Advertisement
ಆ ಕೊಲೆಯ ರಹಸ್ಯ ಎಂಥದ್ದು, ಅದರ ಹಿಂದೆ ಯಾರಿದ್ದಾರೆ ಅನ್ನೋದೇ ಚಿತ್ರದ ಹೈಲೈಟ್. ಇಡೀ ಚಿತ್ರ ಒಂದು ಕೊಲೆಯಿಂದ ಆರಂಭಗೊಂಡು, ಕೊಲೆಗಾರನ ಹಿಡಿಯುವಲ್ಲಿಗೆ ಅಂತ್ಯವಾಗುತ್ತೆ. ಆ ನಡುವೆ ನಡೆಯುವ ತನಿಖೆ ಚಿತ್ರದ ಸಣ್ಣ ಕುತೂಹಲಕ್ಕೆ ಕಾರಣವಾಗುತ್ತೆ. ಹಾಗೆ ನೋಡಿದರೆ, ಕನ್ನಡದಲ್ಲಿ ಈ ರೀತಿಯ ಸಾಕಷ್ಟು ಕಥೆಗಳು ಬಂದು ಹೋಗಿವೆಯಾದರೂ, ಇಲ್ಲಿರುವ ನಿರೂಪಣೆ ಮತ್ತು ಚಿತ್ರಕಥೆಯ ಬಿಗಿಹಿಡಿತ ಎಲ್ಲೂ ಗೊಂದಲ ಸೃಷ್ಟಿಸದೆ, ಚಿತ್ರ ಸಾಂಗೋಪವಾಗಿ ಸಾಗುತ್ತದೆ.
Related Articles
Advertisement
ಶೀರ್ಷಿಕೆಗೆ ತಕ್ಕಂತೆ ಇಲ್ಲಿ ಮಗಳ ಮೇಲೆ ಅತ್ಯಂತ ಕಾಳಜಿ ತೋರುವ ಅಮ್ಮ ಇದ್ದಾಳೆ, ಅಮ್ಮನ ಮೇಲೂ ಅಷ್ಟೇ ಪ್ರೀತಿ ತೋರುವ ಮಗಳಿದ್ದಾಳೆ. ಇಬ್ಬರ ನಡುವೆ ಮುನಿಸು, ಜಗಳ, ಅಕ್ಕರೆ, ಮಮತೆ ಎಲ್ಲವೂ ಇದೆ. ಸಿನಿಮಾದಲ್ಲಿ ಪಾರ್ವತಮ್ಮನ ಮಗಳು ಬರೀ ತನಿಖೆ ನಡೆಸಲ್ಲ. ಅವಳಲ್ಲೂ ಅನುಕಂಪ, ಭಾವುಕತೆ, ಗೆಳೆತನ, ಆಕ್ರೋಶ, ನೈಜ ಹೊಡೆದಾಟ ಮತ್ತು ಚಿಗುರೊಡೆಯುವ ಪ್ರೀತಿ, ಹಾಡು-ಗೀಡು ಇತ್ಯಾದಿ ವಿಷಯಗಳೂ ಸುಳಿದಾಡುತ್ತವೆ.
ಅವೆಲ್ಲವೂ ನೋಡುಗರನ್ನು ಕೊಂಚ ರಿಲ್ಯಾಕ್ಸ್ ಮೂಡ್‌ಗೆ ತಳ್ಳುತ್ತವೆ. ಅಲ್ಲಲ್ಲಿ ಬೆರಳೆಣಿಕೆ ತಪ್ಪುಗಳಿವೆಯಾದರೂ, ಪಾರ್ವತಮ್ಮನ ಮಗಳ ತನಿಖೆ ಅವೆಲ್ಲವನ್ನೂ ಮರೆಮಾಚಿಸುತ್ತದೆ. ಆ ತನಿಖೆ ಹೇಗಿರುತ್ತೆ ಎಂಬ ಕುತೂಹಲವಿದ್ದರೆ, ಪಾರ್ವತಮ್ಮ ಮಗಳ ಸಾಹಸಗಾಥೆ ನೋಡಬಹುದು. ಕಥೆ ಬಗ್ಗೆ ಹೇಳುವುದಾದರೆ, ಆರಂಭದಲ್ಲಿ ಡಾಕ್ಟರ್ ಅಹಲ್ಯಾಳ ಶವ ರಿಂಗ್ ರಸ್ತೆಯಲ್ಲಿ ಕಾಣಸಿಗುತ್ತೆ. ಅದು ಆತ್ಮಹತ್ಯೆಯೂ ಹೌದು, ಕೊಲೆಯೂ ಹೌದು ಎಂಬ ವರದಿಯೂ ಸಿಗುತ್ತೆ.
ತನಿಖೆ ಚುರುಕಿಲ್ಲದ ಕಾರಣ, ಆ ಕೇಸಿನ ಒತ್ತಡ ಹೆಚ್ಚಾಗಿ ಗೃಹಮಂತ್ರಿ, ಸಿಐಡಿಗೆ ಆ ಕೇಸನ್ನು ತನಿಖೆ ನಡೆಸುವಂತೆ ಆದೇಶಿಸುತ್ತಾರೆ. ಆ ಕೇಸು ತನಿಖಾಧಿಕಾರಿ ವೈದೇಹಿ (ಹರಿಪ್ರಿಯಾ) ಕೈ ಸೇರುತ್ತೆ, ಅದು ಸಹಜ ಸಾವೋ, ಕೊಲೆಯೋ, ಆತ್ಮಹತ್ಯೆಯೋ ಎಂಬ ಗೊಂದಲದಲ್ಲೇ, ಆಕೆ ಎಲ್ಲಾ ಆ್ಯಂಗಲ್‌ನಲ್ಲೂ ತನಿಖೆ ನಡೆಸುತ್ತಾಳೆ. ಕೊನೆಗೆ ಅದು ಕೊಲೆ ಎಂಬ ಸುಳಿವು ಸಿಗುತ್ತೆ. ಆ ಸುಳಿವು ಹಿಡಿದು ಹೊರಟ ಆ ತನಿಖಾಧಿಕಾರಿಗಷ್ಟೇ ಅಲ್ಲ, ನೋಡುಗರಿಗೂ ಒಂದು ಅಚ್ಚರಿ ವಿಷಯ ಗೊತ್ತಾಗುತ್ತೆ.
ಅಷ್ಟಕ್ಕೂ ಆ ಕೊಲೆ ಮಾಡಿದ್ದು ಯಾರು ಅನ್ನೋದೇ ಚಿತ್ರದ ಹೈಲೈಟ್. ಹರಿಪ್ರಿಯಾ ಅವರ 25 ನೇ ಚಿತ್ರವಾದ್ದರಿಂದ ವಿಶೇಷ ಪಾತ್ರವೇ ಸಿಕ್ಕಿದೆ. ಆದರೆ, ನಟನೆಯಲ್ಲಿ ಇನ್ನಷ್ಟು ಫೋರ್ಸ್ ಬೇಕಿತ್ತು. ಗ್ಲಾಮರ್‌ಗಷ್ಟೇ ಸೀಮಿತವಾಗಿದ್ದ ಹರಿಪ್ರಿಯಾ ಅವರನ್ನು ಇಲ್ಲಿ ಟಾಮ್‌ಬಾಯ್ ಆಗಿ ಕಾಣಬಹುದು. ಕಿಡಿಗೇಡಿಗಳನ್ನು ಚಚ್ಚುವ ದೃಶ್ಯದಲ್ಲಿನ್ನೂ ಖದರ್ ತೋರಿಸಬಹುದಿತ್ತು. ಆದರೂ, ಸಿಕ್ಕ ಪಾತ್ರವನ್ನು ತೂಗಿಸಿದ್ದಾರೆ.
ಸುಮಲತಾ ಅಂಬರೀಶ್ ಇಲ್ಲಿ ಎಲ್ಲರಿಗೂ ಇಷ್ಟ ಆಗುವ ಅಮ್ಮನಾಗಿ ಗಮನಸೆಳೆಯುತ್ತಾರೆ. ಸೂರಜ್, ಪ್ರಭು, “ತರಂಗ’ ವಿಶ್ವ, ರಾಘವೇಂದ್ರ, ಶ್ರೀಧರ್ ಇತರರು ಪಾತ್ರಗಳಿಗೆ ಮೋಸ ಮಾಡಿಲ್ಲ. ಮಿಧುನ್ ಮುಕುಂದನ್ ಸಂಗೀತದ “ಜೀವಕ್ಕಿಲ್ಲಿ ಜೀವ ಬೇಟೆ..’ ಹಾಡು ಗುನುಗುವಂತಿದೆ. ಹಿನ್ನೆಲೆ ಸಂಗೀತವೂ ಮಾತಾಡುತ್ತದೆ. ಅರೂಲ್ ಕೆ.ಸೋಮಸುಂದರಂ ಕ್ಯಾಮೆರಾ ಕೈಚಳಕ ಪಾರ್ವತಮ್ಮ ಮಗಳ ಸೌಂದರ್ಯವನ್ನು ಹೆಚ್ಚಿಸಿದೆ.
ಚಿತ್ರ: ಡಾಟರ್ ಆಫ್ ಪಾರ್ವತಮ್ಮನಿರ್ಮಾಣ: ದಿಶ ಎಂಟರ್‌ಟೈನ್‌ಮೆಂಟ್ಸ್
ನಿರ್ದೇಶನ: ಶಂಕರ್ .ಜೆ
ತಾರಾಗಣ: ಹರಿಪ್ರಿಯಾ, ಸುಮಲತಾ ಅಂಬರೀಶ್, ಸೂರಜ್, ಪ್ರಭು, ವಿಶ್ವ, ರಾಘವೇಂದ್ರ, ಸುಧಿ, ಶ್ರೀಧರ್ ಇತರರು. * ವಿಜಯ್ ಭರಮಸಾಗರ