Advertisement

ಜೆಡಿಎಸ್‌ಗೆ ಪಕ್ಷ ಬಲವರ್ಧನೆ ಸವಾಲು

11:00 PM Oct 15, 2019 | Team Udayavani |

ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನ ಪಡೆಯುವ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಮೇಲುಗೈ ಆಗಿರುವುದರಿಂದ, ಜೆಡಿಎಸ್‌ಗೆ ಪಕ್ಷ ಸಂಘಟನೆ ಹಾಗೂ ಬಲವರ್ಧನೆಗಾಗಿ ಏಕಾಂಗಿ ಹೋರಾಟದ ಅನಿವಾರ್ಯತೆ ಎದುರಾಗಿದೆ.

Advertisement

ಜೆಡಿಎಸ್‌ನ ಕೆಲವು ಶಾಸಕರೂ ಬಿಜೆಪಿಯತ್ತ, ಮತ್ತೆ ಕೆಲವರು ಕಾಂಗ್ರೆಸ್‌ನತ್ತಲೂ ನೋಡುತ್ತಿದ್ದಾರೆ. ಸಿದ್ದರಾಮಯ್ಯ ಅವರೂ ಅವಕಾಶ ಸಿಕ್ಕರೆ ಜೆಡಿಎಸ್‌ನ ಪ್ರಬಲ ನಾಯಕರನ್ನು ಕಾಂಗ್ರೆಸ್‌ಗೆ ಸೆಳೆಯದೆ ಇರಲಾರರು. ಹೀಗಾಗಿ, ಜೆಡಿಎಸ್‌ಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳ ನಡುವೆ ಅಸ್ತಿತ್ವ ಉಳಿಸಿಕೊಂಡು ಪಕ್ಷ ಬಲವರ್ಧನೆ ಮಾಡುವುದು ಸವಾಲಾಗಿದೆ.

ಕಾಂಗ್ರೆಸ್‌ನಲ್ಲಿನ ಆಂತರಿಕ ಗುದ್ದಾಟ, ಹಿರಿಯ ನಾಯಕರ ಕೆಪಿಸಿಸಿ ಅಧ್ಯಕ್ಷ ಗಾದಿ ಹಾಗೂ ಪ್ರತಿಪಕ್ಷ ನಾಯಕ ಸ್ಥಾನ ಸಿದ್ದರಾಮಯ್ಯ ಕೈ ತಪ್ಪಬಹುದು, ಮೂಲ ಕಾಂಗ್ರೆಸ್ಸಿಗರಿಗೆ ಎರಡೂ ಹುದ್ದೆಗಳು ಸಿಗಬಹುದು. ಆಗ ಮುಂಬರುವ ಉಪ ಚುನಾವಣೆ ಸೇರಿ ರಾಜಕೀಯವಾಗಿ ಕಾಂಗ್ರೆಸ್‌ ಜತೆ ಮರು ಮೈತ್ರಿ ಕುದುರಬಹುದು ಎಂಬ ಲೆಕ್ಕಾಚಾರ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರದಾಗಿತ್ತು.

ಆದರೆ, ಸಿದ್ದರಾಮಯ್ಯ ಅವರು ವಿರೋಧದ ನಡುವೆಯೇ ಪ್ರತಿಪಕ್ಷ ನಾಯಕರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್‌ ಗುಂಡೂರಾವ್‌ ಅವರೇ ಮುಂದುವರಿಯುವಂತೆ ನೋಡಿಕೊಂಡಿದ್ದಾರೆ. ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಸ್ಥಾನ ಲಿಂಗಾಯಿತ ಸಮುದಾಯದ ಎಸ್‌.ಆರ್‌. ಪಾಟೀಲ್‌ಗೆ ಸಿಕ್ಕಿದೆ. ಜೆಡಿಎಸ್‌ ಜತೆಗಿನ ಮೈತ್ರಿ ಇನ್ಮುಂದೆ ಬಹುತೇಕ ಅನು ಮಾನ. ಹೀಗಾಗಿ, ಸದನದ ಒಳಗೆ ಹಾಗೂ ಹೊರಗೆ ಜೆಡಿಎಸ್‌ ಏಕಾಂಗಿ ಹೋರಾಟ ನಡೆಸಬೇಕಿದೆ.

ಈ ಮಧ್ಯೆ, ಹಿರಿಯ ನಾಯಕ ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿದ್ದು, “ನಮ್ಮನ್ನು ನಾಯಕರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ’ ಎಂದು ನೇರವಾಗಿಯೇ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಇಂತಹ ಅಸಮಾಧಾನ ಪಕ್ಷದ ಒಳಗೆ ಇರುವುದು ನಿಜ. ಇದನ್ನೆಲ್ಲಾ ಸರಿಪಡಿಸಿಕೊಂಡು ಪಕ್ಷ ಕಟ್ಟಬೇಕಾಗಿದೆ.

Advertisement

ದೇವೇಗೌಡರ ಸಲಹೆ: ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾದ ನಂತರ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಪಕ್ಷದ ಪ್ರಮುಖ ನಾಯಕರ ಜತೆ ಸಭೆ ನಡೆಸಿ ಪಕ್ಷ ಸಂಘಟನೆ ಹಾಗೂ ಬಲವರ್ಧನೆ ವಿಚಾರದಲ್ಲಿ ಮೈ ಮರೆಯಬಾರದು. ಸಿದ್ದರಾಮಯ್ಯ ಅಹಿಂದ ಮತಬ್ಯಾಂಕ್‌ ಸೆಳೆಯಲು ಕಾರ್ಯತಂತ್ರ ರೂಪಿಸಬಹುದು. ನಾವೂ ಸಹ ಅದಕ್ಕೆ ತಕ್ಕಂತೆ ಪ್ರತಿತಂತ್ರ ರೂಪಿಸಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.

ರಾಜ್ಯ ಪ್ರವಾಸ, ಜಿಲ್ಲಾ ಮಟ್ಟದ ಸಮಾವೇಶ, ವಿಧಾನಸಭೆ ಕ್ಷೇತ್ರವಾರು ಮುಖಂಡರು-ಪದಾಧಿಕಾರಿಗಳ ಸಭೆ ನಡೆಸಿ ತಳಮಟ್ಟದಿಂದ ರಾಜ್ಯ ಮಟ್ಟದವರೆಗೆ ಕ್ರಿಯಾಶೀಲವಾಗಿ ರುವಂತೆ ನೋಡಿಕೊಳ್ಳಬೇಕು. ಈ ವಿಚಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಕೆ.ಕುಮಾರಸ್ವಾಮಿ, ವೈ.ಎಸ್‌.ವಿ.ದತ್ತಾ, ಬಂಡೆಪ್ಪ ಕಾಶೆಂಪೂರ್‌, ಬಸವರಾಜ ಹೊರಟ್ಟಿ, ಮಧು ಬಂಗಾರಪ್ಪ, ರಮೇಶ್‌ಬಾಬು ಸೇರಿದಂತೆ ಎಲ್ಲರೂ ಒಟ್ಟಾಗಿ ಸಾಮೂಹಿಕ ನಾಯಕತ್ವದಡಿ ಕೆಲಸ ಮಾಡಿ ಎಂದು ಫ‌ರ್ಮಾನು ಹೊರಡಿಸಿದ್ದಾರೆಂದು ಮೂಲಗಳು ತಿಳಿಸಿವೆ.

* ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next