ಈಶಾನ್ಯ ರಾಜ್ಯದ ಮಣಿಪುರದಲ್ಲಿ 2017ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ, ಎರಡನೇ ಅವಧಿಗೆ ಮುಂದುವರಿಯಲು ಸಿದ್ಧತೆ ನಡೆಸಿದೆ. ಚುನಾವಣೆಯ ವೇಳಾಪಟ್ಟಿ ಪ್ರಕಟವಾಗುವುದಕ್ಕೆ ಮೊದಲು ಮತ್ತು ಅನಂತರ ಕೆಲವು ಇಂಗ್ಲಿಷ್ ಸುದ್ದಿವಾಹಿನಿಗಳು ನಡೆಸಿದ ಸಮೀಕ್ಷೆಯ ಪ್ರಕಾರ ಬಿಜೆಪಿ ಆಡಳಿತದಲ್ಲಿ ಮುಂದುವರಿಯುವ ಸಾಧ್ಯತೆಯ ಬಗ್ಗೆ ಹೇಳಿಕೊಂಡಿವೆ.
ಇದರ ಹೊರತಾಗಿಯೂ ಒಂದಷ್ಟು ಅಂಶಗಳು ಅದಕ್ಕೆ ತೊಡಕಾದರೂ ಅಚ್ಚರಿ ಏನಿಲ್ಲ. 60 ಕ್ಷೇತ್ರಗಳಿಗೆ ಏಕಾಂಗಿಯಾಗಿ ಸ್ಪರ್ಧೆ ಮಾಡುವ ಬಗ್ಗೆ ಈಗಾಗಲೇ ಬಿಜೆಪಿ ಘೋಷಣೆ ಮಾಡಿದೆ ಮತ್ತು ಅಷ್ಟೂ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಅದರಲ್ಲಿ ಕಾಂಗ್ರೆಸ್‌ನಿಂದ ಸೇರ್ಪಡೆಗೊಂಡ 16 ಮಂದಿಯ ಪೈಕಿ ಹತ್ತು ಮಂದಿ ಸೇರಿದ್ದಾರೆ.
ಟಿಕೆಟ್ ವಿತರಣೆಯಲ್ಲಿ ಅನ್ಯಾಯವಾಗಿದೆ ಎಂಬ ಆರೋಪ ಕೆಲವು ದಿನಗಳ ಹಿಂದೆ ಮಣಿಪುರದ ಹಲವು ಸ್ಥಳಗಳಲ್ಲಿ ಹಿಂಸಾಕೃತ್ಯಗಳಿಗೆ ಕಾರಣವಾಗಿತ್ತು. ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿರುವ ಸಾಗ್ಲೋಬಾಂದ್, ತಮೆಂಗ್ಲಾಂಗ್ ಜಿಲ್ಲೆಯ ತಾಮಿ, ಕಾಕ್‌ಚಿಂಗ್, ಮೊಯಿರಾಂಗ್, ಕಿಸಮ್‌ತಾಂಗ್ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಬೆಂಬಲಿಗರು ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಾಗ್ಲೋಬಾಂದ್‌ನಲ್ಲಿ ಮಾಜಿ ಶಾಸಕ ಲೊಕೇನ್ ಸಿಂಗ್ ಅವರನ್ನು ಕೈಬಿಟ್ಟು ಆರ್. ಕೆ. ಇಮೋ ಸಿಂಗ್ ಅವರಿಗೆ ಟಿಕೆಟ್ ನೀಡಲಾಗಿದೆ. ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದವರು. ಹೀಗಾಗಿ ಸ್ಪರ್ಧೆ ಮಾಡುವ ನಿರೀಕ್ಷೆಯಲ್ಲಿದ್ದ ಬಿಜೆಪಿ ಮುಖಂಡರ ಬೆಂಬಲಿಗರು, ಮುಖ್ಯಮಂತ್ರಿ ಎನ್. ಬೈರೇನ್ ಸಿಂಗ್ ಮತ್ತು ಮಣಿಪುರ ಬಿಜೆಪಿ ಘಟಕದ ಅಧ್ಯಕ್ಷೆ ಶಾರದಾ ದೇವಿ ಅವರ ಪ್ರತಿಕೃತಿ ದಹಿಸಿದ್ದಾರೆ. ತಾಂಗಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿರುವ ಟಿ.ರವೀಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ.
ಪಕ್ಷದ ಅಭ್ಯರ್ಥಿಗೆ ಟಿಕೆಟ್ ನೀಡದೇ ಇದ್ದ ಕಾರಣಕ್ಕಾಗಿ ಖನ್‌ಗಾಬಾಕ್ ಬಿಜೆಪಿ ಘಟಕದ ಎಲ್ಲ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ-ಅವಕಾಶ ಸಿಕ್ಕಿಲ್ಲ ಎಂಬ ಕಾರಣಕ್ಕೆ ಪಕ್ಷದ ಹಿರಿಯ ನಾಯಕ ಲೊರೆಂಬಾಮ್ ಸಂಜಯ ಸಿಂಗ್ ನ್ಯಾಶನಲ್ ಪೀಪಲ್ಸ್ ಪಾರ್ಟಿಯ ಬಳಿ ಸಾರಿದ್ದಾರೆ. ಇದು ಈಶಾನ್ಯ ರಾಜ್ಯದಲ್ಲಿ ಟಿಕೆಟ್ ಸಿಗದ್ದಕ್ಕೆ ಬಿಜೆಪಿಗೆ ಉಂಟಾದ ಮೊದಲ ಆಘಾತ.
ಮನದಲ್ಲೇ ಖುಷಿ ಬಿಹಾರದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ಜೆಡಿಯು ಮಣಿಪುರದಲ್ಲಿ ಬಿಜೆಪಿಯ ಹಲವು ಅತೃಪ್ತರನ್ನು ಸೆಳೆದುಕೊಂಡಿದೆ. ಒಟ್ಟು ಹದಿನೈದು ಮಂದಿ ನಾಯಕರು ಜೆಡಿಯುಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಬೃಹತ್ ಪ್ರಮಾಣದಲ್ಲಿ ಅಲ್ಲದೇ ಇದ್ದರೂ ಅಲ್ಪ ಪ್ರಮಾಣದಲ್ಲಿ ಬಿಜೆಪಿಗೆ ಏಟು ಕೊಡುವ ಪ್ರಯತ್ನ ಮಾಡಿದ್ದೇವೆ ಎಂದು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಮನಸ್ಸಿನಲ್ಲಿಯೇ ಖುಷಿಪಟ್ಟಿರಬಹುದು.
ಕಾಂಗ್ರೆಸ್‌ನ ಹಿರಿಯ ಮುಖಂಡ ರಾಗಿದ್ದ, ಶಾಸಕ ಕೆ.ಎಚ್.ಜೊಯ್ ಕೃಷ್ಣ, ಮಾಜಿ ಶಾಸಕ ಮೊಹಮ್ಮದ್ ಅಬ್ದುಲ್ ನಾಸಿರ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಏನಾದರೂ ಮಾಡಿ ಮತಗಳ ಹೊಡೆತ ನೀಡಬಹುದು ಎಂಬ ಲೆಕ್ಕಾಚಾರ ಅದರದ್ದು.
ಬಿಜೆಪಿಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕೋಪದಿಂದ ಶಾಸಕ ಪಿ.ಶರತ್‌ಚಂದ್ರ ಮತ್ತು ಇತರ ಕೆಲವು ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿಯ ವರಿಷ್ಠರಿಗೆ ಇತ್ತೀಚೆಗೆ ನಡೆದ ಹಿಂಸಾತ್ಮಕ ಘಟನೆಗಳು ಆತಂಕ ತಂದದ್ದಂತೂ ನಿಜವೇ. ಏಕೆಂದರೆ 60 ಸದಸ್ಯ ಬಲದ ಸದನದಲ್ಲಿ ಸರಳಬಹುಮತಕ್ಕೆ 31 ಶಾಸಕರ ಬಲ ಬೇಕು. ಹೀಗಾಗಿ ಯಾವ ಪಕ್ಷಕ್ಕಾದರೂ ಒಂದು ಕ್ಷೇತ್ರ ನಷ್ಟವಾದರೂ ನಷ್ಟವೇ. ಹೀಗಾಗಿ ಗರಿಷ್ಠ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ. ಫೆ.27ತ್ತು ಮಾ.3ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ