ಕೋಟ: ಪಂಚಾಯತ್ ಪ್ರತಿನಿಧಿಗಳ ಕ್ರೀಡಾಕೂಟದಲ್ಲಿ ಎಲ್ಲರೂ ಸೇರುವುದರಿಂದ ಜನಪ್ರತಿನಿಧಿಗಳ ನಡುವಿನ ಪಕ್ಷಭೇದ ಮರೆ ಯಲು ಸಾಧ್ಯವಿದೆ ಎಂದು ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಹೇಳಿದರು.
ಅವರು ಕೋಟತಟ್ಟು ಗ್ರಾ.ಪಂ., ಡಾ| ಶಿವರಾಮ ಕಾರಂತ ಪ್ರತಿಷ್ಠಾನ ಕೋಟ ಆಶ್ರಯದಲ್ಲಿ ರವಿವಾರ ಕೋಟ ವಿವೇಕ ವಿದ್ಯಾ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಉಡುಪಿ ಹಾಗೂ ದ.ಕ. ಜಿಲ್ಲೆಗಳ ಸ್ಥಳೀಯಾಡಳಿತ ಹಾಗೂ ನಗರಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳ ಕ್ರೀಡಾಕೂಟ “ಹೊಳಪು’ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ರಾಜ್ಯ ಸಹಕಾರಿ ಮಾರಾಟ ಮಹಾ ಮಂಡಲದ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಕ್ರೀಡಾಕೂಟ ಉದ್ಘಾಟಿಸಿದರು. ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಹಂದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಕ್ರೀಡಾ ಧ್ವಜಾರೋ ಹಣಗೈದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಧರ್ಮದರ್ಶಿ ಹರೀಶ್ ಕುಮಾರ್ ಬಲೂನ್ ಹಾರಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಕುಂದಾಪುರ ತಾ.ಪಂ. ಅಧ್ಯಕ್ಷ ಜಯಶ್ರೀ ಮೊಗವೀರ, ಜಿಲ್ಲಾ ಯುವಜನ ಸಬಲೀಕರಣ ಅಧಿಕಾರಿ ರೋಶನ್ ಶೆಟ್ಟಿ, ಕೋಟ ವಿವೇಕ ಪ.ಪೂ. ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವುಡ, ವಕೀಲ ಟಿ.ಬಿ. ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಹಿರಿಯ ಚಿಂತಕ ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ, ತಿಮ್ಮ ಪೂಜಾರಿ, ಗೋವಿಂದ ಬಿಜೂರು, ಮಾಲತಿ ಶೆಟ್ಟಿ, ಶಿಲ್ಪಾ ಹರಿಶ್ಚಂದ್ರ ಶೆಟ್ಟಿ, ಉಡುಪಿ ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್, ಶ್ರೀಲತಾ ಸುರೇಶ ಶೆಟ್ಟಿ, ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ್ಷ ಸುಬ್ರಾಯ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.
ದೈ.ಶಿ. ಶಿಕ್ಷಕ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್ ಸ್ವಾಗತಿಸಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾವನೆಗೈದರು. ಯಡ್ತಾಡಿ ಗ್ರಾ.ಪಂ. ಸದಸ್ಯ ಗೌತಮ್ ಹೆಗ್ಡೆ ಕ್ರೀಡಾ ಪ್ರಮಾಣ ಬೋಸಿದರು ಹಾಗೂ ಪಿಡಿಒ ಹರೀಶ್ ಶೆಟ್ಟಿ ವಂದಿಸಿದರು.
ಕ್ರೀಡಾಕೂಟ ಆರಂಭದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಪಂ. ಸದಸ್ಯರು ಪಥಸಂಚ ಲನ ನಡೆಸಿದರು. ಪಥಸಂಚಲನ ಸ್ಪರ್ಧೆಯಲ್ಲಿ ಕೋಟ ಗ್ರಾ.ಪಂ. ಪ್ರಥಮ ಸ್ಥಾನ, ವಡ್ಡರ್ಸೆ ದ್ವಿತೀಯ, ಯಡ್ತಾಡಿ ತೃತೀಯ ಸ್ಥಾನ ಪಡೆಯಿತು. ರಾಷ್ಟ್ರೀಯ ಕ್ರೀಡಾಪಟು ಪ್ರವೀಣ್ ಶೆಟ್ಟಿ ಕ್ರೀಡಾ ಜ್ಯೋತಿ ಮುನ್ನಡೆಸಿದರು. ಕ್ರೀಡಾಕೂಟದಲ್ಲಿ 100 ಮೀ. ಓಟ, ಗುಂಡೆಸೆತ, ರಿಂಗ್ ಇನ್ ದಿ ವಿಕೆಟ್, ಸುಪರ್ ಮಿನಿಟ್, ತ್ರೋಬಾಲ್, ಹಗ್ಗ ಜಗ್ಗಾಟ ಮುಂತಾದ ಕ್ರೀಡಾಕೂಟ, ಗಾಯನ, ಛದ್ಮವೇಷ, ರಸಪ್ರಶ್ನೆ, ಮುಂತಾದ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.