Advertisement

ಪಸಿಹಾ ಸಾಗರ ನಗರಸಭೆ ಅಧ್ಯಕ್ಷೆ

02:39 PM Sep 05, 2017 | |

ಸಾಗರ: ತೀವ್ರ ಕುತೂಹಲ ಕೆರಳಿಸಿದ್ದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ ತನ್ನ ಮರ್ಯಾದೆ ಉಳಿಸಿಕೊಂಡಿದ್ದು, ಅಧ್ಯಕ್ಷರಾಗಿ ಬೀಬಿ ಪಸಿಹಾ ಹಾಗೂ ಉಪಾಧ್ಯಕ್ಷರಾಗಿ ಸರಸ್ವತಿ ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ನಾಗರತ್ನ ಕಣಕ್ಕೆ ಇಳಿದಿದ್ದು, ಅವರು 5 ಮತವನ್ನು ಪಡೆದರೆ ಪಸಿಹಾ 26 ಮತವನ್ನು ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಸರಸ್ವತಿ ಕುಮಾರಸ್ವಾಮಿ ಅವಿರೋಧವಾಗಿ ಆಯ್ಕೆಯಾದರು. 

Advertisement

ಸಚಿವರ ಮಾರ್ಗದರ್ಶನದಲ್ಲಿ ಉತ್ತಮ ಕೆಲಸ: ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಸಿಹಾ ಸಚಿವ ಕಾಗೋಡು ತಿಮ್ಮಪ್ಪ ಅವರು ಅಲ್ಪಸಂಖ್ಯಾತ ಜನಾಂಗದವಳಾದ ನನಗೆ ಉನ್ನತ ಸ್ಥಾನವನ್ನು ನೀಡಿದ್ದಾರೆ. ಕಾಂಗ್ರೆಸ್‌ನ ಎಲ್ಲ ಮುಖಂಡರು ನಾನು ಅಧ್ಯಕ್ಷರಾಗುವಲ್ಲಿ ಸಹಕಾರ ನೀಡಿದ್ದು, ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಸಚಿವರು ಹಾಗೂ ಎಲ್ಲರ ಮಾರ್ಗದರ್ಶನದಲ್ಲಿ ಉತ್ತಮ ಕೆಲಸ ನಿರ್ವಹಣೆ ಮಾಡುವುದು ನನ್ನ ಮುಂದಿರುವ ಪ್ರಮುಖ ಗುರಿಯಾಗಿದೆ ಎಂದರು. 

ನಗರ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಯಿಂದ ಹಾಳಾಗಿರುವ ರಸ್ತೆಗಳನ್ನು ಆದ್ಯತೆ ಮೇಲೆ ಅಭಿವೃದ್ಧಿಪಡಿಸಲಾಗುತ್ತದೆ. ಈಗಾಗಲೇ ನಗರೋತ್ಥಾನ ಯೋಜನೆಯಡಿ 28 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ ಹೆಚ್ಚು ಪಾಲನ್ನು ರಸ್ತೆ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ. ಇದರ ಜೊತೆಗೆ ಸ್ವತ್ಛ ಹಾಗೂ ಸುಂದರ ಸಾಗರ ನಿರ್ಮಾಣ ನನ್ನ ಪ್ರಮುಖ ಗುರಿಯಾಗಿದೆ. ಆಶ್ರಯ ನಿವೇಶನ ಹಂಚಿಕೆಯಲ್ಲಿ ಆದಷ್ಟು ಶೀಘ್ರ ಮತ್ತೂಂದು ಕಂತಿನಲ್ಲಿ 499 ನಿವೇಶನ ಹಂಚುವ ಗುರಿಯಿದೆ. ಈ ಬಾರಿ ಈ ಎಲ್ಲರಿಗೂ ನಿವೇಶನದ ಜೊತೆಗೆ ಮನೆಯನ್ನೂ ಕೂಡ ಮಂಜೂರು ಮಾಡಿಕೊಡಲಾಗುವುದು. ವಿಧಾನಸಭಾ ಚುನಾವಣೆ ಸನ್ನಿಹಿತವಾಗಿರುವಾಗ ನಾವು ಇನ್ನಷ್ಟು ಉತ್ತಮ ಆಡಳಿತ ನೀಡಲಿದ್ದೇವೆ ಎಂದರು. ಆಶ್ರಯ ನಿವೇಶನ ಹಂಚಿಕೆ ಹಿಂದಿನ ಬಾರಿ ಹೆಚ್ಚು ಪಾರದರ್ಶಕವಾಗಿ ನಡೆದಿದೆ. ಎಲ್ಲ ಕೌನ್ಸಿಲರ್‌ಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿತ್ತು. ಇಂತಹ ಸಂದರ್ಭದಲ್ಲಿ ಶೇ. ಒಂದು ಎರಡರಷ್ಟು ವ್ಯತ್ಯಯ ಸಾಮಾನ್ಯ. ಈ ಬಾರಿ ಆ ವ್ಯತ್ಯಯವೂ ಇಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಸರಸ್ವತಿ ಕುಮಾರಸ್ವಾಮಿ ಮಾತನಾಡಿ, ನಗರವ್ಯಾಪ್ತಿಯ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ನಮ್ಮ ಆಡಳಿತಾವ ಧಿಯಲ್ಲಿ ಹೆಚ್ಚಿನ ಒತ್ತು ನೀಡುತ್ತೇವೆ. ಸಚಿವರು ಹಾಗೂ ಕಾಂಗ್ರೆಸ್‌ ಮುಖಂಡರು ನಮ್ಮ ಮೇಲೆ ವಿಶ್ವಾಸ ಇರಿಸಿ ಸ್ಥಾನವನ್ನು ನೀಡಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸಲು ಶ್ರಮಿಸುವುದಾಗಿ ಹೇಳಿದರು.ಕಾಂಗ್ರೆಸ್‌ ನಗರ ಅಧ್ಯಕ್ಷ ಮಕೂºಲ್‌ ಅಹ್ಮದ್‌, ಎಪಿಎಂಸಿ ಅಧ್ಯಕ್ಷ ಕೆ. ಹೊಳೆಯಪ್ಪ, ಸದಸ್ಯರಾದ ಎನ್‌. ಲಲಿತಮ್ಮ, ವೀಣಾ ಪರಮೇಶ್ವರ್‌, ಫ್ರಾನ್ಸಿಸ್‌ ಗೋಮ್ಸ್‌, ಜಿ.ಕೆ. ಭೈರಪ್ಪ, ಎನ್‌. ಶ್ರೀನಾಥ್‌, ಪೌರಾಯುಕ್ತ ಎನ್‌. ರಾಜು, ಪ್ರಮುಖರಾದ ಮಹ್ಮದ್‌ ಜಕ್ರಿಯ, ಎಲ್‌. ಚಂದ್ರಪ್ಪ, ವೆಂಕಟೇಶ್‌ ಗಲ್ಲಿ ಇನ್ನಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next