Advertisement

ಅದಮಾರು ಶ್ರೀಗಳ ಪರ್ಯಾಯ ಆರಂಭ

10:07 AM Jan 20, 2020 | mahesh |

ಅದಮಾರು ಹಿರಿಯ ಶ್ರೀಗಳಿಂದ ಗುರು ಪರಂಪರೆ ಅನುಸರಣೆ ಮೊದಲು ತಾನು ಕುಳಿತು ಶಿಷ್ಯನಿಗೆ ಪಟ್ಟ ಹಸ್ತಾಂತರ

Advertisement

ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಉತ್ಸವದಲ್ಲಿ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶನಿವಾರ ಮುಂಜಾವ ಶ್ರೀಕೃಷ್ಣ ದೇವರ ಪೂಜಾಕೈಂಕರ್ಯದ ಸಂಕಲ್ಪ ಮಾಡಿದರು. 1522ರಲ್ಲಿ ಎರಡು ವರ್ಷಗಳ ಪರ್ಯಾಯ ಪೂಜಾ ಕ್ರಮ ಆರಂಭವಾದ ಬಳಿಕ ಈಗ 250ನೆಯ ಪರ್ಯಾಯ ಪೂಜಾವಧಿಯ ಅಧಿಕಾರ ಹಸ್ತಾಂತರ ಮೊದಲಾದ ಧಾರ್ಮಿಕ ವಿಧಿಗಳು ನಡೆದವು.

ಶುಕ್ರವಾರ ಮಧ್ಯರಾತ್ರಿ ಬಳಿಕ ಕಾಪು ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಬಂದ ಶ್ರೀ ಈಶಪ್ರಿಯ ತೀರ್ಥರು ಉಡುಪಿ ಜೋಡುಕಟ್ಟೆ ಮಂಟಪದಲ್ಲಿ ಪಟ್ಟದ ದೇವರ ಪೂಜೆ ನಡೆಸಿದರು. ಬಳಿಕ ಪರ್ಯಾಯ ಮೆರವಣಿಗೆ ಆರಂಭಗೊಂಡಿತು. ಇದರ ಜತೆಗೆ ವಿವಿಧ ಮಠಾಧೀಶರೂ ಮೆರವಣಿಗೆಯಲ್ಲಿ ಸಾಗಿಬಂದರು. ಮೆರವಣಿಗೆ ಶನಿವಾರ ಬೆಳಗ್ಗೆ ರಥಬೀದಿಯನ್ನು ತಲುಪಿದಾಗ ಮೇನೆಯಿಂದ ಇಳಿದ ಶ್ರೀಪಾದರು ಹಾಸುಗಂಬಳಿಯ ಮೇಲೆ ನಡೆದುಕೊಂಡು ಬಂದು ಕನಕನಕಿಂಡಿಯಲ್ಲಿ ಶ್ರೀಕೃಷ್ಣ ದೇವರ ದರ್ಶನ ಪಡೆದರು. ಅಲ್ಲಿ ಶಿಬರೂರು ವಾಸುದೇವ ಆಚಾರ್ಯರು ಎರಡು ವರ್ಷಗಳ ಪರ್ಯಾಯ ಪೂಜಾ ವ್ರತವನ್ನು ಕೈಗೊಳ್ಳುವ ಸಂಕಲ್ಪವನ್ನು ಸ್ವಾಮೀಜಿಯವರಿಂದ ಮಾಡಿಸಿದರು. ನವಗ್ರಹದಾನಗಳನ್ನು ನೀಡಲಾಯಿತು. ಅಲ್ಲಿಂದ ಶ್ರೀಪಾದರು ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ದೇಗುಲಗಳಿಗೆ ತೆರಳಿ ದೇವರ ದರ್ಶನ ಪಡೆದರು. ಅನಂತೇಶ್ವರ ದೇವಸ್ಥಾನದೊಳಗೆ ಇರುವ ಮಧ್ವರು ಕೊನೆಯದಾಗಿ ಕಾಣಿಸಿಕೊಂಡ ಸ್ಥಳದಲ್ಲಿ ಪ್ರಾರ್ಥಿಸಿದರು. ಶ್ರೀಪಾದರ ದೇವರ ದರ್ಶನದ ವೇಳೆ ಚಂದ್ರಮೌಳೀಶ್ವರ ಮತ್ತು ಅನಂತೇಶ್ವರನ ಸನ್ನಿಧಿಯಲ್ಲಿ ಆಯಾ ದೇವತಾ ಧ್ಯಾನಶ್ಲೋಕಗಳನ್ನು ಅರ್ಚಕರು ಪಠಿಸಿದರು.

ಪಲಿಮಾರು ಶ್ರೀಗಳಿಂದ ನೈರ್ಮಾಲ್ಯ ವಿಸರ್ಜನ ಪೂಜೆ
ಶ್ರೀಕೃಷ್ಣ ಮಠದಲ್ಲಿ ನಿರ್ಗಮನ ಪರ್ಯಾಯ ಪೀಠಾಧೀಶ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಶುಕ್ರವಾರ ಮಧ್ಯರಾತ್ರಿಯಿಂದಲೇ ಪರ್ಯಾಯ ಪೀಠದಲ್ಲಿ ಕುಳಿತುಕೊಂಡು ಭಕ್ತರಿಗೆ ಪ್ರಸಾದ ವಿತರಿಸಿ ಪ್ರಾತಃಕಾಲ ಸ್ನಾನ ಮಾಡಿ ಶ್ರೀಕೃಷ್ಣನಿಗೆ ನೈರ್ಮಾಲ್ಯ ವಿಸರ್ಜನೆ ಪೂಜೆ ನಡೆಸಿದರು. ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥರೂ ಉಪಸ್ಥಿತರಿದ್ದು, ಪೂಜೆಗೆ ಸಹಕರಿಸಿದರು.

ಅದಮಾರು ಕಿರಿಯ ಶ್ರೀಗಳಿಗೆ ಸ್ವಾಗತ
ಶ್ರೀ ಈಶಪ್ರಿಯತೀರ್ಥರು ಶ್ರೀಕೃಷ್ಣ ಮಠವನ್ನು ಪ್ರವೇಶಿಸುವಾಗ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಇದಿರುಗೊಂಡು ಮಠದೊಳಗೆ ಕರೆದೊಯ್ದರು. ಮಧ್ವಸರೋವರದಲ್ಲಿ ಪಾದಪ್ರಕ್ಷಾಲನ ನಡೆಸಿದ ಬಳಿಕ ದೇವರ ದರ್ಶನವನ್ನು ಮಾಡಿಸಿದರು. ಶ್ರೀಕೃಷ್ಣಮಠದ ಗರ್ಭಗುಡಿ ಹೊರಗೆ ಇರುವ ಆಚಾರ್ಯ ಮಧ್ವರ ಪ್ರತಿಮೆ ಎದುರು ಪಲಿಮಾರು ಮಠಾಧೀಶರು ಅಕ್ಷಯಪಾತ್ರೆ, ಬೀಗದ ಕೀಲಿಗಳನ್ನು ಅದಮಾರು ಮಠದ ಹಿರಿಯ ಮತ್ತು ಕಿರಿಯ ಶ್ರೀಗಳಿಗೆ ಹಸ್ತಾಂತರಿಸಿದರು.

Advertisement

ನೈರ್ಮಾಲ್ಯ ವಿಸರ್ಜನೆ ಪೂಜೆಯ ಬಳಿಕ ಉಷಃಕಾಲ ಪೂಜೆ, ಪಂಚಾಮೃತ ಅಭಿಷೇಕ, ಕಲಶ ಪೂಜೆಯೇ ಮೊದಲಾದ ವಿಧಿಗಳನ್ನು ಇತರ ಮಠಾಧೀಶರು ನಡೆಸಿದರೆ, ಪರ್ಯಾಯ ಪೀಠಸ್ಥ ಶ್ರೀ ಈಶಪ್ರಿಯತೀರ್ಥರು ಅರ್ಚನೆ, ಮಹಾಪೂಜೆಗಳನ್ನು ಪ್ರಥಮ ಬಾರಿಗೆ ನಡೆಸಿದರು. ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.

ಸರ್ವಜ್ಞ ಪೀಠಾರೋಹಣ
ಸರ್ವಜ್ಞ ಪೀಠಾರೋಹಣ ಮಾಡುವ ಸಂದರ್ಭದಲ್ಲಿ ಮೊದಲಿಗೆ ಪಲಿಮಾರು ಶ್ರೀಪಾದರು ಅದಮಾರು ಹಿರಿಯ ಶ್ರೀಗಳನ್ನು ಪೀಠದಲ್ಲಿ ಕುಳ್ಳಿರಿಸಿದರು. ಬಳಿಕ ಹಿರಿಯ ಶ್ರೀಗಳು ತಮ್ಮ ಪಟ್ಟಶಿಷ್ಯ ಶ್ರೀ ಈಶಪ್ರಿಯತೀರ್ಥರನ್ನು ಪೀಠದಲ್ಲಿ ಕುಳ್ಳಿರಿಸಿದರು. ಅಲ್ಲಿಂದ ನೇರವಾಗಿ ಬಡಗುಮಾಳಿಗೆಯಲ್ಲಿ ನಿರ್ಮಿಸಲಾದ ಅರಳು ಗದ್ದಿಗೆಯಲ್ಲಿ ವಿವಿಧ ಮಠಾಧೀಶರು ಅಲಂಕೃತರಾದರು. ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು,

ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು, ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು ಮತ್ತು ಶ್ರೀ ವಿದ್ಯಾರಾಜೇಶ್ವರತೀರ್ಥರಿಗೆ ಶ್ರೀ ಈಶಪ್ರಿಯತೀರ್ಥರು ಗಂಧಾದಿ ಉಪಚಾರಗಳನ್ನು ಮಾಡಿದರು. ಇತರ ಮಠಾಧೀಶರು ಶ್ರೀ ಈಶಪ್ರಿಯತೀರ್ಥರಿಗೆ ಪಟ್ಟದ ಕಾಣಿಕೆಯನ್ನು ಸಮರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next