೊಂಡು ಅನುಷ್ಠಾನಗೊಳಿಸಬಹುದಾಗಿದೆ. ಇದರಿಂದ ಮಹಾನಗರ ಪಾಲಿಕೆಗೆ ಆರ್ಥಿಕವಾಗಿಯೂ ಹೆಚ್ಚಿನ ಹೊರೆಯಾಗುವುದಿಲ್ಲ . ಇದೇ ರೀತಿಯಾಗಿ ಬೆಂಗಳೂರು ಮಾದರಿಯಲ್ಲಿ ನಗರದೊಳಗಿನ ಪ್ರಮುಖ ಒಂದೆರಡು ಪ್ರದೇಶಗಳಲ್ಲಿ ಪಿಪಿ ಮಾದರಿಯಲ್ಲಿ ಡಿಜಿಟಲ್‌ ಫಲಕಗಳನ್ನು ಕೂಡ ಅಳವಡಿಸಬಹುದಾಗಿದೆ.

ಅಲೆಮಾರಿ, ಭಿಕ್ಷುಕರಿಗೆ ಆಶ್ರಯ ತಾಣ
ಮಂಗಳೂರಿನಲ್ಲಿ ಪ್ರಸ್ತುತ ಇರುವ ಅನೇಕ ಬಸ್‌ನಿಲ್ದಾಣಗಳು ಪ್ರಯಾಣಿಕರ ಬದಲಾಗಿ ಅಲೆಮಾರಿಗಳು, ಕುಡುಕರು, ಭಿಕ್ಷುಕರ ಆಶ್ರಯ ತಾಣಗಳಾಗಿವೆ. ಅಲ್ಲಿ ಕಬ್ಬಿಣದ ಪಟ್ಟಿಗಳನ್ನು ಬಳಸಿ ನಿರ್ಮಿಸಿರುವ ಬೆಂಚ್‌ಗಳಲ್ಲಿ ಭಿಕ್ಷುಕರು, ಕುಡುಕರು ಸದಾ ಮಲಗಿಕೊಂಡಿರುತ್ತಾರೆ. ಪರಿಣಾಮ ಪ್ರಯಾಣಿಕರು ರಸ್ತೆಯಲ್ಲೇ ನಿಂತುಕೊಂಡು ಬಸ್‌ ಕಾಯಬೇಕಾಗುತ್ತದೆ. ಬಸ್‌ನಿಲ್ದಾಣದ ಒಳಗೂ ತೀರಾ ಅಸಹನೀಯ ವಾತಾವರಣವಿರುತ್ತದೆ.ಇಂತಹ ವಾತಾವರಣದಿಂದ ಬಸ್‌ನಿಲ್ದಾಣಗಳನ್ನು ಮುಕ್ತಗೊಳಿಸಬೇಕಾಗಿದೆ. ನಗರದ ಪ್ರಮುಖ ಕೆಲವು ಬಸ್‌ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸುವುದು ಅಗತ್ಯವಾಗಿದೆ. ಕೆಲವು ಬಸ್‌ನಿಲ್ದಾಣಗಳಲ್ಲಿ ಸ್ವಯಂಸೇವಾ ಸಂಸ್ಥೆಗಳು, ಸಂಘಟನೆಗಳು ಕುಡಿಯುವ ನೀರಿನ ವ್ಯವಸ್ಥೆ ಮಾಡಿವೆ.

Advertisement

ರಿಯಲ್‌ ಟೈಮ್‌ ಬಸ್‌ ಫಲಕಗಳು
ಪ್ರಯಾಣಿಕರು ಸಂಚಾರ ವ್ಯವಸ್ಥೆ ಬಗ್ಗೆ ಎದುರಿಸುತ್ತಿರುವ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈಗಾಗಲೇ ಕೆಲವು ನಗರಗಳಲ್ಲಿ ಬಸ್‌ಗಳ ಸಂಚಾರ ಮಾರ್ಗ ಹಾಗೂ ಸಮಯದ ಮಾಹಿತಿ ನೀಡುವ ರಿಯಲ್‌ ಟೈಮ್‌ ಬಸ್‌ ಫಲಕಗಳನ್ನು ಬಸ್‌ನಿಲ್ದಾಣಗಳಲ್ಲಿ ಅಳವಡಿಸಲಾಗುತ್ತಿದೆ. ಈ ಫಲಕಗಳು ಬಸ್‌ಗಳ ಆಗಮನ ಸಮಯ, ಸಾಗುವ ಮಾರ್ಗಗಳ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡುತ್ತದೆ. ಇದರ ವೈಶಿಷ್ಠ éವೆಂದರೆ ಬಸ್‌ ಬರುವ ಸಮಯ ಯಾವ ಮಾರ್ಗದ ಬಸ್‌ ಎಲ್ಲಿದೆ ಎಂಬ ಬಗ್ಗೆಯೂ ಪ್ರಯಾಣಿಕರಿಗೆ ಮಾಹಿತಿ ಲಭ್ಯವಾಗಲಿದೆ. ಜತೆಗೆ ಆಯಾ ದಿನದ ಹವಾಮಾನ ವರದಿ , ದೈನಂದಿನ ಸುದ್ದಿ ಲಭ್ಯವಾಗುವ ವ್ಯವಸ್ಥೆಯೂ ಇದೆ.

ಮಂಗಳೂರು ನಗರದಲ್ಲಿ ಸಂಚಾರ ವ್ಯವಸ್ಥೆಯೂ ಇನ್ನೂ ಅಭಿವೃದ್ಧಿಯಾಗಬೇಕಿದೆ. ಬಸ್‌ ಸಂಚಾರದಲ್ಲಿ ಪ್ರಯಾಣಿಕರ ಅನುಕೂಲಿಯಾಗುವ ಯೋಜನೆಗಳು ಅತ್ಯವಶ್ಯ. ಇದಕ್ಕೆ ಪೂರಕವಾಗಿ ಬಸ್‌ ನಿಲ್ದಾಣಗಳು ಅಭಿವೃದ್ಧಿಯಾಗಬೇಕಿದೆ. ಪ್ರಯಾಣಿಕರಿಗೆ ಸಹಾಯಕಾರಿಯಾಗಲು ಬಸ್‌ ನಿಲ್ದಾಣಗಳಲ್ಲಿ ಮಾರ್ಗಗಳನ್ನು ಸೂಚಿಸುವ ಬೋರ್ಡ್‌, ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಕಾರ್ಯನಿರ್ವಹಿಸಬೇಕಿದೆ.

ವ್ಯವಸ್ಥಿತ ಬಸ್‌ ನಿಲ್ದಾಣಗಳು ಅಗತ್ಯ
ಪ್ರಸ್ತುತ ಮಂಗಳೂರು ನಗರದಲ್ಲಿ ಇರುವ ಹೆಚ್ಚಿನ ಬಸ್‌ನಿಲ್ದಾಣಗಳು ಫುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡು ನಿರ್ಮಾಣವಾಗಿರುವುದು. ಒಟ್ಟು ನಿಲ್ದಾಣದ ಗರಿಷ್ಠ ಅಗಲ ಎಂದರೆ ಒಂದೂವರೆಯಿಂದ ಎರಡು ಮೀಟರ್‌ ಇದರಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಆಸನ, ಜಾಹೀರಾತು ಬೋರ್ಡ್‌ ಗಳು ಇವೆ. ಅಳವಡಿಸಿರುವ ಕಬಿ¡ಣದ ಪಟ್ಟಿಗಳ ಅಥವಾ ಕಡಪದ ಆಸನಗಳು ಕೂಡ ಪ್ರಯಾಣಿಕರು ಕುಳಿತುಕೊಳ್ಳಲು ಪೂರಕವಾಗಿಲ್ಲ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ರೂಪಿಸಿರುವ ಬಸ್‌ನಿಲ್ದಾಣಗಳ ಬಗ್ಗೆ ಸಾರ್ವಜನಿಕರಿಂದ ಕೇಳಿಬಂದಿರುವ ಆಕ್ಷೇಪಣೆ ಹಿನ್ನೆಲೆಯಲ್ಲಿ ಈ ವಿನ್ಯಾಸವನ್ನು ಕೈಬಿಡಲಾಗಿದೆ. ಪ್ರಸ್ತುತ ನಿರ್ಮಿಸಿರುತ್ತಿರುವ ಬಸ್‌ನಿಲ್ದಾಣಗಳಿಂದ ಈ ಹಿಂದಿನ ಬಸ್‌ನಿಲ್ದಾಣಗಳೇ ಉತ್ತಮ ಎನ್ನುವ ಭಾವನೆ ಇದೆ.ಈ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ನಗರದಲ್ಲಿ ವ್ಯವಸ್ಥಿತ ಬಸ್‌ನಿಲ್ದಾಣಗಳು ನಿರ್ಮಾಣವಾಗಬೇಕಾಗಿದೆ.

-  ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next