ಗಂಗಾವತಿ: ಯಾರ ಮೇಲಿನ ಸೇಡಿಗಾಗಿ ಪ್ರಾದೇಶಿಕ ಪಕ್ಷ ಸ್ಥಾಪಿಸಿಲ್ಲ, ಅಷ್ಟು ಸಮಯವೂ ನನಗಿಲ್ಲ. ಕಲ್ಯಾಣ ಕರ್ನಾಟಕವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವುದೇ ತಮ್ಮ ಉದ್ದೇಶ ಎಂದು ಮಾಜಿ ಸಚಿವ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸಂಸ್ಥಾಪಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ಇತಿಹಾಸ ಪ್ರಸಿದ್ಧ ಆನೆಗೊಂದಿ-ಪಂಪಾ ಸರೋವರದಲ್ಲಿ ಮಂಗಳವಾರ ಪೂಜೆ ಸಲ್ಲಿಸಿ 2023ರ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಚಾರ ರಥಯಾತ್ರೆಗೆ ಕುಟುಂಬ ಸಮೇತರಾಗಿ ಚಾಲನೆ ನೀಡಿ ತೆರೆದ ವಾಹನದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.
2008ರಲ್ಲಿ ಹಿರಿಯರಾದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಬಹುಮತ ಬರದಿದ್ದರೂ, ಪಕ್ಷೇತರರ ನೆರವಿನಿಂದ ಸರಕಾರ ರಚನೆ ಮಾಡಿಸಿದೆ. ಅನಂತರ ರಾಜಕೀಯ ಸೇಡಿಗಾಗಿ ಹಲವು ಪ್ರಕರಣಗಳಲ್ಲಿ ತಮ್ಮನ್ನು ಸಿಲುಕಿಸಲಾಯಿತು. ಯಾರ ಮನೆಯನ್ನೂ ಕೊಳ್ಳೆ ಹೊಡೆದಿಲ್ಲ. ಯಾರ ಜೇಬಿನಿಂದಲೂ ಹಣ ಕದ್ದಿಲ್ಲ. ಸ್ವಂತ ಶಕ್ತಿಯಿಂದ ನ್ಯಾಯಯುತ ಮಾರ್ಗದಲ್ಲಿ ದುಡಿದು ಹಣ ಸಂಪಾದನೆ ಮಾಡಿದ್ದೇನೆ. ಆದರೂ ಇತ್ತೀಚೆಗೆ ಆಸ್ತಿ ಮುಟ್ಟುಗೋಲು, ಹಣ ಜಪ್ತಿ ಹೀಗೆ ಹಲವು ಸಂಗತಿಗಳು ಹರಿದಾಡುತ್ತಿದ್ದು, ಇದಕ್ಕೆ ನಾನು ಬಗ್ಗಲ್ಲ, ಜಗ್ಗಲ್ಲ. ನಾನು ಗಂಗಾವತಿಯಿಂದ, ಪತ್ನಿ ಅರುಣಾಲಕ್ಷ್ಮೀ ಬಳ್ಳಾರಿ ನಗರದಿಂದ ವಿಧಾನಸಭೆಗೆ ಸ್ಪರ್ಧೆ ಮಾಡಲಿದ್ದಾರೆ.
ರಾಜ್ಯದ 30-40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲು ಮುಂದೆ ಬಂದಿದ್ದು, ಎಲ್ಲ ಹಿರಿಯರು, ಪಕ್ಷದ ಮುಖಂಡರು, ಕಾರ್ಯಕರ್ತರ ಜತೆ ಚಿಂತನ-ಮಂಥನ ನಡೆಸಿ ಎಲ್ಲ ರಾಜಕೀಯ ಪಕ್ಷಗಳಿಗಿಂತಲೂ ಮುನ್ನವೇ ಅಭ್ಯರ್ಥಿಗಳ ಘೋಷಣೆ ಮಾಡಲಾಗುತ್ತದೆ ಎಂದರು.
ಪ್ರಾದೇಶಿಕ ಪಕ್ಷಗಳು ಯಶಸ್ಸು ಕಾಣಲ್ಲ. ರೆಡ್ಡಿ ಪುನಃ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ವಿರೋಧಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಮುಂದೆ ಇಟ್ಟ ಹೆಜ್ಜೆಯನ್ನು ರೆಡ್ಡಿ ಜೀವನದಲ್ಲಿ ಹಿಂದೆ ಇಟ್ಟಿಲ್ಲ. ಸ್ವಾಭಿಮಾನಕ್ಕೆ ಹೆಚ್ಚು ಬೆಲೆ ಕೊಡುವ ವ್ಯಕ್ತಿಯಾಗಿದ್ದೇನೆ ಎಂದು ಹೇಳಿದರು.
ಸಹೋದರನಿಗೆ ಸವಾಲ್
ಗಾಲಿ ಜನಾರ್ದನ ರೆಡ್ಡಿ ಸಹೋದರ, ಬಿಜೆಪಿ ಮುಖಂಡ ಸೋಮಶೇಖರ ರೆಡ್ಡಿ ಬಳ್ಳಾರಿ ನಗರ ಮತಕ್ಷೇತ್ರದ ಹಾಲಿ ಶಾಸಕ. ಈಗ ಅವರ ವಿರುದ್ಧ ಪತ್ನಿ ಅರುಣಾಲಕ್ಷ್ಮೀ ಅವರನ್ನು ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ರೆಡ್ಡಿ ಸಹೋದರನಿಗೇ ಸವಾಲು ಹಾಕಿದ್ದಾರೆ.