Advertisement
ಹನೂರು ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಈಶ್ವರ್ ಕಳೆದ 4-5 ದಿನಗಳಿಂದ ಕ್ಷೇತ್ರದ ಹಾಲಿ ಶಾಸಕ ಮಂಜುನಾಥ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರೆ ಎಂಬ ವದಂತಿಗಳು ಹರಡಿವೆ. ಈ ವಿಚಾರವಾಗಿ ಮಂಜುನಾಥ್ ಅವರೇ ಸ್ಪಷ್ಟಪಡಿಸಿದ್ದು ನಾನು ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇನೆಯೇ ಹೊರತು ಪಕ್ಷ ಸೇರ್ಪಡೆ ವಿಚಾರ ಚರ್ಚೆ ಆಗಿಲ್ಲ ಎಂದು ತಿಳಿಸಿದ್ದಾರೆ. ಆದುದರಿಂದ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಹಾಪೋಹಗಳಿಗೆ ಕಿವಿಗೊಡದೆ ಮುಂಬರುವ ಲೋಕಸಭೆ, ತಾ.ಪಂ, ಜಿ.ಪಂ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಹನೂರು ಕ್ಷೇತ್ರದ ಅಭಿವೃದ್ಧಿಯಲ್ಲಿ ಮಾಜಿ ಶಾಸಕ ಆರ್.ನರೇಂದ್ರ, ಅವರ ತಂದೆ ಮಾಜಿ ಸಚಿವ ದಿ|ರಾಜೂಗೌಡ, ದೊಡ್ಡಪ್ಪ ದಿ|ವೆಂಕಟೇಗೌಡ ಅವರ ಕೊಡುಗೆ ಅಪಾರವಾದುದು. 1968 ರಿಂದ ಇಲ್ಲಿಯತನಕ ಕಾಂಗ್ರೆಸ್ ಪಕ್ಷಕ್ಕಾಗಿ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಿಸಿದಾಗಲೂ ಅನ್ಯ ಪಕ್ಷದತ್ತ ಮುಖಮಾಡದೆ ಪಕ್ಷೇತರವಾಗಿ ಗೆಲುವು ಸಾಧಿಸಿ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಪ್ರಸಕ್ತ ಚುನಾವಣೆಯಲ್ಲಿ ಕೆಲ ವ್ಯತ್ಯಾಸಗಳಿಂದಾಗಿ ನರೇಂದ್ರ ಅವರು ಸೋಲು ಕಂಡಿದ್ದರೂ ನಿರಂತರವಾಗಿ ಜನಸಂಪರ್ಕದಲ್ಲಿದ್ದು ಸೇವೆಯಲ್ಲಿ ತೊಡಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹನೂರು ಕ್ಷೇತ್ರದಿಮದ 15 ಸಾವಿರಕ್ಕೂ ಹೆಚ್ಚಿನ ಬಹುಮತ ನೀಡಿ ಹನೂರು ಕ್ಷೇತ್ರ ಕಾಂಗ್ರೆಸ್ ನ ಭದ್ರಕೊಟೆ, ಮಾಜಿ ಶಾಸಕ ನರೇಂದ್ರರ ನಾಯಕತ್ವದಲ್ಲಿ ಸದೃಢವಾಗಿದೆ ಎಂಬುದನ್ನು ಸಾಬೀತುಪಡಿಸುತ್ತೇವೆ . ಒಂದೊಮ್ಮೆ ಶಾಸಕ ಮಂಜುನಾಥ್ ಅವರನ್ನು ಪಕ್ಷ ಸೇರ್ಪಡೆ ಮಾಡಿಕೊಳ್ಳಲು ಮುಂದಾದಲ್ಲಿ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರು ಒಕ್ಕೊರಲಿನಿಂದ ವಿರೋಧಿಸುತ್ತೇವೆ ಎಂದರು. ಜಿ.ಪಂ ಮಾಜಿ ಉಪಾಧ್ಯಕ್ಷ ಬಸವರಾಜು ಮಾತನಾಡಿ 2008 ರ ಚುನಾವಣೆಯಲ್ಲಿ ಶಾಸಕ ನರೇಂದ್ರ ಅವರು ಮೊದಲ ಬಾರಿ ಜಯಗಳಿಸಿದ್ದರು, 2018 ರಲ್ಲಿ ಸತತವಾಗಿ 3 ನೇ ಬಾರಿಗೆ ಗೆಲುವು ಸಾಧಿಸಿದ್ದರು. ಈ ಎರಡೂ ಸಮಯದಲ್ಲಿಯೂ ಬಿಜೆಪಿ ಪಕ್ಷ ನರೇಂದ್ರ ಅವರನ್ನು ಸೆಳೆಯಲು ಪ್ರಯತ್ನಿಸಿತ್ತು. ಈ ವೇಳೆ ಬೊಜೆಪಿ ನಾಯಕರು 50 ಕೋಟಿ ರೂ. ಹಣ, ಮಂತ್ರಿಸ್ಥಾನ ಮತ್ತು ಉಪಚುನಾವಣೆಯ ಖರ್ಚುವೆಚ್ಚವನ್ನೆಲ್ಲಾ ಭರಿಸುವ ಭರವಸೆ ನೀಡಿದರೂ ಅತ್ತ ಮುಖ ಮಾಡಲಿಲ್ಲ ಇದು ಅವರ ಪಕ್ಷ ನಿಷ್ಠೆಯನ್ನು ತೋರುತ್ತದೆ. ಇನ್ನು 1985ರಲ್ಲಿ ದಿ|ರಾಜೂಗೌಡ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಿಸಿದಾಗ ಪಕ್ಷೇತರವಾಗಿ ಗೆಲುವು ಸಾಧಿಸಿದ್ದರು. ಈ ಸಂದರ್ಭದಲ್ಲಿ 1986 ರಲ್ಲಿ ಅಂದಿನ ಪಿಡಬ್ಲ್ಯೂಡಿ ಸಚಿವರಾಗಿದ್ದ ಮಾಜಿ ಪ್ರಧಾನಿ ದೇವೇಗೌಡರು ಚಿಕ್ಕಲ್ಲೂರಿಗೆ ಆಗಮಿಸಿದ್ದ ವೇಳೆ ಜನತಾ ಪಕ್ಷಕ್ಕೆ ಆಹ್ವಾನಿಸಿ ಮಂತ್ರಿಸ್ಥಾನದ ಭರವಸೆ ನೀಡಿದ್ದರು. ಆಗಲೂ ರಾಜೂಗೌಡರು ವಿನಯದಿಂದಲೇ ತಿರಸ್ಕರಿಸಿದ್ದರು. ಇದು ಅವರ ಪಕ್ಷ ನಿಷ್ಠೆಯನ್ನು ತೋರುತ್ತಿದ್ದು ಮಾಜಿ ಶಾಸಕ ನರೇಂದ್ರ ನಾಯಕತ್ವದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದು ಶಾಸಕ ಮಂಜುನಾಥ್ ಅವರ ಅನಿವಾರ್ಯತೆ ನಮಗಿಲ್ಲ ಎಂದರು.
Related Articles
Advertisement
ಒಂದೊಮ್ಮೆ ಮಂಜುನಾಥ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಮುಂದಿನ ಪರಿಣಾಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ನೇರಹೊಣೆಯಾಗಬೇಕಾಗುತ್ತದೆ ಎಂದು ಪ.ಪಂ ಸದಸ್ಯ ಹರೀಶ್ ಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಿಕ್ಕತಮ್ಮಯ್ಯ, ಪೆದ್ದನಪಾಳ್ಯ ಸಿದ್ದರಾಜು, ಪ.ಪಂ ಸದಸ್ಯರಾದ ಸುದೇಶ್, ಮುಖಂಡರಾದ ಬಸವರಾಜು, ಮಾದೇಶ್, ನಟರಾಜು, ಮಂಜು ಹಾಗೂ ಇನ್ನಿತರರು ಹಾಜರಿದ್ದರು.