Advertisement

ದೇಶದಲ್ಲಿ ಭಜನೆಗಿಂತ ವಿಭಜನೆಯೇ ಹೆಚ್ಚು

12:24 PM May 24, 2017 | |

ಬೆಂಗಳೂರು: ದೇಶದಲ್ಲಿ ಭಜನೆಗಿಂತ ವಿಭಜನೆಯೇ ಜಾಸ್ತಿಯಾಗಿದೆ ಎಂದು ಬೇಲೀಮಠದ ಶಿವರುದ್ರಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ಮಹೇಶ್‌ ಲಲಿತಕಲಾ ಸಂಸ್ಥೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ “ಭಾರತೀಯ ಸಾಂಸ್ಕೃತಿಕ ಹಬ್ಬ-2017’ರ ಅಂಗವಾಗಿ ಆಯೋಜಿಸಿದ್ದ ಸಂತ ಶಿಶುನಾಳ ಶರೀಫ‌ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

Advertisement

ಬೆಳಕೇ ಧರ್ಮ. ದೀಪದ ಕಂಬಗಳೆಲ್ಲ ನಮ್ಮ ಸಾಧನೆ. ತಾನು ಇವುರವರೆಗೆ ದೀಪ ಬೆಳಕು ನೀಡುತ್ತದೆ. ಅಂತೆಯೇ ಶಿಶುನಾಳ ಶರೀಫ‌ರು ಕೂಡ ಅಂತಹದ್ದೇ ಜ್ಯೋತಿ ಇದ್ದಂತೆ. ಆದರೆ, ಅಂತಹ ಮಹಾತ್ಮರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದ್ದ ನಾವು, ಜಾತಿ, ಧರ್ಮದ ಹೆಸರಿನಲ್ಲಿ ಒಡೆದುಹೋಗುತ್ತಿರುವುದು ವಿಷಾದನೀಯ ಎಂದು ಹೇಳಿದರು.

ಸಂತ ಶಿಶುನಾಳ ಶರೀಫ‌ರ ಮಾನವೀಯತೆಯ ಮೌಲ್ಯಗಳು  ಹಾಗೂ ಕುದ್ಮಲ್‌ ರಂಗರಾಯನ ಸಾಮಾಜಿಕ ನ್ಯಾಯ ಕುರಿತು ಚಿಂತನೆಗಳು ದೇಶವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಪರಿವರ್ತಿಸಿದೆ. ಇವರು ಹಚ್ಚಿರುವ ಅರಿವಿನ ದೀಪದಿಂದ ನಾವೆಲ್ಲರೂ ಹೊಸ ಚೈತನ್ಯ ಪಡೆಯಬೇಕಾಗಿದೆ.

“ಅಸ್ಪೃಶ್ಯ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಉನ್ನತವಾದ ಹುದ್ದೆಯನ್ನು ಅಲಂಕರಿಸಿ ಆತನು ಕಾರಿನಲ್ಲಿ ಹೋಗುವಾಗ ಆ ಕಾರಿನ ಚಕ್ರದ ಧೂಳು ನನ್ನ ಸಮಾಧಿಯ ಮೇಲೆ ಬಿದ್ದ ದಿನ ನನ್ನ ಆತ್ಮಕ್ಕೆ ಶಾಂತಿ’ ಎಂದು ಕುದ್ಮಲ್‌ ರಂಗರಾಯರ  ಸಮಾಧಿಯ ಮೇಲೆ ಅವರದೇ ವಾಕ್ಯವೊಂದನ್ನು ಬರೆಯಲಾಗಿದೆ. ಇಂತಹ ಮಹಾನ್‌ ವ್ಯಕ್ತಿಗಳ ಬದುಕು ನಮ್ಮೆಲ್ಲರಿಗೂ  ಮಾದರಿಯಾಗಲಿ ಎಂದು ಹೇಳಿದರು.

ನಮ್ಮಲ್ಲಿ ಅನೇಕರು ಶರಣರ ತತ್ವಗಳು ಮತ್ತು ಮಹಾತ್ಮರ ತತ್ವಾದರ್ಶನಗಳ ಕುರಿತು ಗಂಟೆಗಟ್ಟಲೆ ಮಾತನಾಡುತ್ತಾರೆ. ಅದನ್ನು ಕೇಳಿ ಚಪ್ಪಾಳೆ ತಟ್ಟುವವರು ಇದ್ದಾರೆ. ಆದರೆ, ಅದೇ ಆದರ್ಶ, ತತ್ವಗಳನ್ನು ಪಾಲಿಸುವವರು ಯಾರು ಇಲ್ಲ. ಈ ರೀತಿಯ ಕಟಾಚಾರದ ಬದುಕಿನಿಂದ ಒಳ್ಳೆಯ ವ್ಯಕ್ತಿತ್ವವನ್ನಾಗಿ ಹಾಗೂ ಸಮಾಜಮುಖೀ ಬದುಕನ್ನು ರೂಪಿಸಲು ಸಾಧ್ಯವಿಲ್ಲ ಎಂದರು.

Advertisement

ಲೋಕಾಯುಕ್ತ ನಿವೃತ್ತ ನ್ಯಾ.ಸಂತೋಷ್‌ ಹೆಗಡೆ ಮಾತನಾಡಿ, ಸಮಾಜಲ್ಲಿ ಕೆಲವು ಸ್ವಾರ್ಥಿಗಳು ಹೊಂದಿರುವ ದುರಾಸೆಯ ಕಾರಣದಿಂದಾಗಿ ದೇಶದಲ್ಲಿ ಭ್ರಷ್ಟತೆ, ಸಂಪತ್ತಿನ ಅಸಮಾನ ಹಂಚಿಕೆ ಹೆಚ್ಚಾಗಿದೆ. ಈ ಭ್ರಷ್ಟತೆಯನ್ನು ಹೋಗಲಾಡಿಸಬೇಕಾದರೆ ಮುಂದಿನ ದಿನಗಳಲ್ಲಿ ಅಧಿಕಾರ ವಹಿಸಿಕೊಳ್ಳುವ ಯುವ ಜನತೆ ತೃಪ್ತಿಯೆಂಬ ಮನಸ್ಥಿತಿಯನ್ನು ಹೊಂದುವ ಮೂಲಕ ಎಲ್ಲ ರೀತಿಯ ಭ್ರಷ್ಟತೆಗೂ ಕಡಿವಾಣ ಹಾಕಬೇಕು.

ಪ್ರತಿ ಮನೆಗಳಲ್ಲಿ ಮಹಿಳೆಯರು ಪ್ರಾಮಾಣಿಕರಾಗಿದ್ದರೆ ಆ ಮನೆಯವರು ಭ್ರಷ್ಟರಾಗಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಮಹಿಳೆಯರು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನುಬಳಿಗಾರ್‌ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ನಗರ ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಎಂ.ಮುನಿರಾಜು, ಸಮಾಜ ಸೇವಕ ಎಸ್‌.ಎ.ಹಿರೇಮ, ಸಂಸ್ಥೆ ಅಧ್ಯಕ್ಷ ಮಹೇಶ್‌ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರು
ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾನಿರ್ದೇಶಕ ಡಾ.ಮಹೇಶ್‌ ಜೋಶಿ, ಹಿರಿಯ ಪತ್ರಕರ್ತ ಕೆ.ಎಸ್‌.ಜನಾರ್ಧನಚಾರಿ, ಪರಿಸರ ಪ್ರೇಮಿ ಡಾ.ಈಶ್ವರ ಎಸ್‌.ರಾಯಡು, ಸಂಗೀತ ವಿದ್ವಾಂಸ ಡಾ.ವಸುಧ ಶ್ರೀನಿವಾಸ್‌, ಸಂಗೀತ ನಿರ್ದೇಶಕ ಪಂಡಿತ್‌ ದೇವೇಂದ್ರ ಕುಮಾರ್‌ ಮುಧೋಳ್‌, ಸಮಾಜ ಸೇವಕರಾದ ಕೆ.ವೆಂಕಟೇಶ್ವರ ಶಾಸಿŒ, ಎ.ವೆಂಕಟೇಶ್‌, ಛಾಯಾಗ್ರಾಹಕ ಮನೋಹರ್‌ ಪತ್ತಾರ್‌, ಹಿನ್ನೆಲೆ ಗಾಯಕ ಡಾ.ಎಲ್‌.ಆರ್‌.ರಾಮಾನುಜಂ, ಚಿತ್ರಕಲಾವಿದ ಗುರುನಾಥ ವೀರಭದ್ರಪ್ಪ ಪತ್ತಾರ್‌ ಅವರಿಗೆ ಸಂತ ಶಿಶುನಾಳ ಶರೀಫ‌ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next