ದಾವಣಗೆರೆ: ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬೇರೆ ಪಕ್ಷಕ್ಕೆ ಹೋಗುವ ವಿಚಾರ ನನಗೆ ಗೊತ್ತಿಲ್ಲ. ಪಕ್ಷಕ್ಕೆ ಬರುವವರು ಹಾಗೂ ಹೋಗುವವರ ಬಗ್ಗೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ನೋಡಿಕೊಳ್ಳುತ್ತಾರೆ ಎಂದು ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಪ್ರತಿಕ್ರಿಯಿಸಿದರು.
ಅವರು ಸೋಮವಾರ ಸಂಜೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿಯೂ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಮಾಜಿ ಸಚಿವ ರೇಣುಚಾರ್ಯ ಅವರು ತಾವೂ ಈ ಕ್ಷೇತ್ರದ ಪ್ರಬಲ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಟಿಕೆಟ್ ಹಂಚಿಕೆ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ. ಇದು ಪ್ರಜಾಪ್ರಭುತ್ವ ದೇಶ. ಇಲ್ಲಿ ಯಾರು ಬೇಕಾದರೂ ತಮ್ಮ ಅಭಿಪ್ರಾಯ ಹೇಳಿಕೊಳ್ಳಬಹುದು. ಎಲ್ಲರ ಹೇಳಿಕೆಗಳನ್ನು ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರ ಆಯ್ಕೆಯಾಗದೆ ಇದ್ದರೂ ಆಡಳಿತ ಪಕ್ಷದ ವಿರುದ್ಧ ಹೋರಾಟ ನಿರಂತರ ನಡೆದಿದೆ. ಎಲ್ಲ ನಾಯಕರೂ ಆಡಳಿತ ಪಕ್ಷದ ವಿರುದ್ಧ ಹೋರಾಟ ಮಾಡುತ್ತಲೇ ಇದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪಕ್ಷ ಕಡೆಗಣಿಸಿಲ್ಲ. ಅವರು ಪಕ್ಷದ ರಾಷ್ಟ್ರೀಯ ಮಂಡಳಿಯಲ್ಲಿ ಸದಸ್ಯರಿದ್ದು ಚುನಾವಣೆಯಲ್ಲಿ ರಾಜ್ಯದಲ್ಲಿ ಯಾರಿಗೆ ಟಿಕೆಟ್ ಕೊಡಬೇಕು; ಕೊಡಬಾರದು ಎಂಬ ನಿರ್ಧಾರ ಕೈಗೊಳ್ಳುವ ದೊಡ್ಡ ಅಧಿಕಾರ ಹೊಂದಿದ್ದಾರೆ ಎಂದರು.
ಶಂಕರಪ್ಪ-ನಾನು ಚೆನ್ನಾಗಿಯೇ ಇದ್ದೇವೆ….
ನಾನು ಹಾಗೂ ಶಿವಶಂಕರಪ್ಪನವರು (ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ) ಚೆನ್ನಾಗಿಯೇ ಇದ್ದೇವೆ. ಅವರು ಅವರ ಪಕ್ಷದ ರಾಜಕಾರಣ ಮಾಡುತ್ತಾರೆ. ನಾನು ನನ್ನ ಪಕ್ಷದ ರಾಜಕಾರಣ ಮಾಡುತ್ತೇನೆ. ಆದರೆ, ನೀವು (ಮಾಧ್ಯಮದವರು) ನಿಮ್ಮ ಟಿಆರ್‌ಪಿಗಾಗಿ ನಮ್ಮನ್ನು ಏಕೆ ಬಲಿಪಶು ಮಾಡುತ್ತೀರಿ? ನಾವಾಗಿ ಹೇಳದೆ ಇದ್ದರೂ ಏನೇನೋ ಕೇಳಿ ನಮ್ಮಲ್ಲೇ ತಿಕ್ಕಾಟಕ್ಕೆ ಏಕೆ ಹಚ್ಚುತ್ತೀರಿ? ಈ ಕಾರಣಕ್ಕಾಗಿಯೇ ನಾನು ಮಾಧ್ಯಮದವರ ಮುಂದೆ ಏನೂ ಮಾತನಾಡುವುದಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ವಿರುದ್ಧ ಹರಿಹಾಯ್ದರು.