Advertisement

ಉದ್ಯಮಿಗಳ ಬೆನ್ನಿಗೆ ಇರಿದ ಪಾರ್ಟ್ನರ್‌

03:20 PM Aug 05, 2018 | Team Udayavani |

ಬೆಂಗಳೂರು: ಹಣಕಾಸಿನ ವಿಚಾರಕ್ಕಾಗಿ ವ್ಯಕ್ತಿಯೊಬ್ಬ ತನ್ನ ರಿಯಲ್‌ ಎಸ್ಟೇಟ್‌ ವ್ಯವಹಾರದ ಇಬ್ಬರು ಪಾಲುದಾರರ ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಉದ್ಯಮಿಗಳ ಕೊಲೆ ನಡೆದು ಮೂವತ್ತೇಳು ದಿನಗಳ ಬಳಿಕ ಪೊಲೀಸರು, ಕೊಲೆ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರು ನೀಡಿರುವ ಹೇಳಿಕೆಯಿಂದ ಕೊಲೆ ಪ್ರಕರಣ ಬಯಲಾಗಿದೆ.

Advertisement

ಇಬ್ಬರೂ ಉದ್ಯಮಿಗಳ ಶವಗಳನ್ನು ಹೂತುಹಾಕಲಾಗಿದೆ ಎಂದು ಬಂಧಿತರು ಮಾಹಿತಿ ನೀಡಿದ್ದಾರೆ. ರಾಜರಾಜೇಶ್ವರಿನಗರದ ಪ್ರಸಾದ್‌ ಬಾಬು ಮತ್ತು ಗಿರಿನಗರದ ಬಾಲಾಜಿ ಎಂಬ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಅಪಹರಣಗೊಂಡು ಕೊಲೆಗೀಡಾದವರು. ಸಾರಕ್ಕಿ ನಿವಾಸಿ ತೇಜಸ್‌ ಹಾಗೂ ಈತನ ಸಹಚರರಾದ ಮಣಿಕಂಠ ಮತ್ತು ಅನಿಲ್‌ ಎಂಬವರನ್ನು ಪೊಲೀಸರು ಬಂಧಿಸಿದ್ದು,

ಅವರು ಜೂನ್‌ 27ರಂದು ಜೆ.ಪಿ.ನಗರದ ತೇಜಸ್‌ ರಾಜರಾಜೇಶ್ವರಿನಗರದ ಪ್ರಸಾದ್‌ ಬಾಬು ಮತ್ತು ಗಿರಿನಗರದ ಬಾಲಾಜಿಯನ್ನು ಅಪಹರಿಸಿ ಹಾರೋಹಳ್ಳಿಯ ಫಾರ್ಮ್ಹೌಸ್‌ಗೆ ಕರೆದೊಯ್ದು ಕೊಲೆಗೈದಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು 56ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿ 8 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜರಾಜೇಶ್ವರಿನಗರದ ಪ್ರಸಾದ್‌ ಬಾಬು ಮತ್ತು ಗಿರಿನಗರದ ಬಾಲಾಜಿ ಹತ್ತಾರು ವರ್ಷಗಳಿಂದ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದರು. ಹೀಗಾಗಿ ಕೆಲ ತಿಂಗಳ ಹಿಂದೆ ತಮ್ಮ ವ್ಯವಹಾರದ ಪಾಲುದಾರ, ಆರೋಪಿ ತೇಜಸ್‌ ಉದ್ಯಮಿಗಳಿಂದ 60 ಲಕ್ಷ ರೂ. ಸಾಲ ಪಡೆದುಕೊಂಡಿದ್ದ. ಆದರೆ, ಇದನ್ನು ನಿಗದಿತ ಸಮಯಕ್ಕೆ ಹಿಂದಿರುಗಿಸಿರಲಿಲ್ಲ. ಹೀಗಾಗಿ 3 ತಿಂಗಳ ಹಿಂದೆ ಉದ್ಯಮಿಗಳು ಆರೋಪಿಗೆ ಕರೆ ಮಾಡಿ ಹಣ ವಾಪಸ್‌ಗೆ ಒತ್ತಾಯಿಸಿದ್ದರು.

ಇದರಿಂದ ಕೋಪಗೊಂಡಿದ್ದ ತೇಜಸ್‌ ಇಬ್ಬರನ್ನು ಅಪಹರಿಸಿ ಹತ್ಯೆಗೈಯಲು ಸಂಚು ರೂಪಿಸಿದ್ದು,  ಸುಪಾರಿ ಕೂಡ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸಂಚಿನಂತೆ ಜೂನ್‌ 27ರಂದು ಇಬ್ಬರಿಗೂ ಕರೆ ಮಾಡಿದ ಆರೋಪಿ, ಉದ್ಯಮಿಗಳಿಬ್ಬರನ್ನು  ಜೆ.ಪಿ.ನಗರದಲ್ಲಿರುವ ತನ್ನ ಕಚೇರಿಗೆ ಕರೆಸಿಕೊಂಡು, ಹಣದ ಬದಲಿಗೆ ಚೆಕ್‌ ನೀಡುವುದಾಗಿ ಹೇಳಿದ್ದ.

Advertisement

ಇದಕ್ಕೆ ನಿರಾಕರಿಸಿದ ಉದ್ಯಮಿಗಳು ನಗದು ಬೇಕೆಂದು ಪಟ್ಟು ಹಿಡಿದಿದ್ದು, ಮೂವರ ನಡುವೆ ವಾಗ್ವಾದ ನಡೆದಿದೆ. ಇದೇ ವೇಳೆ ಕಾರಿನಲ್ಲಿ ಬಂದ ಮೂವರು ಸುಪಾರಿ ಹಂತಕರು ಉದ್ಯಮಿಗಳನ್ನು ಅಪಹರಿಸಿ ಆವಲಹಳ್ಳಿಯ ಗೋದಾಮಿಗೆ ಎಳೆದೊಯ್ದಿದ್ದರು. ಬಳಿಕ ಇಬ್ಬರನ್ನು ಕುರ್ಚಿಗಳಿಗೆ ಕಟ್ಟಿ ಚಿತ್ರ ಹಿಂಸೆ ನೀಡಿದ್ದಾರೆ. ಆತಂಕಗೊಂಡ ಉದ್ಯಮಿಗಳು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ.

ಈ ವೇಳೆ ಗಾಬರಿಗೊಂಡ ಹಂತಕರು ಇಬ್ಬರ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಹತ್ಯೆಗೈದಿದ್ದಾರೆ ಎಂದು ಬಂಧಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ತೇಜಸ್‌ ಹಾಗೂ ಇತರರು ರಾತ್ರೋರಾತ್ರಿ ಗೋದಾಮಿನಿಂದ ಕನಕಪುರ ರಸ್ತೆಯಲ್ಲಿರುವ ಹಾರೋಹಳ್ಳಿಯ ಫಾರ್ಮ್ಹೌಸ್‌ಗೆ ಮೃತ ದೇಹಗಳನ್ನು ಕೊಂಡೊಯ್ದು, ಫಾರ್ಮ್ಹೌಸ್‌ ಪಕ್ಕದಲ್ಲಿ ಜೆಸಿಬಿ ಮೂಲಕ ಗುಂಡಿ ತೆಗೆದು ಶವಗಳನ್ನು ಹೂತು ಹಾಕಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪತ್ನಿಯರಿಂದ ದೂರು: ಜುನ್‌ 27ರಂದು ಪ್ರಸಾದ್‌ ಬಾಬು , ತೇಜಸ್‌ನನ್ನು ಭೇಟಿಯಾಗಿ ಬರುವುದಾಗಿ ಪತ್ನಿಗೆ ಹೇಳಿ ಹೋಗಿದ್ದರು. ಐದಾರು ಗಂಟೆಗಳು ಕಳೆದರೂ ವಾಪಸ್‌ ಬಂದಿರಲಿಲ್ಲ. ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್ ಆಗಿತ್ತು. ಬಳಿಕ ಅವರೇ ತೇಜಸ್‌ ಕಚೇರಿಗೆ ಬಂದು ನೋಡಿದಾಗ ಪತಿಯ ಬೈಕ್‌ ಇತ್ತು. ಆದರೆ, ಕಚೇರಿ ಸಿಬ್ಬಂದಿಯನ್ನು ವಿಚಾರಿಸಿದಾಗ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಅನುಮಾನಗೊಂಡು ಅವರು ತೇಜಸ್‌ ವಿರುದ್ಧ ಆರ್‌.ಆರ್‌.ನಗರ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು.

ಮತ್ತೂಂದೆಡೆ ಬಾಲಾಜಿ ಕೂಡ ಇದೇ ದಿನ ವ್ಯವಹಾರ ನಿಮಿತ್ತ ಹೊರ ಹೋಗುತ್ತಿರುವುದಾಗಿ ಪತ್ನಿಗೆ ಹೇಳಿ ಹೋಗಿದ್ದರು. ಬಹಳ ಹೊತ್ತಾದರೂ ವಾಪಸ್‌ ಬಾರದ ಹಿನ್ನೆಲೆಯಲ್ಲಿ ಗಿರಿನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ದಕ್ಷಿಣ ವಿಭಾಗದ ಡಿಸಿಪಿ ಡಾ. ಶರಣಪ್ಪ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು.

ಸುಳಿವು ಕೊಟ್ಟ ಸಿಸಿಟಿವಿ: ಈ ಹಿನ್ನೆಲೆಯಲ್ಲಿ ತೇಜ್‌ಸ್‌ನನ್ನು ಒಮ್ಮೆ ಕರೆದು ವಿಚಾರಣೆ ನಡೆಸಿದಾಗ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೆ ದಾಖಲಿಸಿದ್ದ. ಬಳಿಕ ವಾಪಸ್‌ ಕಳುಹಿಸಲಾಗಿತ್ತು. ಅನಂತರ ಉದ್ಯಮಿಗಳ ಮನೆ ಹಾಗೂ ತೇಜಸ್‌ ಕಚೇರಿ ಬಳಿಯ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಅನುಮಾನಸ್ಪದವಾಗಿ ಓಡಾಡುತ್ತಿದ್ದರು. ಈ ಬಲವಾದ ಶಂಕೆ ಮೇಲೆ ತೇಜಸ್‌ನ ಚಲನವಲನಗಳು ಹಾಗೂ ಮೊಬೈಲ್‌ ನೆಟ್‌ವರ್ಕ್‌ ಪರಿಶೀಲಿಸಿದಾಗ ಕೆಲ ಮಹತ್ವದ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಂಟಿ ವ್ಯವಹಾರ: ಹತ್ಯೆಯಾದ ಇಬ್ಬರು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಹಾಗೂ ಆರೋಪಿ ತೇಜಸ್‌ ಜಂಟಿಯಾಗಿ ಬಹುಮಹಡಿ ಕಟ್ಟಡ ನಿರ್ಮಿಸುತ್ತಿದ್ದರು. ಈ ವೇಳೆ ತೇಜಸ್‌ ಉದ್ಯಮಿಗಳಿಂದ 60 ಲಕ್ಷ ರೂ. ಪಡೆದುಕೊಂಡಿದ್ದ. ಅನಂತರ ಕಟ್ಟಡ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತು ಹೋಗಿತ್ತು. ಹೀಗಾಗಿ ಉದ್ಯಮಿಗಳು ಹಣ ಹಿಂದಿರುಗಿಸುವಂತೆ ಒತ್ತಡ ಹಾಕಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಆರೋಪಿ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next