ಶ್ರೀಕೃಷ್ಣ ಮಥುರಾ ಪಟ್ಟಣದಲ್ಲಿ ಜನಿಸಿದ. ಶರೀರವೇ ಮಥುರಾ ಪಟ್ಟಣ. ಶರೀರ ಇದ್ದರೆ ಎಲ್ಲವೂ ಇರುತ್ತದೆ. ಶರೀರದಲ್ಲಿ ದೇವರು ಜನ್ಮತಾಳಲು ಮಥುರಾ ಪಟ್ಟಣವನ್ನು ಬಿಟ್ಟುಕೊಡಬೇಕಷ್ಟೆ. ಹಾಗೆ ಮಾಡಿದರೆ ಆತ ನಮ್ಮ ಜತೆಗೆ ಬರುತ್ತಾನೆ.
ದೇವಕೀ ಎಂದರೆ ದೇವರನ್ನು ಕರೆಯುವವರು. ಆಕೆ ಯಾವಾಗಲೂ ಕರೆಯುತ್ತ ಇರುತ್ತಿದ್ದಳು. ಆಕೆಗೆ ಎಲ್ಲವೂ ಸಿಕ್ಕಿತ್ತು, ದೇವರು ಮಾತ್ರ ಸಿಕ್ಕಿರಲಿಲ್ಲ. ಅತಿಥಿಗಳು ನಮ್ಮ ಮನೆಗೆ ಬರಬೇಕಾದರೆ ಒಂದು ಸಲ ಕರೆದರೆ ಬರುತ್ತಾರಾ? ಮಂತ್ರಿ, ಮುಖ್ಯಮಂತ್ರಿ, ಪ್ರಧಾನಿಗಳು ಬರಬೇಕಾದರೆ ಅನೇಕ ಬಾರಿ ಕರೆಯಬೇಕು. ನಮ್ಮ ಪ್ರಯತ್ನ ನಿಲ್ಲಿಸಬಾರದು.
ಲೌಕಿಕ ವ್ಯಕ್ತಿಗಳಿಗೇ ಹೀಗಿರುವಾಗ ಭಗವಂತನನ್ನು ಕರೆಯುತ್ತಿರಲೇಬೇಕು. ದೇವಕಿ ಜತೆ ವಸುದೇವನೂ ಬೇಕು. ವಸು=ಸಂಪತ್ತು. ಶುದ್ಧವಾದ ಸಂಪತ್ತು. ಮನಸ್ಸು ವಸು ಆಗಬೇಕು. ಅದಕ್ಕಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ. ಎಲ್ಲರೂ ಪ್ರೀತಿಯನ್ನು ಬಯಸುತ್ತಾರೆ.
ಪ್ರೀತಿಯಿಂದ ಕೊಟ್ಟರೆ ಸಣ್ಣ ವಸ್ತುವೂ ದೊಡ್ಡದಾಗುತ್ತದೆ. ಪ್ರೀತಿ ಇಲ್ಲದಿದ್ದರೆ ದೊಡ್ಡ ವಸ್ತುವೂ ಸಣ್ಣದಾಗುತ್ತದೆ. ವಸುದೇವನಲ್ಲಿದ್ದದ್ದು ನಿಷ್ಕಲ್ಮಶ ಮನಸ್ಸು. ದೇವರ ಮೇಲೆ ಅಪಾರ ಭಕ್ತಿ ಇತ್ತು. ಶುದ್ಧ ಮನಸ್ಸು ಇತ್ತು. ಬೇರೆ ವಸ್ತುಗಳ ಬಗ್ಗೆ ಅನಪೇಕ್ಷೆ ಇತ್ತು. ವಸುದೇವ ದೇವಕಿಯರ ಕರೆಗೆ ಅಷ್ಟಮಿ ಮಧ್ಯರಾತ್ರಿ ಭಗವಂತ ಬಂದ. ಎಲ್ಲ ಪಾಪಗಳನ್ನು ನಾಶ ಮಾಡುವ ಜಯಂತಿಯಂದು ಬರುತ್ತಾನೆ.
ಶ್ರೀಕೃಷ್ಣ ಭೂಮಿಯಲ್ಲಿ ಅವತರಿಸಿದ ಈ ಸಂದರ್ಭ ಮಳೆ, ಬೆಳೆ ಸಮಸ್ಯೆಗಳು ನೀಗಲಿ. ಎಲ್ಲರೂ ಆನಂದ ಪಡಲಿ. ರೈತರು ಸಮೃದ್ಧರಾಗಲಿ, ಲೋಕಃ ಸಮಸ್ತಾ ಸುಖೀನೋ ಭವಂತು. ಎಲ್ಲರೂ ಶ್ರೀ ಕೃಷ್ಣಾಯ ನಮಃ ಎಂದು ನೂರು ಬಾರಿ ನಿತ್ಯವೂ ಹೇಳಿ. ಎಲ್ಲರ ಮನಸ್ಸನ್ನು ಆತ ಪ್ರವೇಶ ಮಾಡಿ ಭಾರತ ವಿಶ್ವಗುರುವಾಗುವಂತೆ ಆಗಲಿ ಎಂದು ಹಾರೈಸುತ್ತೇವೆ.
– ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಪಲಿಮಾರು ಮಠ, ಶ್ರೀಕೃಷ್ಣಮಠ ಉಡುಪಿ
ಅರಿಷಡ್ವೈರಿ ಸಂಹಾರಕ್ಕೆ ಶ್ರೀಕೃಷ್ಣಾಗಮನ
ವಸುದೇವ ದೇವಕಿಯರ ಸಂಯೋಗದಿಂದ ಶ್ರೀಕೃಷ್ಣ ಅವತರಿಸುತ್ತಾನೆ ಮತ್ತು ದುಷ್ಟ ಕಂಸಾದಿಗಳನ್ನು ಸಂಹರಿಸುತ್ತಾನೆ. ಇದರರ್ಥ ಶ್ರೀಕೃಷ್ಣ ನಮ್ಮೊಳಗಿರುವ ಆರು ಬಗೆಯ ವೈರಿಗಳನ್ನು (ಅರಿಷಡ್ವೈರಿ) ಸಂಹರಿಸುತ್ತಾನೆ. ಹೀಗಾದರೆ ಮಾತ್ರ ನಮಗೆ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಶ್ರೀಕೃಷ್ಣ ಜನ್ಮಾಷ್ಟಮಿ ಪರ್ವಕಾಲದಲ್ಲಿ
ನಮ್ಮೊಳಗೆ ಅವತರಿಸುವಂತೆ ವಿಶೇಷ ಪ್ರಾರ್ಥನೆ ಮಾಡಬೇಕು. ದೇಶ, ಸಮಾಜದಲ್ಲಿರುವ ಕಂಸಾದಿಗಳನ್ನು ಸಂಹರಿಸಬೇಕು.
– ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಕಿರಿಯ ಯತಿ, ಪರ್ಯಾಯ ಶ್ರೀ ಪಲಿಮಾರು ಮಠ, ಶ್ರೀಕೃಷ್ಣಮಠ, ಉಡುಪಿ