Advertisement

ಕನ್ನಡ ನಾಮಫ‌ಲಕ ತಿದ್ದುಪಡಿ ವಿಧೇಯಕ ಅಂಗೀಕಾರ-ಸ್ಥಳದಲ್ಲೇ ದಂಡ ವಿಧಿಸುವ ಕಾನೂನು ಬೇಕು:ಅಶೋಕ್‌

09:32 PM Feb 15, 2024 | Team Udayavani |

ವಿಧಾನಸಭೆ: ಸರ್ಕಾರದಿಂದ ಅನುಮತಿ ಪಡೆದ ವ್ಯಾವಹಾರಿಕ ಸ್ಥಳಗಳ ನಾಮಫ‌ಲಕದಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯವಾಗಿ ಪ್ರದರ್ಶಿಸಬೇಕೆಂಬ ಕಾನೂನು ಜಾರಿಗೊಳಿಸುವುದಕ್ಕೆ ಪೂರಕವಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ-2024ಕ್ಕೆ ವಿಧಾನಸಭೆಯಲ್ಲಿ ಗುರುವಾರ ಅನುಮೋದನೆ ದೊರೆಯಿತು.

Advertisement

ವಿಧಾನಪರಿಷತ್ತಿನಲ್ಲಿ ಈ ವಿಧೇಯಕಕ್ಕೆ ಅನುಮೋದನೆ ದೊರೆತು ರಾಜ್ಯಪಾಲರ ಅಂಕಿತ ಬಿದ್ದ ಬಳಿಕ ಕಾನೂನಾಗಿ ಜಾರಿಗೊಳ್ಳಲಿದ್ದು, ರಾಜ್ಯ ಸರ್ಕಾರದ ಇಲಾಖೆಗಳು, ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಬ್ಯಾಂಕ್‌, ಇತರೆ ಹಣಕಾಸು ಸಂಸ್ಥೆಗಳು, ಸರ್ಕಾರದಿಂದ ಅನುಮತಿ ಪಡೆದ ಖಾಸಗಿ ಕೈಗಾರಿಕೆಗಳು ಮತ್ತು ವಿಶ್ವವಿದ್ಯಾಲಯಗಳ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು. ನಾಮಫಲಕಗಳ ಒಟ್ಟಾರೆ ವಿಸ್ತೀರ್ಣದಲ್ಲಿ ಕನ್ನಡ ಭಾಷೆಯನ್ನು ಮೇಲ್ಭಾಗದಲ್ಲಿ ಶೇ.60 ರಷ್ಟು ಪ್ರದರ್ಶಿಸುವುದು ಕಡ್ಡಾಯ ಮಾಡಲಾಗಿದೆ. ಶೇ.40ರಷ್ಟು ಇತರ ಭಾಷೆಯನ್ನು ಕೆಳಭಾಗದಲ್ಲಿ ಬಳಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಾಹಿತಿ ನೀಡಿದರು.

ಇದಲ್ಲದೆ, ಕಾನೂನು ಜಾರಿ ಸಮಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರನ್ನು ಕಾರ್ಯಭಾರದ ನಿಮಿತ್ತ ಸಂಚಾಲಕರ ಬದಲು ಸದಸ್ಯರನ್ನಾಗಿ ಮಾಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯನ್ನು ಸಂಚಾಲಕರನ್ನಾಗಿ ಮಾಡಲೂ ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಸ್ಥಳದಲ್ಲೇ ದಂಡ, ಪರವಾನಗಿ ರದ್ದು: ವಿಧೇಯಕದ ಕುರಿತು ಮಾತನಾಡಿದ ವಿಪಕ್ಷ ನಾಯಕ ಆರ್‌.ಅಶೋಕ, ಬಹುರಾಷ್ಟ್ರೀಯ ಕಂಪನಿಗಳು, ಮಾಲ್‌ಗ‌ಳು ಕಾನೂನು ಪಾಲನೆ ಮಾಡುತ್ತವೆಯೇ ಎನ್ನುವ ಪ್ರಶ್ನೆ ಇದೆ. ಅವರು ನೋಟಿಸ್‌, ನ್ಯಾಯಾಲಯಗಳಿಗೂ ಹೆದರುವುದಿಲ್ಲ. ಸ್ಥಳದಲ್ಲೇ ದಂಡ ವಿಧಿಸುವ ಕಾನೂನು ತರಬೇಕು ಎಂದು ಆಗ್ರಹಿಸಿದರು.

ನಿಯಮ ರಚಿಸುವಾಗ ದಂಡ ವಿಧಿಸುವ ಹಾಗೂ ಪರವಾನಗಿ ರದ್ದುಪಡಿಸುವ ಅಂಶಗಳನ್ನೂ ಸೇರಿಸುವುದಾಗಿ ಸಚಿವ ತಂಗಡಗಿ ಭರವಸೆ ನೀಡಿದರು. ಇದಕ್ಕಾಗಿ ಜಾರಿ ದಳವನ್ನೂ ರಚಿಸಿ, ಪೊಲೀಸರನ್ನೂ ಅದರಲ್ಲಿ ಸೇರಿಸಲಾಗುತ್ತದೆ. ಕನ್ನಡ ಭಾಷೆಯ ಬಳಕೆ ಕುರಿತು ಯಾವುದೇ ವ್ಯಕ್ತಿ ದೂರು ನೀಡಲು ಕನ್ನಡ ಕಣ್ಗಾವಲು ಎಂಬ ಆಪ್‌ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Advertisement

ರಾಜ್ಯಪಾಲರು ಕನ್ನಡ ವಿರೋಧಿಯಲ್ಲ
ಈ ತಿದ್ದುಪಡಿ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಹೊರಡಿಸಲು ರಾಜ್ಯಪಾಲರಿಗೆ ಕಳುಹಿಸಿದ್ದೆವು. ಕನ್ನಡ ಭಾಷೆಯ ಬಗೆಗಿನ ಅಗೌರವದಿಂದಾಗಲಿ ಅಥವಾ ಯಾವುದೇ ಬೇರೆ ರೀತಿಯ ಭಾವನೆಯಿಂದ ಹಿಂತಿರುಗಿಸಿರುವುದಿಲ್ಲ. ಸದನದ ದಿನಾಂಕ ಘೋಷಣೆಯಾದ ಕಾರಣ ಸದನದಲ್ಲೇ ಮಂಡನೆಯಾಗಲಿ ಎಂಬ ಸದುದ್ದೇಶದಿಂದ ಹಿಂತಿರುಗಿಸಿ¨ªಾರೆ. ಆ ಬಗ್ಗೆ ತಪ್ಪು ಕಲ್ಪನೆ ಜನರಿಗೆ ಹೋಗುವುದು ಬೇಡ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯಪಾಲರ ನಡೆಯ ಬಗ್ಗೆ ಯಾವುದೇ ಆಕ್ಷೇಪ ಇಲ್ಲ. ನಾನೂ ಮಾಧ್ಯಮದವರಿಗೆ ರಾಜ್ಯಪಾಲರು ಯಾವುದೇ ಆಕ್ಷೇಪ ಅಥವಾ ವಿರೋಧ ವ್ಯಕ್ತಪಡಿಸಿ, ವಿಧೇಯಕವನ್ನು ಹಿಂತಿರುಗಿಸಿರುವುದಿಲ್ಲ. ಬದಲಾಗಿ ಸದನದ ಕಲಾಪದ ದಿನಾಂಕ ಪ್ರಕಟಣೆಯಾಗಿರುವುದರಿಂದ ಸದನದಲ್ಲೇ ಮಂಡನೆಯಾಗಿಲಿ ಎಂಬ ಸದುದ್ದೇಶದಿಂದಲೇ ವಿಧೇಯಕ ಹಿಂತಿರುಗಿಸಿದ್ದಾರೆ ಎಂದು ಹೇಳಿದ್ದೇನೆ. ಈ ಬಗ್ಗೆ ಯಾವುದೇ ಆಕ್ಷೇಪ ನಮಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಸಹಕಾರ ಸಂಸ್ಥೆಗಳಲ್ಲಿ ಮೀಸಲಾತಿ
ಬೆಂಗಳೂರು: ಪ್ರಾಥಮಿಕ ಸಹಕಾರ ಸಂಘಗಳ ಆಡಳಿತ ಮಂಡಳಿಯಲ್ಲಷ್ಟೇ ಅಲ್ಲದೆ, ಮಾಧ್ಯಮಿಕ, ಫೆಡರಲ್‌ ಮತ್ತು ಅಪೆಕ್ಸ್‌ ಸಹಕಾರ ಸಂಘ ಹಾಗೂ ಸೌಹಾರ್ದ ಸಹಕಾರಿ ಸಂಘಗಳ ಆಡಳಿತ ಮಂಡಳಿಗಳಲ್ಲೂ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿತ್ತು. ಇದಕ್ಕೆ ಕಾನೂನಿನ ರೂಪ ನೀಡುವ ಸಲುವಾಗಿ ಕರ್ನಾಟಕ ಸಹಕಾರ (ತಿದ್ದುಪಡಿ) ವಿಧೇಯಕ ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ-2024ನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next