Advertisement
ಚಿಕ್ಕಬಳ್ಳಾಪುರ: ಸುಧಾಕರ್ ಬಿಜೆಪಿನಾ, ಪಕ್ಷೇತರನಾ?ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದ ಉಪ ಚುನಾವಣಾ ಕದನ ಸಾಕಷ್ಟು ರಂಗೇರಲಿದ್ದು, ಅಖಾಡದ ಚಿತ್ರಣವೇ ಬದಲಾಗುವ ಸಾಧ್ಯತೆ ಇದೆ. ಡಾ.ಕೆ.ಸುಧಾಕರ್ ಅವರ ಸ್ಪರ್ಧೆ ಸದ್ಯಕ್ಕೆ ಸ್ವತಂತ್ರನಾ? ಅಥವಾ ಬಿಜೆಪಿಯಿಂದಲಾ? ಎಂಬ ಗೊಂದಲವಿದೆ. ಬೆಂಬಲಿಗರು ಪಕ್ಷೇತರರಾಗಿ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಸುಧಾಕರ್ ಈ ಬಗ್ಗೆ ಇನ್ನೂ ಗೊಂದಲದಲ್ಲಿದ್ದಾರೆ. ಆದರೆ, ಸುಧಾಕರ್ ಸ್ಪರ್ಧೆಯಿಂದ ಚುನಾವಣಾ ಅಖಾಡ ಸಾಕಷ್ಟು ಸದ್ದು ಮಾಡುವುದಂತೂ ನಿಶ್ಚಿತ. ಸದ್ಯ ಕಾಂಗ್ರೆಸ್, ನಂದಿ ಅಂಜನಪ್ಪಗೆ ಟಿಕೆಟ್ ಘೋಷಣೆ ಮಾಡಿದ್ದರೂ, ಸುಧಾಕರ್ ಸ್ಪರ್ಧೆ ಖಚಿತವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್, ತನ್ನ ಅಭ್ಯರ್ಥಿ ಬದಲಾವಣೆ ಕುರಿತು ಸಾಕಷ್ಟು ಚಿಂತನೆ ನಡೆಸಿದೆ ಎಂಬ ಮಾತು ಕೇಳಿ ಬರುತ್ತಿದೆ. ಅಂಜನಪ್ಪ ಆಯ್ಕೆಗೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ವಿರೋಧಿಸಿದರೆ, ಎನ್.ಎಚ್.ಶಿವಶಂಕರರೆಡ್ಡಿ ಅಭ್ಯರ್ಥಿ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. ಜೆಡಿಎಸ್‌ನಲ್ಲಿ ಎರಡನೇ ಹಂತದ ಮುಖಂಡರು ಈಗಾಗಲೇ ಕಾಂಗ್ರೆಸ್ ಸೇರಿಕೊಂಡು ಅಂಜನಪ್ಪ ಪರ ಬಹಿರಂಗವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಜೆಡಿಎಸ್‌ನ ಮಾಜಿ ಶಾಸಕ ಬಚ್ಚೇಗೌಡ ಸ್ಪರ್ಧೆಗೆ ನಿರಾಸಕ್ತಿ ತೋರಿದ್ದು, ತಮ್ಮ ಬದಲಿಗೆ ಮತ್ತೂಬ್ಬ ಅಭ್ಯರ್ಥಿಯ ಹುಡುಕಾಟ ನಡೆಸುವಂತೆ ವರಿಷ್ಠರಿಗೆ ಸೂಚಿಸಿದ್ದಾರೆ. ಹೀಗಾಗಿ, ಜೆಡಿಎಸ್ ಸ್ಪರ್ಧೆ ಅನುಮಾನವಾಗಿದ್ದು, ಯಾರನ್ನು ಬೆಂಬಲಿಸುತ್ತದೆ ಎನ್ನುವ ಕುತೂಹಲವಿದೆ.
ಮೈಸೂರು: ಹುಣಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಚ್. ಪಿ.ಮಂಜುನಾಥ್ ಈಗಾಗಲೇ ನಾಮಪತ್ರ ಸಲ್ಲಿಸಿ, ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಆಡಳಿತಾರೂಢ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಯಾರೆಂಬುದು ಇನ್ನಷ್ಟೇ ಅಂತಿಮವಾಗಬೇಕಿದೆ. ಯಡಿಯೂರಪ್ಪ ಸರ್ಕಾರದ ಉಳಿವಿನ ದೃಷ್ಟಿಯಿಂದ ಈ ಉಪ ಚುನಾವಣೆಯಲ್ಲಿ ಬಿಜೆಪಿಗೆ ಒಂದೊಂದು ಸ್ಥಾನಗಳ ಗೆಲುವೂ ಮಹತ್ವದ್ದಾಗಿದೆ. ಬಿಜೆಪಿ ನಾಯಕರು ಇದೀಗ ಭಾರೀ ಲೆಕ್ಕಾಚಾರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಿದೆ. ಹೀಗಾಗಿ, ಸಿ.ಪಿ.ಯೋಗೀಶ್ವರ್, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಮಾಜಿ ಸಚಿವ ಎಚ್.ವಿಶ್ವನಾಥ್ ಪುತ್ರ ಅಮಿತ್ ವಿ.ದೇವರಹಟ್ಟಿ, ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಎಸ್.ಯೋಗಾ ನಂದ ಕುಮಾರ್ ಅವರ ಹೆಸರುಗಳು ಕೇಳಿ ಬರುತ್ತಿವೆ. ಇನ್ನು, ಸಂಸದ ಪ್ರತಾಪ್ ಸಿಂಹ ಅವರು ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರ ಪುತ್ರ ಜಿ.ಡಿ.ಹರೀಶ್ ಗೌಡ ಅವರನ್ನು ಪಕ್ಷಕ್ಕೆ ಕರೆ ತಂದು ಅಭ್ಯರ್ಥಿಯನ್ನಾಗಿಸಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಎಚ್.ವಿಶ್ವನಾಥ್ ಪ್ರತಿಕ್ರಿಯಿಸಿ, ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದಿದ್ದಾರೆ. ಈ ಮಧ್ಯೆ, ದೇವರಹಳ್ಳಿ ಸೋಮಶೇಖರ್ ಎಂಬುವರು ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಳ್ಳುತ್ತಿದ್ದರೂ, ಜೆಡಿಎಸ್ ನಾಯಕರು ತಮ್ಮ ನಡೆಯೇನು ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಕೆ.ಆರ್.ಪೇಟೆ: ನಾರಾಯಣಗೌಡ ನಿಟ್ಟುಸಿರು
ಮಂಡ್ಯ: ಸುಪ್ರೀಂ ತೀರ್ಪಿನಿಂದ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡರಲ್ಲಿ ನಿರಾಳಭಾವ ಮೂಡಿದೆ. ಅಘೋಷಿತ ಬಿಜೆಪಿ ಅಭ್ಯರ್ಥಿಯಾಗಿ ಕ್ಷೇತ್ರದೊಳಗೆ ಚುನಾವಣಾ ಪೂರ್ವ ತಯಾರಿ ನಡೆಸಿದ್ದ ನಾರಾಯಣಗೌಡರು, ಸುಪ್ರೀಂ ತೀರ್ಪನ್ನು ಕಾತುರದಿಂದ ಎದುರು ನೋಡುತ್ತಿದ್ದರು. ಈಗ ಉಪ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ದೊರಕಿರುವುದರಿಂದ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಿಲ್ಲ ಎಂಬ ಕಾರಣ ಮುಂದಿಟ್ಟು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಇದು ಜೆಡಿಎಸ್ ಭದ್ರಕೋಟೆಯೊಳಗೆ ಮಿಂಚಿನ ಸಂಚಲನ ಸೃಷ್ಠಿಸಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ 212 ಕೋಟಿ ರೂ. ಏತ ನೀರಾವರಿ ಯೋಜನೆಗೆ ಚಾಲನೆ ನೀಡಿ ಜನರ ವಿಶ್ವಾಸ ಗಳಿಸಲು ಮುಂದಾಗಿರುವ ನಾರಾಯಣಗೌಡರು, 1 ಸಾವಿರ ಕೋಟಿ ರೂ.ಅನುದಾನ ಕೊಡಲು ಸಿಎಂ ಭರವಸೆ ನೀಡಿದ್ದಾರೆ ಎಂದು ಹೇಳುತ್ತಾ ಕ್ಷೇತ್ರದೊಳಗೆ ಮತಬೇಟೆಗೆ ಇಳಿದಿದ್ದಾರೆ. ಸುಪ್ರೀಂ ತೀರ್ಪು ಅನರ್ಹ ಶಾಸಕರ ಪರವಾಗಿ ಬರಲೆಂದು ನಾರಾಯಣಗೌಡರ ಅಭಿಮಾನಿಗಳು ಹಾಗೂ ಬೆಂಬಲಿಗರು ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿದ್ದರು. ಈ ಮಧ್ಯೆ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡೆ ಇನ್ನೂ ಸ್ಪಷ್ಟವಾಗಿಲ್ಲ.
Related Articles
ಬೆಂಗಳೂರು: ಪಕ್ಷದ ನಾಯಕರ ವಿರುದ್ಧ ಬಂಡಾಯ ಸಾರಿ ರಾಜೀನಾಮೆ ಸಲ್ಲಿಸಿದ್ದ ಯಶವಂತಪುರ ಕ್ಷೇತ್ರದ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್‌ಗೆ, ಈ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಸೋಮಶೇಖರ್ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ನೂರಾರು ಕೋಟಿ ರೂ.ಅನು ದಾನ ತೆಗೆದುಕೊಂಡು ಹೋಗಿದ್ದು, ಕ್ಷೇತ್ರದಲ್ಲಿ ಪಕ್ಷಕ್ಕಿಂತಲೂ ಹೆಚ್ಚಾಗಿ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ಆದರೆ, ಬಲವಾದ ಕಾರಣವಿಲ್ಲದೇ ಪಕ್ಷಾಂತರ ಮಾಡಿದ್ದಾರೆ ಎಂಬ ಆರೋಪ ಇರುವುದರಿಂದ ಅವರು ಚುನಾವಣೆಯಲ್ಲಿ ಗೆಲ್ಲಲು ಬೆವರು ಹರಿಸಬೇಕಾಗಿದೆ. ಅಲ್ಲದೇ, ಜೆಡಿಎಸ್‌ನ ಜವರಾಯಿಗೌಡ ಕಳೆದ ಚುನಾವಣೆಯಲ್ಲಿ ಅತಿ ಕಡಿಮೆ ಅಂತರದಿಂದ ಸೋಲಿನ ಕಹಿ ಅನುಭವಿಸಿದ್ದಾರೆ. ಅವರ ಬಗ್ಗೆ ಕ್ಷೇತ್ರದ ಜನರಲ್ಲಿ ಸಹಾನುಭೂತಿ ಇದೆ. ಕಾಂಗ್ರೆಸ್‌ನಲ್ಲಿಯೂ ಒಕ್ಕಲಿಗ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಪ್ರಯತ್ನ ನಡೆಯುತ್ತಿದೆ. ನಾಯ್ಡು ಸಮುದಾಯದ ರಾಜಕುಮಾರ್ ಅವರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇದ್ದರೂ, ಮಾಜಿ ಶಾಸಕ ಪ್ರಿಯಾ ಕೃಷ್ಣ ಅವರನ್ನು ಕಣಕ್ಕಿಳಿಸಿದರೆ, ಕ್ಷೇತ್ರದಲ್ಲಿ ಮೂರು ಪ್ರಮುಖ ಪಕ್ಷಗಳು ಒಕ್ಕಲಿಗ ಸಮುದಾಯದವರನ್ನೇ ಕಣಕ್ಕಿಳಿಸಿದಂತಾ ಗುತ್ತದೆ. ಹೀಗಾಗಿ, ಕ್ಷೇತ್ರದಲ್ಲಿ ಬೇರೆ ಸಮುದಾಯದ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯುವುದು ಮೂರೂ ಪಕ್ಷಗಳ ಅಭ್ಯರ್ಥಿಗಳಿಗೆ ಸವಾಲಾಗಿ ಪರಿಣಮಿಸಲಿದೆ.
Advertisement
ಮಹಾಲಕ್ಷ್ಮಿ ಬಡಾವಣೆ: ಜೆಡಿಎಸ್ ನಡೆ ಕುತೂಹಲಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಗೋಪಾಲಯ್ಯ ಅವರು ಕೊನೆ ಕ್ಷಣದಲ್ಲಿ ಏಕಾಏಕಿ ರಾಜೀ ನಾಮೆ ಸಲ್ಲಿಸಿ ಅನರ್ಹರಾಗಿದ್ದು, ಈಗ ಬಿಜೆಪಿಯಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯವೇ ನಿರ್ಣಾಯಕ ಆಗಿದ್ದರೂ, ಕ್ಷೇತ್ರದಲ್ಲಿ ತಮ್ಮ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಂಡು ಗೌಡರ ವಿರೋಧ ಕಟ್ಟಿಕೊಂಡಿದ್ದಾರೆ. ಅವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್, ಕುರುಬ ಸಮುದಾಯದ ಬಿಬಿಎಂಪಿ ಸದಸ್ಯ ಎಂ.ಶಿವರಾಜ್ ಅವ ರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಆದರೆ, ಈ ಕ್ಷೇತ್ರ ದಲ್ಲಿ ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಒತ್ತಡ ಕೇಳಿ ಬಂದಿದ್ದು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಆಪ್ತ ಎನ್‌ಎಸ್‌ಯುದ ಅಧ್ಯಕ್ಷ ಮಂಜುನಾಥ್ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದರು. ಆದರೆ, ತರಾತುರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿರು ವುದರಿಂದ ಡಿ.ಕೆ.ಶಿವಕುಮಾರ್ ನಡೆ ಪ್ರಮುಖವಾಗುವ ಸಾಧ್ಯತೆ ಇದೆ. ಅಲ್ಲದೇ, ಜೆಡಿಎಸ್ ಕೂಡ ಈ ಕ್ಷೇತ್ರದಲ್ಲಿ ಪ್ರಬಲವಾಗಿದ್ದು, ದೇವೇಗೌಡರು ಯಾರನ್ನು ಅಭ್ಯರ್ಥಿಯನ್ನಾಗಿಸುತ್ತಾರೆ ಎನ್ನುವ ಕುತೂಹಲ ಇನ್ನೂ ಇದೆ. ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಹಾಗೂ ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಅವರ ಹೆಸರುಗಳೂ ಕೂಡ ಜೆಡಿಎಸ್ ಪಾಳಯದಿಂದ ಕೇಳಿ ಬರುತ್ತಿರುವುದರಿಂದ ಗೌಡರ ನಡೆ ನಿರ್ಣಾಯಕವಾಗಲಿದೆ. ಯಲ್ಲಾಪುರ: ಭೀಮಣ್ಣನ ಜತೆ ಹೆಬ್ಬಾರ್ ಕುಸ್ತಿ
ಕಾರವಾರ: ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಅನರ್ಹರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿರುವ ಕಾರಣ, ಶಿವರಾಮ ಹೆಬ್ಬಾರ ಅವರ ಹಾದಿ ಸುಗಮವಾಗಿದೆ. ಆದರೆ, ಕಮಲ ಚಿಹ್ನೆಯಿಂದ ಗೆಲ್ಲಬೇಕಾದ ದೊಡ್ಡ ಸವಾಲು ಅವರ ಮುಂದಿದೆ. ಕಾಂಗ್ರೆಸ್‌ನಿಂದ ಭೀಮಣ್ಣ ನಾಯ್ಕ ಪ್ರಬಲ ಪೈಪೋಟಿ ನೀಡುವುದು ಖಚಿತವಾಗಿದೆ. ಮಾಜಿ ಶಾಸಕ ವಿ.ಎಸ್. ಪಾಟೀಲ್ ಅವರು, ಸಿಎಂ ಯಡಿಯೂರಪ್ಪನವರ ಪರಮಾಪ್ತ ಶಿಷ್ಯರಾಗಿರುವ ಕಾರಣ ಅವರಿಗೆ ವಾಯವ್ಯ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಮಾಡಲಾಗಿದೆ. ಕಾಂಗ್ರೆಸ್, ಅಕ್ಟೋಬರ್ ಮಧ್ಯದಲ್ಲೇ ಭೀಮಣ್ಣ ನಾಯ್ಕರನ್ನು ಅಭ್ಯರ್ಥಿಯೆಂದು ಘೋಷಿಸಿದೆ. ಪಕ್ಷದ ಪದಾಧಿಕಾರಿಗಳನ್ನು ಯಲ್ಲಾಪುರ, ಮುಂಡಗೋಡ, ಬನವಾಸಿ ಭಾಗದಲ್ಲಿ ನೇಮಿಸಿ, ಪಕ್ಷಕ್ಕೆ ಬಲ ತುಂಬಲು ಯತ್ನಿಸಿದೆ. ಇದು ಬಿಜೆಪಿಗೆ ಕೊಂಚ ಹಿನ್ನಡೆ ತಂದಿದೆ. ಅಲ್ಲದೇ, ನೆರೆ ಪರಿಹಾರ ವಿಳಂಬ ಸಹ ಬಿಜೆಪಿ ಅಭ್ಯರ್ಥಿಗೆ ಪೆಟ್ಟು ಕೊಡಲಿದೆ. ಅನೇಕ ಸವಾಲುಗಳನ್ನು ಎದುರಿಸಿ, ಮೂಲ ಬಿಜೆಪಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉಪ ಚುನಾವಣಾ ಸಮರ ಎದುರಿಸಬೇಕಿದೆ. ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಅವರೇ ಹೇಳಿಕೊಳ್ಳದ ಸನ್ನಿವೇಶ ಈಗ ಎದುರಾಗಿದೆ. ವಿ.ಎಸ್.ಪಾಟೀಲ ಅವರು, ರಾಜಕೀಯ ತ್ಯಾಗ ಮಾಡಿಯಾಗಿದೆ. ಇದು ಮತಗಳಾಗಿ ಹೆಬ್ಬಾರರಿಗೆ ದಕ್ಕಬಹುದೇ ಎಂಬುದು ದೊಡ್ಡ ಪ್ರಶ್ನೆ. ಇದಕ್ಕೆಲ್ಲಾ ಕಾಲವೇ ಉತ್ತರ ಹೇಳಬೇಕಿದೆ. ಶಿವಾಜಿನಗರ: ರೋಷನ್ ಬೇಗ್ ವರ್ಸಸ್ ಅದರ್
ಬೆಂಗಳೂರು: ಉಪ ಚುನಾವಣೆ ಎದುರಿಸುತ್ತಿರುವ ಬೆಂಗಳೂರು ನಗರ ಜಿಲ್ಲೆಯ ಶಿವಾಜಿನಗರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಾಬಲ್ಯವಿದೆ. ಇಲ್ಲಿ ಜನತಾಪಕ್ಷ, ಜನತಾದಳದಿಂದಲೂ ಅಲ್ಪಸಂಖ್ಯಾತರು ಆರಿಸಿ ಬಂದಿದ್ದಾರೆ. ರಘುಪತಿ, ಎ.ಕೆ.ಅನಂತಕೃಷ್ಣ, ಸಿ.ಎಂ.ಇಬ್ರಾಹಿಂ ಅವರು ಈ ಹಿಂದೆ ಇಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಪ್ರಸ್ತುತ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ರೋಷನ್‌ಬೇಗ್ ರಾಜೀನಾಮೆ ನೀಡಿದ್ದು, ಇದೀಗ ಬಿಜೆಪಿಯಿಂದ ಸ್ಪರ್ಧೆ ಮಾಡ್ತಾರಾ? ಅಥವಾ ಪಕ್ಷೇತರ ಅಭ್ಯರ್ಥಿಯಾಗ್ತಾರಾ ಎಂಬ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್‌ನಿಂದ ಮೂವರು ಪ್ರಬಲ ಆಕಾಂಕ್ಷಿಗಳಿದ್ದು, ಅಲ್ಪಸಂಖ್ಯಾತರಿಗೆ ಮಣೆ ಹಾಕುವ ಸಾಧ್ಯತೆಯಿದೆ. ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಇನ್ನೂ ಖಚಿತವಾಗಿಲ್ಲ. ಆದರೆ, ಯಡಿಯೂರಪ್ಪ ಸರ್ಕಾರದ ಉಳಿವಿನ ದೃಷ್ಟಿಯಿಂದ ಈ ಉಪ ಚುನಾವಣೆಯಲ್ಲಿ ಬಿಜೆಪಿಗೆ ಒಂದೊಂದು ಸ್ಥಾನಗಳ ಗೆಲುವು ಕೂಡ ಮಹತ್ವದ್ದಾಗಿದೆ. ಹೀಗಾಗಿ, ಬಿಜೆಪಿ ನಾಯಕರು ಇದೀಗ ಭಾರೀ ಲೆಕ್ಕಾಚಾರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಿದೆ. ಅಂತಿಮವಾಗಿ, ಇಲ್ಲಿ ಯಾರೇ ಸ್ಪರ್ಧೆ ಮಾಡಿದರೂ ರೋಷನ್ ಬೇಗ್ ವರ್ಸಸ್ ಅದರ್ ಹೋರಾಟಕ್ಕೆ ಕ್ಷೇತ್ರ ಸಾಕ್ಷಿಯಾಗಲಿದೆ. ರೋಷನ್‌ಬೇಗ್ ಇಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದರೆ ಉಪ ಚುನಾವಣೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವುದಂತೂ ಖಚಿತ. ರಾಣಿಬೆನ್ನೂರು: ಶಂಕರ್-ಕೋಳಿವಾಡ ಹಣಾಹಣಿ
ಹಾವೇರಿ: ರಾಣಿಬೆನ್ನೂರು ಕ್ಷೇತ್ರದ ಉಪಚುನಾವಣೆ ಕಣ ಇನ್ನೂ ರಂಗೇರಿಲ್ಲ. ಆಡಳಿತಾರೂಢ ಬಿಜೆಪಿಯಲ್ಲಿ ಗೊಂದಲ ಮುಂದುವರಿದ್ದರೆ, ಕಾಂಗ್ರೆಸ್ ನಿರಾಳವಾಗಿದೆ. ಕ್ಷೇತ್ರದ ಅನರ್ಹ ಶಾಸಕ ಆರ್. ಶಂಕರ್ ಅವರು ಪಕ್ಷೇತರರಾಗಿ ಆಯ್ಕೆಯಾಗಿರುವುದರಿಂದ ಅವರು ಶಾಸಕರಾಗಿ ಮುಂದುವರಿಯುತ್ತಾರೆ. ರಾಣಿಬೆನ್ನೂರು ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಬಲವಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪೀಕರ್ ನೀಡಿದ ಆರ್.ಶಂಕರ್ ಅನರ್ಹತೆಯನ್ನು ಎತ್ತಿ ಹಿಡಿದು, ಉಪಚುನಾವಣೆಗೆ ಸ್ಪಧಿಸಲು ಅವಕಾಶ ನೀಡಿರುವುದು ಶಂಕರ್ ಅಸಮಾಧಾನಕ್ಕೆ ಕಾರಣವಾಗಿದೆ. ಶಂಕರ್‌ಗೆ ಬಿಜೆಪಿಯಿಂದ ಟಿಕೆಟ್ ಕೊಟ್ಟರೆ ಕ್ಷೇತ್ರದ ಬಿಜೆಪಿ ಮುಖಂಡರು ಇದನ್ನು ಸುಲಭವಾಗಿ ಸ್ವೀಕರಿಸುವ ಲಕ್ಷಣ ಇಲ್ಲ. ಡಾ.ಬಸವರಾಜ ಕೇಲಗಾರ, ಅರುಣಕುಮಾರ ಪೂಜಾರ, ನ್ಯಾಯವಾದಿ ಶಿವಲಿಂಗಪ್ಪ ಸೇರಿದಂತೆ ಇನ್ನಿತರರು ಪಕ್ಷದಿಂದ ಪ್ರಮುಖ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿ ಹೈಕಮಾಂಡ್, ಹಿರೇಕೆರೂರು ಕ್ಷೇತ್ರಕ್ಕೆ ನೀಡಿದ ಪ್ರಾಮುಖ್ಯತೆಯನ್ನು ರಾಣಿಬೆನ್ನೂರು ಕ್ಷೇತ್ರಕ್ಕೆ ನೀಡಿಲ್ಲ. ಇದು ಕೂಡ ಆರ್. ಶಂಕರ್‌ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಆದರೆ, ಕಾಂಗ್ರೆಸ್ ಮಾತ್ರ ಮಾಜಿ ಶಾಸಕ ಕೆ.ಬಿ.ಕೋಳಿವಾಡ ಅವರಿಗೆ ಟಿಕೆಟ್ ನಿಕ್ಕಿ ಮಾಡಿದೆ. ಹೊಸಕೋಟೆ: ತ್ರಿಕೋನ ಸ್ಪರ್ಧೆಗೆ ಕಣ ಸಜ್ಜು
ಬೆಂಗಳೂರು: ಬಿ.ಎನ್.ಬಚ್ಚೇಗೌಡ ಹಾಗೂ ಎಂ.ಟಿ.ಬಿ.ನಾಗರಾಜ್ ಕುಟುಂಬಗಳ ನಡುವಿನ ರಾಜಕೀಯ ವೈರತ್ವವೇ ಜಿದ್ದಾಜಿದ್ದಿ ಕ್ಷೇತ್ರವಾಗಿದೆ. ಬಿಜೆಪಿಗೆ ಇಲ್ಲಿ ಹೇಳಿಕೊಳ್ಳುವಂತಹ ನೆಲೆ ಇರಲಿಲ್ಲವಾದರೂ ಬಚ್ಚೇಗೌಡರ ಪ್ರವೇಶದ ನಂತರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ. ಯಡಿಯೂರಪ್ಪ ಸರ್ಕಾರದ ಉಳಿವಿನ ದೃಷ್ಟಿಯಿಂದ ಈ ಉಪ ಚುನಾವಣೆಯಲ್ಲಿ ಬಿಜೆಪಿಗೆ ಒಂದೊಂದು ಸ್ಥಾನಗಳ ಗೆಲುವು ಮಹತ್ವದ್ದಾಗಿದೆ. ಹೀಗಾಗಿ, ಬಿಜೆಪಿ ನಾಯಕರು ಲೆಕ್ಕಾಚಾರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದರೂ ಆಗಿರುವ ಬಚ್ಚೇಗೌಡರು ಒಕ್ಕಲಿಗ ಸಮುದಾಯದಲ್ಲೂ, ಪ್ರಭಾವಿ ನಾಯಕರು. ಮೂಲತ: ಕಾಂಗ್ರೆಸ್‌ನವರಾದ ಎಂ.ಟಿ.ಬಿ.ನಾಗರಾಜ್ ಅವರು ಮೂರು ಬಾರಿ ಶಾಸಕರಾಗಿದ್ದು, ಈಗ ಪಕ್ಷ ಬದಲಿಸಿ ಬಿಜೆಪಿಯಿಂದ ಸ್ಪರ್ಧೆಗೆ ಮುಂದಾಗಿದ್ದಾರೆ. ಆದರೆ, ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಶರತ್ ಬಚ್ಚೇಗೌಡ ಅವರು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಇದು ಬಿಜೆಪಿಗೆ ದೊಡ್ಡ ತೊಂದರೆ ತಂದೊಡ್ಡುವ ಸಾಧ್ಯತೆಯಿದೆ. ಈ ಮಧ್ಯೆ, ಕಾಂಗ್ರೆಸ್ ಚುನಾವಣೆಗೆ ಭರದಿಂದ ಸಿದ್ಧತೆ ನಡೆಸಿದ್ದು, ಹೆಬ್ಬಾಳದ ಶಾಸಕ ಬೈರತಿ ಸುರೇಶ್ ಅವರ ಪತ್ನಿ ಪದ್ಮಾವತಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಜೆಡಿಎಸ್ ಇಲ್ಲಿ ಶರತ್ ಬಚ್ಚೇಗೌಡರಿಗೆ ಬೆಂಬಲ ಘೋಷಿಸಿರುವುದರಿಂದ ಅಖಾಡ ರಂಗೇರಿದೆ. ವಿಜಯನಗರ: ಆನಂದ ಸಿಂಗ್ ಹಾದಿ ಸರಳ
ಬಳ್ಳಾರಿ: ಆನಂದ್ ಸಿಂಗ್ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು, ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆನಂದ್‌ಸಿಂಗ್ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿದ್ದ ಮಾಜಿ ಶಾಸಕ ಎಚ್.ಆರ್. ಗವಿಯಪ್ಪ ಅವರು ಕೇವಲ 8,228 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಸೋಲು ಕ್ಷೇತ್ರದಲ್ಲಿ ಗವಿಯಪ್ಪ ಅವರಿಗೆ ಅನುಕಂಪದ ಅಲೆ ಸೃಷ್ಟಿಸಿದ್ದು, ಮುಂದಿನ ಚುನಾವಣೆಗಳಲ್ಲಿ ಗೆಲುವಿನ ವಿಶ್ವಾಸ ಮೂಡಿಸಿತ್ತು. ಆ ಹಿನ್ನೆಲೆಯಲ್ಲಿ ಅನರ್ಹ ಶಾಸಕ ಆನಂದ್‌ಸಿಂಗ್ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಗವಿಯಪ್ಪಗೆ ಬಿಜೆಪಿ ಟಿಕೆಟ್ ಲಭಿಸುವ ನಿರೀಕ್ಷೆ ಹೊಂದಿದ್ದರು. ಆದರೆ, ತೀರ್ಪು ಅನರ್ಹರ ಪರವಾಗಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಟಿಕೆಟ್ ದೊರೆಯುವ ನಿರೀಕ್ಷೆ ಹುಸಿಯಾಗಿದ್ದು, ಮುಂದೆಯೂ ಬಿಜೆಪಿಯಲ್ಲೇ ಮುಂದುವರೆಯಲಿದ್ದಾರೆಯೇ ಅಥವಾ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ. ಕಾಂಗ್ರೆಸ್‌ನಿಂದ ಮುಸ್ಲಿಂ ಸಮುದಾಯದಿಂದ ಸಿರಾಜ್‌ಶೇಖ್, ಎಚ್.ಎನ್.ಎಫ್.ಇಮಾಮ್ ನಿಯಾಜಿ, ಕುರುಬ ಸಮುದಾಯದಿಂದ ಕೆ.ಎಸ್.ಎಲ್.ಸ್ವಾಮಿ, ಕಲ್ಲುಕಂಬ ಪಂಪಾಪತಿ, ಸಾಮಾನ್ಯದಿಂದ ವೆಂಕಟರಾವ್ ಘೋರ್ಪಡೆ ಆಕಾಂಕ್ಷಿಗಳಾಗಿದ್ದಾರೆ. ಗೋಕಾಕ್: ಸಹೋದರರ ಸವಾಲ್
ಬೆಳಗಾವಿ: ಹೈವೋಲ್ಟೆಜ್ ಕ್ಷೇತ್ರ ಗೋಕಾಕ್‌ನಲ್ಲಿ ರಾಜಕೀಯ ರಂಗೇರಿದೆ. ಸಹೋದರರ ಸವಾಲ್‌ಗೆ ಚುನಾವಣೆ ಸಾಕ್ಷಿಯಾಗಲಿದೆ. ಆದರೆ, ರಾಜಕೀಯ ತಿಕ್ಕಾಟ ಜೋರಾಗಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆಗೆ ಕಸರತ್ತೂ ನಡೆದಿದೆ. ಬಿಜೆಪಿಯಿಂದ ರಮೇಶ ಜಾರಕಿಹೊಳಿ ಸ್ಪರ್ಧೆ ಬಹುತೇಕ ಖಚಿತ. ಕಾಂಗ್ರೆಸ್‌ನಿಂದ ಲಖನ್ ಸ್ಪರ್ಧೆಗೆ ಕಳೆದ ಮೂರು ತಿಂಗಳಿನಿಂದ ಭರ್ಜರಿ ತಯಾರಿ ನಡೆಸಲಾಗಿದೆ. ಮಾಜಿ ಸಚಿವ ಸತೀಶ ಜಾರಕಿಹೊಳಿಯವರು ಕ್ಷೇತ್ರಾದ್ಯಂತ ಸುತ್ತಿ ಅಖಾಡ ಸಜ್ಜುಗೊಳಿದ್ದಾರೆ. ಆದರೆ, ಬಿಜೆಪಿ ಮುಖಂಡ ಅಶೋಕ ಪೂಜಾರಿ ಅವರು, ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದು, ಹೊಸ ತಿರುವಿಗೆ ವೇದಿಕೆ ಸೃಷ್ಟಿಸಿದೆ. ಲಖನ್ ಜಾರಕಿಹೊಳಿ-ರಮೇಶ ಜಾರಕಿಹೊಳಿ ಕಾದಾಟ ಖಚಿತವಾದರೆ ರಾಜಕೀಯ ಚದುರಂಗದ ಕೇಂದ್ರಬಿಂದುವಾಗಲಿದೆ. ಈ ಹಿಂದೆ ಬಿಜೆಪಿ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಭೀಮಶಿ ಜಾರಕಿಹೊಳಿ ಅವರು ರಮೇಶ ವಿರುದ್ಧ ಸ್ಪರ್ಧಿಸಿದ್ದರು. ಈಗ ಲಖನ್ ಸರದಿ. ಆದರೆ, ಲಖನ್ ಹಾಗೂ ರಮೇಶ ಮೊದಲಿನಿಂದಲೂ ಅನ್ಯೋನ್ಯವಾಗಿದ್ದಾರೆ. ಹೀಗಾಗಿ, ಇದು ಜಾರಕಿಹೊಳಿ ಸಹೋದರರ “ರಾಜಕೀಯ ಆಟ’ ಎಂಬ ಆರೋಪವೂ ಕೇಳಿ ಬಂದಿದೆ. ಇನ್ನೊಂದೆಡೆ, ಕಾಂಗ್ರೆಸ್‌ನ ಒಂದು ವಲಯದಲ್ಲಿ ಈ ಬಾರಿ ಗೋಕಾಕ್‌ದಿಂದ ಲಿಂಗಾಯತ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದ್ದು, ಅಶೋಕ ಪೂಜಾರಿ ಹೆಸರು ಮುನ್ನೆಲೆಗೆ ಬಂದಿದೆ. ಕೆ.ಆರ್.ಪುರ: ಜೆಡಿಎಸ್ ಆಂತರಿಕ ನಡೆ ನಿರ್ಣಾಯಕ
ಬೆಂಗಳೂರು: ಸಿದ್ದರಾಮಯ್ಯ ಆಪ್ತರ ಬಳಗದಲ್ಲಿಯೇ ಗುರುತಿಸಿಕೊಂಡು ಬಂಡಾಯ ಸಾರಿ, ರಾಜೀನಾಮೆ ನೀಡಿದ್ದ ಬೈರತಿ ಬಸವರಾಜ್ ಈಗ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಈ ಕ್ಷೇತ್ರದಲ್ಲಿ ಕುರುಬ ಹಾಗೂ ಒಕ್ಕಲಿಗ ಸಮುದಾಯ ಪ್ರಮುಖ ಪಾತ್ರ ವಹಿಸಲಿದ್ದು, ಬೈರತಿ ಬಸವರಾಜ್ ಅವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಾಗೂ ಅನರ್ಹಗೊಂಡ ನಂತರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತೆಗೆದುಕೊಂಡು ಹೋಗಿ ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆಯಲ್ಲಿ ಗೆಲುವಿನ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಆದರೆ, ಈ ಕ್ಷೇತ್ರದಲ್ಲಿ ತಾವು ಶಾಸಕರಾಗಿದ್ದಾಗ ಬಿಜೆಪಿಯ ಕಾರ್ಯಕರ್ತರ ವಿರುದ್ಧ ಅನಗತ್ಯ ಪ್ರಕರಣಗಳನ್ನು ದಾಖಲಿಸಿ ತೊಂದರೆ ಕೊಟ್ಟಿದ್ದಾರೆ ಎಂಬ ಆರೋಪವಿದೆ. ಜೊತೆಗೆ, ಮಾಜಿ ಶಾಸಕ ನಂದಿಶ್ ರೆಡ್ಡಿ ಕೂಡ ಯಾವ ರೀತಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ ಎನ್ನುವುದು ಮುಖ್ಯವಾಗಿದೆ. ಕಾಂಗ್ರೆಸ್, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿಗೆ ಟಿಕೆಟ್ ನೀಡಿದ್ದು, ಮಾಜಿ ಸಚಿವ ರಾಮಲಿಂಗಾ ರೆಡ್ಡಿಗೆ ಉಸ್ತುವಾರಿ ವಹಿಸಲಾಗಿದೆ. ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತದೆ. ಕುರುಬ ಸಮಾಜದ ಮತದಾರರ ನಡೆ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ. ಈ ನಡುವೆ, ಜೆಡಿಎಸ್ ಕೂಡ ಯಾವ ತೀರ್ಮಾನ ಕೈಗೊಳ್ಳುತ್ತದೆ ಎನ್ನುವುದು ಮುಖ್ಯವಾಗಿದ್ದು, ಜೆಡಿಎಸ್‌ನ ಆಂತರಿಕ ನಡೆ ಫಲಿತಾಂಶ ಬದಲಾಯಿಸುವ ಸಾಧ್ಯತೆ ಇದೆ. ಹಿರೇಕೆರೂರ: ಬನ್ನಿಕೋಡ ವಿರುದ್ಧ ಕೌರವನ ಯುದ್ಧ
ಹಾವೇರಿ: ಹಿರೇಕೆರೂರ ಕ್ಷೇತ್ರದಲ್ಲಿ ಬಿಜೆಪಿಯಿಂದ ಅನರ್ಹ ಶಾಸಕ ಬಿ.ಸಿ.ಪಾಟೀಲ ಅವರು ಕಣಕ್ಕಿಳಿಯಲಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಎದುರಾಳಿಯಾಗಿ ಕಾಂಗ್ರೆಸ್‌ನ ಬಿ.ಎಚ್.ಬನ್ನಿಕೋಡ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿಗೆ ಅಖಾಡ ಸಿದ್ಧವಾಗಿದೆ. ಉಪಚುನಾವಣೆಯಲ್ಲಿ ಬಿಜೆಪಿಯಿಂದ ತಮಗೇ ಟಿಕೆಟ್ ನೀಡಬೇಕು ಎಂದು ಆರಂಭದಲ್ಲಿ ಪಟ್ಟು ಹಿಡಿದಿದ್ದ ಕ್ಷೇತ್ರದ ಮಾಜಿ ಶಾಸಕ ಯು.ಬಿ.ಬಣಕಾರ ಅವರ ಮನವೊಲಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಹಲವು ವರ್ಷಗಳ ಕಾಲ ರಾಜಕೀಯ ಬದ್ಧ ವೈರಿಗಳಾಗಿದ್ದ ಬಿ.ಸಿ. ಪಾಟೀಲ ಹಾಗೂ ಯು.ಬಿ.ಬಣಕಾರ ಇಬ್ಬರೂ ಈಗ ಒಂದೇ ಪಕ್ಷದಲ್ಲಿ ಒಟ್ಟಾಗಿ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ನೀಡುವುದನ್ನು ತಕ್ಷಣ ಒಪ್ಪಿಕೊಳ್ಳದ ಸ್ಥಳೀಯ ಕೆಲ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಅಸಮಾಧಾನ, ಬಣಕಾರ ಅವರ ಕೆಲ ಕಟ್ಟಾ ಅಭಿಮಾನಿಗಳ ಕಠೊರ ನಿರ್ಧಾರಗಳನ್ನು ಮೊದಲು ಎದುರಿಸಿಯೇ ಬಿ.ಸಿ.ಪಾಟೀಲ ಅವರು, ಅಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಮಣಿಸುವ ಯೋಜನೆ ಹಾಕಿಕೊಳ್ಳಬೇಕಾಗಿದೆ. ಹೀಗಾಗಿ, ಬಿ.ಸಿ.ಪಾಟೀಲರಿಗೆ ಈ ಉಪಚುನಾವಣೆ ಹಿಂದಿನ ಚುನಾವಣೆಗಳಿಗಿಂತ ಭಿನ್ನ ಅನುಭವ ನೀಡುವ ಸಾಧ್ಯತೆ ಇದೆ. ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರನ್ನು ಕ್ಷೇತ್ರಕ್ಕೆ ಕರೆಸಿ, ಭರ್ಜರಿ ಕಾರ್ಯಕ್ರಮ ಮಾಡಿದ್ದಾರೆ. ಅಥಣಿ: ಟಿಕೆಟ್ ಹಂಚಿಕೆಯೇ ಸವಾಲು
ಬೆಳಗಾವಿ: ಅನರ್ಹ ಶಾಸಕರ ಪರ ಬಂದ ತೀರ್ಪು ಅಥಣಿ ಕ್ಷೇತ್ರದಲ್ಲಿ ತಲ್ಲಣ ಸೃಷ್ಟಿಸಿದೆ. ಕಳೆದ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ವಿರುದ್ಧ ಜಿದ್ದಾಜಿದ್ದಿಗೆ ಬಿದ್ದು ಕಾಂಗ್ರೆಸ್‌ನಿಂದ ಮಹೇಶ ಕುಮಟಳ್ಳಿ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದ ಅನರ್ಹ ಶಾಸಕರ ಗುಂಪಿನ ನಾಯಕ ರಮೇಶ ಜಾರಕಿಹೊಳಿ ಅವರು, ಈಗ ತಮ್ಮ ನಂಬಿಕಸ್ಥ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ದೊರಕಿಸಿ ಕೊಡಲು ಮುಂದಾಗಿರುವುದು ಪ ಮುಖ್ಯಮಂತ್ರಿ ಸವದಿಯವರ ನಿದ್ದೆಗೆಡಿಸಿದೆ. ಉಪಮುಖ್ಯಮಂತ್ರಿಗೆ ಟಿಕೆಟ್ ಕೊಡಬೇಕೋ ಅಥವಾ ಅನರ್ಹ ಶಾಸಕರಿಗೆ ಟಿಕೆಟ್ ಕೊಡಬೇಕೋ ಎಂಬ ಗೊಂದಲದಲ್ಲಿ ಬಿಜೆಪಿ ನಾಯಕರಿದ್ದಾರೆ. ಹೀಗಾಗಿ, ಚುನಾವಣೆಗಿಂತ ಟಿಕೆಟ್ ಹಂಚಿಕೆಯೇ ವರಿಷ್ಠರಿಗೆ ದೊಡ್ಡ ಸವಾಲಾಗಿದೆ. ಇಬ್ಬರೂ ನಾಯಕರು ಪರಸ್ಪರ ಒಪ್ಪಂದಕ್ಕೆ ಬರದಿದ್ದರೆ ಬಿಕ್ಕಟ್ಟು ಬಗೆಹರಿಯುವುದು ಕಷ್ಟ. ಕುಮಟಳ್ಳಿಗೆ ಟಿಕೆಟ್ ನೀಡಿದರೆ ಬಿಜೆಪಿ ಕಾರ್ಯಕರ್ತರು ಕೈ ಹಿಡಿಯುತ್ತಾರೆಯೇ ಎಂಬುದು ನಿಗೂಢ. ಸವದಿಗೆ ಟಿಕೆಟ್ ಸಿಗದಿದ್ದರೆ ವಿಧಾನ ಪರಿಷತ್ ಸ್ಥಾನ ನೀಡಬಹುದು ಎಂಬ ಲೆಕ್ಕಾಚಾರವೂ ನಡೆದಿದೆ. ಕಾಂಗ್ರೆಸ್ ತೊರೆದ ಕುಮಟಳ್ಳಿ ಅವರ ವಿರುದ್ಧ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಸಿಟ್ಟಿಗೆದ್ದಿದ್ದಾರೆ. ಶತಾಯ ಗತಾಯ ಸೋಲಿಸಲೇಬೇಕೆಂದು ಹಠಕ್ಕೆ ಬಿದ್ದಿದ್ದಾರೆ. ಹೀಗಾಗಿ, ಕುಮಟಳ್ಳಿ ಗೆಲುವು ಕೂಡ ಸುಲಭವಲ್ಲ. ಕಾಗವಾಡ: ಕಾಗೆ-ಶ್ರೀಮಂತ ಪಾಟೀಲ್ ಫೈಟ್
ಬೆಳಗಾವಿ: ಕೃಷ್ಣಾ ನದಿ ತೀರದ ನೆರೆ ಪೀಡಿತ ಕ್ಷೇತ್ರ ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಈಗ ರಾಜಕೀಯದ ಪ್ರವಾಹ ಜೋರಾಗಿದೆ. ಲೆಕ್ಕಾಚಾರ ಗರಿಗೆದರಿದೆ. ಬಿಜೆಪಿ ಟಿಕೆಟ್ ಸಿಗದಿರುವುದು ಪಕ್ಕಾ ಆಗುತ್ತಿದ್ದಂತೆ ರಾಜು ಕಾಗೆ ಕಾಂಗ್ರೆಸ್ ಬಾಗಿಲಿಗೆ ಬಂದು ನಿಂತಿದ್ದಾರೆ. ಆದರೆ, ಬೆಂಬಲಿಗರು ಗೊಂದಲಕ್ಕೆ ಬಿದ್ದಿದ್ದಾರೆ. ಶ್ರೀಮಂತ ಪಾಟೀಲ್ ವಿರುದ್ಧ ಕಳೆದ ಚುನಾವಣೆಯಲ್ಲಿ ಕಾದಾಡಿದ್ದ ಬಿಜೆಪಿ ಕಾರ್ಯಕರ್ತರು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಪಕ್ಷ ಬದಲಾದರೂ ಹಳೇ ಮುಖಗಳದ್ದೇ ಕಾದಾಟ ಖಚಿತವಾಗಿದೆ. ಕಳೆದ ಚುನಾವಣೆಯಲ್ಲಿ ರಾಜು ಕಾಗೆ ಅವರ ಪರ ಬಹಳ ಜೋರಾಗಿ ಕೆಲಸ ಮಾಡಿದ್ದ ಬಿಜೆಪಿ ಕಾರ್ಯಕರ್ತರು, ಈಗ ಅದೇ ಕಾಗೆ ವಿರುದ್ಧವೇ ಪ್ರಚಾರ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅದೇ ರೀತಿ, ಕಾಂಗ್ರೆಸ್ ಅಭ್ಯರ್ಥಿ ಶ್ರೀಮಂತ ಪಾಟೀಲ ಪರ ಪ್ರಚಾರ ಮಾಡಿದ್ದ ಕಾರ್ಯಕರ್ತರು ಈಗ ರಾಜು ಕಾಗೆ ಪರ ಪ್ರಚಾರ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದಾರೆ. ಅಗತ್ಯ ಇಲ್ಲದಿದ್ದರೂ ಮತ್ತೆ ಚುನಾವಣೆ ಬರಲು ಕಾರಣರಾದ ಶ್ರೀಮಂತ ಪಾಟೀಲ ಅವರ ಬಗ್ಗೆ ಕ್ಷೇತ್ರದ ಜನರಲ್ಲಿದ್ದ ಅಭಿಪ್ರಾಯ ಈಗ ಬದಲಾಗಿದೆ. ಇದರ ಜತೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿರುವ ರಾಜು ಕಾಗೆ ನಡೆಯ ಬಗ್ಗೆ ಅಸಮಾಧಾನ ಕೂಡ ಇದೆ.