Advertisement

ಪಕ್ಷ, ವರ್ಗ ಮರೆತು ಅಟಲ್‌ಗೆ ಶ್ರದ್ಧಾಂಜಲಿ

12:38 PM Aug 27, 2018 | |

ಬೆಂಗಳೂರು: ಮಾಜಿ ಪ್ರಧಾನಿ ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರು ನಿಧನರಾದಾಗ ಪಕ್ಷಬೇಧ, ರಾಷ್ಟ್ರ ಬೇಧ ಮರೆತು ಗಣ್ಯರೆಲ್ಲರೂ ಸಂತಾಪ ಸೂಚಿಸಿದಂತೆ ಭಾನುವಾರ ನಗರದ ಟೌನ್‌ಹಾಲ್‌ನಲ್ಲಿ ಪಕ್ಷಾತೀತವಾಗಿ, ವರ್ಗ ರಹಿತವಾಗಿ ಮಾಜಿ ಪ್ರಧಾನಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರು, ಮಾದಾರ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್‌, ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್‌ ಹಿರಿಯ ನಾಯಕ ಜಾಫ‌ರ್‌ ಷರೀಫ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌,

ಜೆಡಿಎಸ್‌ ಹಿರಿಯ ಉಪಾಧ್ಯಕ್ಷ ಪಿ.ಜಿ.ಆರ್‌.ಸಿಂಧ್ಯಾ, ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇಗೌಡ, ಆರ್‌ಎಸ್‌ಎಸ್‌ ರಾಷ್ಟ್ರೀಯ ಸಹ ಸರಕಾರ್ಯವಾಹ್‌ ಮುಕುಂದ್‌ ಸೇರಿದಂತೆ ಗಣ್ಯಾತಿಗಣ್ಯರು ಅಟಲ್‌ಬಿಹಾರಿ ವಾಜಪೇಯಿ ಅವರಿಗೆ ನುಡಿ ನಮನ ಸಲ್ಲಿಸಿದರು.

ಸಭೆಯಲ್ಲಿ ಮಾತನಾಡಿದ ಎಲ್ಲರೂ ವಾಜಪೇಯಿ ಅವರ ಗುಣಗಾನ ಮಾಡಿದ್ದಲ್ಲದೆ, ಅವರ ಪಕ್ಷಾತೀತ ನಿಲುವುಗಳು, ವಿರೋಧಿಗಳನ್ನೂ ಒಲಿಸಿಕೊಳ್ಳುವ ಕಾರ್ಯವೈಖರಿ, 24 ಪಕ್ಷಗಳನ್ನು ಕಟ್ಟಿಕೊಂಡು ಐದು ವರ್ಷ ಕಾಲ ಅತ್ಯುತ್ತಮ ಆಡಳಿತ ನೀಡಿದ ರಾಜಕೀಯ ಪ್ರೌಢಿಮೆ ಕೊಂಡಾಡಿದರು.

ಅವರ ಮುತ್ಸದಿತನ, ಹೃದಯವಂತಿಕೆ, ದೇಶದ ಅಭಿವೃದ್ಧಿಯ ಕುರಿತಂತೆ ಅವರಲ್ಲಿದ್ದ ಕಲ್ಪನೆಗಳು, ವಿದೇಶಾಂಗ ನೀತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಭಾರತ ಇದು ವಿಶ್ವಮಾನ್ಯ ರಾಷ್ಟ್ರವಾಗಲು ಅಭಿವೃದ್ಧಿಯ ಬೀಜ ಬಿತ್ತಿದ್ದೇ ವಾಜಪೇಯಿ ಎಂದು ಬಣ್ಣಿಸಿದರು.

Advertisement

ಆಕಾಶವನ್ನೇ ಹೊದಿಕೆ ಮಾಡಿಕೊಂಡು ಚಿರನಿದ್ರೆ: ಕೇಂದ್ರ ಸಚಿವ ಅನಂತಕುಮಾರ್‌ ಮಾತನಾಡಿ, ಭಾರತದ ರೂಪಾಯಿ ಯಾವತ್ತು ವಿಶ್ವದ ಡಾಲರ್‌ ಆಗುತ್ತದೋ ಅಂದು ಭಾರತ ಆರ್ಥಿಕ ಉನ್ನತಿ ಸಾಧಿಸಿದಂತೆ ಎಂದು ಹೇಳಿದ್ದ ಅಟಲ್‌ ಜೀ, ಪ್ರಧಾನಿಯಾಗಿದ್ದಾಗ ಆ ನಿಟ್ಟಿನಲ್ಲಿ ಕೆಲಸ ಮಾಡಿದರು.

ಕರ್ನಾಟಕದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು, ಬೆಂಗಳೂರಿಗೆ ಕಾವೇರಿ 4ನೇ ಹಂತದ ಯೋಜನೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನಮ್ಮ ಮೆಟ್ರೋ, ಹುಬ್ಬಳ್ಳಿಗೆ ನೈರುತ್ಯ ರೈಲ್ವೆ ವಲಯ ಮುಂತಾದ ಕೊಡುಗೆಗಳನ್ನು ನೀಡಿದರು.

ರಾಜಕಾರಣದಲ್ಲಿದ್ದುಕೊಂಡೇ ರಾಜಕೀಯೇತರ ಭಾರತದ ಚಿಂತನೆ ಮಾಡಿದರು ಎಂದು ಹೇಳಿದರಲ್ಲದೆ, ತಮ್ಮ ಊರು ಬಿಟ್ಟು ಮೊದಲ ಬಾರಿ ದೆಹಲಿಗೆ ಬಂದಿದ್ದ ವಾಜಪೇಯಿ ಅವರು ಮೂರು ದಿನ ರಾಮಲೀಲಾ ಮೈದಾನದಲ್ಲಿ ಆಕಾಶವನ್ನೇ ಹೊದಿಕೆ ಮಾಡಿಕೊಂಡು ನಿದ್ರಿಸಿದ್ದರು. ಇದೀಗ ಅದೇ ದೆಹಲಿಯಲ್ಲಿ ಆಕಾಶವನ್ನೇ ಹೊದಿಕೆ ಮಾಡಿಕೊಂಡು ಚಿರನಿದ್ರೆಗೆ ಹೋಗಿದ್ದಾರೆ ಎಂದು ಗದ^ದಿತರಾದರು.

ಮಹಾದೇವನಂತಿದ್ದ ಅಟಲ್‌: ಪೇಜಾವರ ಮಠದ ವಿಶ್ವೇಶ ತೀರ್ಥರು ಮಾತನಾಡಿ, ಯಾರು ಅಸಾಧಾರಣ ಶಕ್ತಿ ಹೊಂದಿರುತ್ತಾರೋ ಅಂಥವರಲ್ಲಿ ಭಗವಂತನ ಸಾನ್ನಿಧ್ಯವಿರುತ್ತದೆ ಎಂಬುದನ್ನು ಅಟಲ್‌ ಬಿಹಾರಿ ವಾಜಪೇಯಿ ಅವರು ಸಾಬೀತುಪಡಿಸಿದ್ದಾರೆ. ದಕ್ಷತೆ ಮತ್ತು ಪ್ರಾಮಾಣಿಕತೆ ಜತೆಗಿರಲು ಸಾಧ್ಯವಿಲ್ಲ ಎಂದು ಚಾಣಕ್ಯ ಹೇಳಿದರೆ, ಅವೆರಡರ ಸಮನ್ವಯದಿಂದ ವಾಜಪೇಯಿ ಅವರು ಆ ಮಾತು ಸುಳ್ಳು ಮಾಡಿದರು ಎಂದು ಹೇಳಿದರು. 

ಪುರಾಣದಲ್ಲಿ ಗಣಪತಿಯ ವಾಹನ ಇಲಿಯನ್ನು ನುಂಗಲು ಶಿವನ ಕೊರಳಿನಲ್ಲಿದ್ದ ಹಾವು ಹೊಂಚು ಹಾಕುತ್ತಿದ್ದರೆ, ಆ ಹಾವು ತಿನ್ನಲು ಸುಬ್ರಮಣ್ಯನ ವಾಹನ ನವಿಲು ಪ್ರಯತ್ನಿಸುತ್ತಿತ್ತು. ಇನ್ನೊಂದೆಡೆ ಶಿವನ ಜಟೆಯಲ್ಲಿದ್ದ ಗಂಗೆಯನ್ನು ಕಂಡು ಪಾರ್ವತಿ ಹೊಟ್ಟೆಕಿಚ್ಚು ಪಟ್ಟರೆ, ಗಣೇಶನ ಮೂಗನ್ನು (ಸೊಂಡಿಲು) ಸುಬ್ರಮಣ್ಯ ಅಳತೆ ಮಾಡುತ್ತಿದ್ದ. ಆ ಸುಬ್ರಮಣ್ಯನ ಮುಖ ಎಷ್ಟು ದೊಡ್ಡದಿದೆ ಎಂದು ಗಣೇಶ ನೋಡುತ್ತಿದ್ದ. ಇದನ್ನೆಲ್ಲಾ ಕಂಡು ಮಹಾದೇವ ಗಲಿಬಿಲಿಗೆ ಒಳಗಾಗಿದ್ದನಂತೆ.

ಆದರೆ, ವಾಜಪೇಯಿ ಅವರು ವಿಭಿನ್ನ ನಿಲುವುಗಳ 24 ಪಕ್ಷಗಳನ್ನು ಜತೆಯಾಗಿಸಿಕೊಂಡು ಐದು ವರ್ಷ ಉತ್ತಮ ಆಡಳಿತ ನೀಡುವ ಮೂಲಕ ಮಹದೇವನಂತೆ ಉಳಿದುಕೊಂಡರು ಎಂದು ಬಣ್ಣಿಸಿದರು. ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ಮಾತನಾಡಿ, ಭಾರತದ ಅಗ್ರಗಣ್ಯ ನಾಯಕರಲ್ಲಿ ಅಟಲ್‌ಜಿ ಅವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಸಮಾಜದ ಬೆಳವಣಿಗೆಗೆ ಧರ್ಮ ಬೇಕು.

ಆದರೆ, ಯಾವುದೇ ಧರ್ಮವನ್ನು ವೈಭವೀಕರಿಸಬಾರದು ಎಂದು ವಾಜಪೇಯಿ ಹೇಳುತ್ತಿದ್ದರು ಎಂದು ಸ್ಮರಿಸಿಕೊಂಡರು. ಡಾ.ದೊಡ್ಡರಂಗೇಗೌಡರು ಕವನದ ಮೂಲಕ ವಾಜಪೇಯಿ ಅವರಿಗೆ ನುಡಿನಮನ ಸಲ್ಲಿಸಿದರು. ಮೇಯರ್‌ ಸಂಪತ್‌ರಾಜ್‌, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಆರ್‌ಎಸ್‌ಎಸ್‌ ಪ್ರಮುಖರು ಸಭೆಯಲ್ಲಿ ಹಾಜರಿದ್ದರು.

ಪುಸ್ತಕ ಅಟಲ್‌ಗೆ ಅರ್ಪಣೆ: ಅಟಲ್‌ಬಿಹಾರಿ ವಾಜಪೇಯಿ ಅವರನ್ನು ವಿಶ್ವನಾಯಕರಲ್ಲಿ ಒಬ್ಬರು ಎಂದು ಬಣ್ಣಿಸಿದ ಜೆಡಿಎಸ್‌ ಹಿರಿಯ ಉಪಾಧ್ಯಕ್ಷ ಪಿ.ಜಿ.ಆರ್‌.ಸಿಂಧ್ಯಾ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಾಜಪೇಯಿ ಅವರೊಂದಿಗೆ ಜೈಲಿನಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದರು. ಅಲ್ಲದೆ, ತಾವು “ಪ್ರಿಸನರ್‌ ಆಫ್ ಡೆಮಾಕ್ರಸಿ’ ಎಂಬ ಪುಸ್ತಕ ಬರೆಯುತ್ತಿದ್ದು, ಇದನ್ನು ಅಟಲ್‌ಬಿಹಾರಿ ವಾಜಪೇಯಿ ಅವರಿಗೆ ಅರ್ಪಣೆ ಮಾಡುವುದಾಗಿ ಹೇಳಿದರು.

ಭಾಷಣಗಳ ಪುಸ್ತಕ ಪ್ರಕಟ: ವಾಜಪೇಯಿ ಅವರೊಂದಿಗೆ ರಾಜ್ಯ ಸುತ್ತಿದ್ದು, ರೈಲಿನಲ್ಲಿ ರಾತ್ರಿ ಪ್ರಯಾಣದ ವೇಳೆ ಅವರನ್ನು ಎಬ್ಬಿಸಿ ಕಾಯುತ್ತಿದ್ದ ಸಾವಿರಾರು ಕಾರ್ಯಕರ್ತರತ್ತ ಕೈಬೀಸುವಂತೆ ಮಾಡುತ್ತಿದ್ದುದು ಮುಂತಾದ ವಿಚಾರಗಳನ್ನು ನೆನಪಿಸಿಕೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಭಾನುವಾರದ ಶ್ರದ್ಧಾಂಜಲಿ ಸಭೆಯಲ್ಲಿ ಗಣ್ಯರು ಮಾಡಿದ ಭಾಷಣವನ್ನು ಕೃತಿ ರೂಪಕ್ಕೆ ಇಳಿಸಿ ಪುಸ್ತಕವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next