Advertisement

ಸಾರ್ವಜನಿಕ ಶೌಚಾಲಯವಿಲ್ಲದೆ ಪ್ರಯಾಣಿಕರ ಪರದಾಟ

10:56 AM Oct 05, 2018 | |

ಎಡಪದವು: ನಗರ ಪ್ರದೇಶವಾಗುತ್ತಿರುವ ಎಡಪದವಿನಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಈ ಪೈಕಿ ಶೌಚಾಲಯದ ಸಮಸ್ಯೆಯೂ ಒಂದು. ಪ್ರತಿದಿನ ನೂರಾರು ಮಂದಿ ಬಂದು ಹೋಗುತ್ತಿರುವ ಈ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೇ ಜನರು ಪರದಾಡುವಂತಾಗಿದೆ.

Advertisement

ಎಡಪದವು ಒಂದು ಆಯಕಟ್ಟಿನ ಪ್ರದೇಶವಾಗಿದ್ದು, ಅತ್ತ ಮೂಡಬಿದಿರೆ ಇತ್ತ ಗುರುಪುರ ಕೈಕಂಬಕ್ಕೂ ಹತ್ತಿರದಲ್ಲಿದೆ. ಎಡಪದವು ಮುಖಾಂತರ ಮುಚ್ಚಾರು, ಮಿಜಾರ್‌, ತೋಡಾರ್‌, ಮೂಡಬಿದಿರೆ, ಮಂಗಳೂರು, ಕುಪ್ಪೆಪದವು, ಮೂಲರಪಟ್ಣ, ಮುತ್ತೂರು ಮುಂತಾದ ಪ್ರದೇಶಗಳಿಗೆ ತೆರಳಬಹುದು. ಅಲ್ಲಿನ ಬಸ್‌ಗಳೂ ಇಲ್ಲಿ ಸಾಕಷ್ಟು ಹೊತ್ತು ನಿಲ್ಲುತ್ತವೆ.

ಮಂಗಳೂರು- ಮೂಡಬಿದಿರೆ- ಕಾರ್ಕಳ- ಶೃಂಗೇರಿ ಕಡೆಗಳಿಗೆ ಹೋಗುವ ಬಸ್‌ಗಳೂ ಇಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿ-ಇಳಿಸಿ ಹೋಗುತ್ತಿವೆ. ಇಲ್ಲಿ ಶಾಲೆ, ಮಾರುಕಟ್ಟೆ, ಬ್ಯಾಂಕ್‌, ಅಂಗಡಿ ಮುಂಗಟ್ಟುಗಳಿದ್ದು, ಪ್ರತಿದಿನ ಸಾವಿರಾರು ಮಂದಿ ಇಲ್ಲಿಗೆ ಆಗಮಿಸುತ್ತಾರೆ. ಸಾಕಷ್ಟು ಸೌಲಭ್ಯಗಳನ್ನು ಹೊಂದಿರುವ ಎಡಪದವಿನಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೇ ಪ್ರಯಾಣಿಕರು ನಿತ್ಯವೂ ತೊಂದರೆಯನ್ನು ಎದುರಿಸಬೇಕಾಗಿದೆ.

ಎಡಪದವು ಜಂಕ್ಷನ್‌ನಲ್ಲಿ ಸರಕಾರಿ ಜಾಗದ ಸಮಸ್ಯೆಯೂ ಇರುವುದರಿಂದ ಶೌಚಾಲಯಕ್ಕೆ ಸೂಕ್ತ ಸ್ಥಳ ಸಿಗುತ್ತಿಲ್ಲ. ಇಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸುವಂತೆ ಬಹುದಿನಗಳಿಂದ ಸ್ಥಳೀಯರು ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದಾರೆ. 

 ಶೀಘ್ರವಾಗಿ ಕ್ರಮ ಕೈಗೊಳ್ಳುತ್ತೇವೆ
ಎಡಪದವಿನಲ್ಲಿ ಶೌಚಾಲಯ ಇಲ್ಲದಿರುವುದರಿಂದ ಜನರು ಸಮಸ್ಯೆ ಅನುಭವಿಸುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ. ಆದರೆ ಎಡಪದವು ಜಂಕ್ಷನ್‌ ಭಾಗದಲ್ಲಿ ಸೂಕ್ತ ಜಾಗದ ಸಮಸ್ಯೆಯೂ ಇದೆ. ಅಲ್ಲದೆ ಶೌಚಾಲಯವನ್ನು ನಿರ್ವಹಣೆ ಮಾಡುವ, ಜವಾಬ್ದಾರಿ ತೆಗೆದುಕೊಳ್ಳುವವರು ಸಿಗುತ್ತಿಲ್ಲ. ಈ ಬಗ್ಗೆ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಜಿಲ್ಲಾ ಪಂಚಾಯತ್‌ಗೆ ತಿಳಿಸುತ್ತೇವೆ. ಶೀಘ್ರವಾಗಿ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇವೆ.  
– ಬೋಗಮಲ್ಲಣ್ಣ
ಪಿಡಿಒ, ಎಡಪದವು ಗ್ರಾಮ ಪಂಚಾಯತ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next