Advertisement
ನಿಗಮ ಮಂಡಳಿ ಅಧ್ಯಕ್ಷರಾಗಿ ಒಂದೂವರೆ ವರ್ಷ ಪೂರೈಸಿದ ಕಾರ್ಯಕರ್ತರನ್ನು ಬದಲಾಯಿಸಬೇಕೆಂದು ಕೋರ್ ಕಮಿಟಿಯಲ್ಲಿ ತೀರ್ಮಾನಿಸಿ ಪಟ್ಟಿ ಸಿದ್ದಪಡಿಸಿದ್ದರೂ, ಮಾಜಿ ಸಿಎಂ ಯಡಿಯೂರಪ್ಪ ಎಲ್ಲರನ್ನೂ ಕೈ ಬಿಡಲು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೂವರೆ ವರ್ಷ ಪೂರೈಸಿರುವ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಬದಲಾಯಿಸುವ ಕುರಿತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಘಟಕದ ಉಪಾಧ್ಯಕ್ಷ ನಿರ್ಮಲ ಕುಮಾರ್ ಸುರಾನಾ ನೇತೃತ್ವದ ಸಮಿತಿ ಹಲವಾರು ಸುತ್ತಿನ ಸಭೆ ನಡೆಸಿ, ಮೊದಲ ಹಂತದಲ್ಲಿ ಅಧಿಕಾರ ಅನುಭವಿಸಿದ ಸುಮಾರು 40 ನಿಗಮ ಮಂಡಳಿಗಳು ಹಾಗೂ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಹೆಸರುಗಳ ಪಟ್ಟಿ ಮಾಡಿ, ಅವರ ನೇಮಕಾತಿಯನ್ನು ರದ್ದುಗೊಳಿಸುವಂತೆ ಪಕ್ಷದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಲುಪಿಸಿದ್ದಾರೆ. ಬಿಎಸ್‌ವೈ ಭೇಟಿ ಮಾಡಿದ ಕಟೀಲ್: ಪಕ್ಷದ ನಿರ್ಧಾರದಂತೆ ನಿಗಮ ಮಂಡಳಿ ಅಧ್ಯಕ್ಷರಾಗಿ ಒಂದೂವರೆ ವರ್ಷ ಪೂರೈಸಿದ ಶಾಸಕರು ಹಾಗೂ ಮಾಜಿ ಶಾಸಕರನ್ನು ಹೊರತು ಪಡೆಸಿ ಉಳಿದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಬದಲಾಯಿಸಲು ಕೋರ್ ಕಮಿಟಿಯಲ್ಲಿ ತೀರ್ಮಾನಿಸಿದಂತೆ ಸಮಿತಿ ಸಿದ್ದಗೊಳಿಸಿದ್ದ ಪಟ್ಟಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬಳಿ ತೆಗೆದುಕೊಂಡು ಹೋಗಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
Related Articles
ಆದರೆ, ಯಡಿಯೂರಪ್ಪ ಅವರು ಎಲ್ಲ ಅಧ್ಯಕ್ಷರನ್ನು ಒಂದೇ ಬಾರಿ ತೆಗೆದು ಹಾಕುವ ಪಕ್ಷದ ನಿರ್ಧಾರಕ್ಕೆ ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಕೆಲವು ಸಮುದಾಯಗಳ ನಿಗಮ ಮಂಡಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವವರು ಆ ಸಮುದಾಯಗಳ ಸಂಘಟನೆಗಾಗಿ ಸಾಕಷ್ಟು ಹೋರಾಟ ಮಾಡಿ ಆಯಾ ಸಮುದಾಯಗಳ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅಂತಹವರನ್ನು ಹುದ್ದೆಯಿಂದ ತೆಗೆದು ಹಾಕಿ, ಸಮುದಾಯದ ಮೇಲೆ ಹಿಡಿತ ಇಲ್ಲದಿರುವ ಬೇರೆಯವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ, ಆ ಸಮುದಾಯಗಳು ಮುನಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೇ, ಇದು ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂಬ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಆಂತರಿಕ ಗುದ್ದಾಟ:ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ನೇಮಕಗೊಂಡ ಬಹುತೇಕರು ಯಡಿಯೂರಪ್ಪ ಅವರ ಬೆಂಬಲಿಗರಾಗಿದ್ದಾರೆ ಎನ್ನುವುದು ಪಕ್ಷದ ಒಂದು ವರ್ಗದ ನಾಯಕರ ಅಭಿಪ್ರಾಯ. ಅಲ್ಲದೇ ಪಕ್ಷ ಒಂದು ತೀರ್ಮಾನ ತೆಗೆದುಕೊಂಡರೆ ಎಲ್ಲರಿಗೂ ಅನ್ವಯವಾಗಬೇಕೆನ್ನುವ ಕಾರಣಕ್ಕೆ ಯಾರನ್ನೂ ವಿಶೇಷವಾಗಿ ಪರಿಗಣಿಸದೇ ಎಲ್ಲರನ್ನೂ ತೆಗೆದು ಹಾಕಿ ಪಕ್ಷದ ಉಳಿದ ಕಾರ್ಯಕರ್ತರಿಗೆ ಅವಕಾಶ ಕೊಡಬೇಕೆನ್ನುವುದು ಪಕ್ಷದ ತೀರ್ಮಾನವಾಗಿದ್ದು, ಅದು ಎಲ್ಲರಿಗೂ ಅನ್ವಯವಾಗಬೇಕೆನ್ನುವುದು ಪಕ್ಷದ ಒಂದು ವರ್ಗದ ನಾಯಕರ ವಾದವಾಗಿದೆ. ಅದೇ ಕಾರಣಕ್ಕೆ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ಒಂದು ವರ್ಗದ ನಾಯಕರ ನಡುವೆ ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಕೋರ್ ಕಮಿಟಿಯಲ್ಲಿ ಚರ್ಚೆಗೆ ಚಿಂತನೆ: ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ಮೇಲಿಂದ ಮೇಲೆ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಹಿಂದಿನ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಿದಂತೆ ಒಂದೂವರೆ ವರ್ಷ ಪೂರೈಸಿರುವ ನಿಗಮ ಮಂಡಳಿ ಅಧ್ಯಕ್ಷರನ್ನು ಬದಲಾಯಿಸಲು ಮುಂದಿನ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.