ಮಂಗಳೂರು: ಕ್ರೀಡೆಯಲ್ಲಿ ಯಾವುದೇ ಸಂದರ್ಭದಲ್ಲಿ ಕ್ರೀಡಾಸ್ಫೂರ್ತಿಯನ್ನು ಮರೆಯಬಾರದು. ಇಲ್ಲಿ ಸೋಲು-ಗೆಲುವಿಗಿಂತಲೂ ಭಾಗವಹಿಸುವಿಕೆಯೇ ದೊಡ್ಡ ಜಯವಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ಅವರು ಶನಿವಾರ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ 2017-18ನ್ನು ಉದ್ಘಾಟಿಸಿದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕ ಮೊದಿನ್ ಬಾವಾ ಮಾತನಾಡಿ, ಕ್ರೀಡೆಯು ಜಾತಿ-ಧರ್ಮವನ್ನು ಮೀರಿ ಎಲ್ಲರನ್ನೂ ಒಂದು ಮಾಡುವ ಜತೆಗೆ ನಮ್ಮ ವ್ಯಕ್ತಿತ್ವ ನಿರ್ಮಾಣ ಮಾಡುವ ಕಾರ್ಯವನ್ನು ಮಾಡುತ್ತದೆ. ಜತೆಗೆ ನಮ್ಮ ಜಿಲ್ಲೆಯ ಶಾಂತಿ, ಸುವ್ಯವಸ್ಥೆಗೆ ಕ್ರೀಡೆ ಮಹತ್ತರ ಪಾತ್ರ ವಹಿಸುತ್ತದೆ ಎಂದರು.
ದ.ಕ.ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಕವಿತಾ ಸನಿಲ್ ಅವರು ಕ್ರೀಡಾಜ್ಯೋತಿ ಬೆಳಗಿದರು. ಮೂಡಬಿದಿರೆ ಆಳ್ವಾಸ್ ಕಾಲೇಜಿನ ಕ್ರೀಡಾಪಟು ಅಕ್ಷಯ್ ಚೌಹಾಣ್ ಅವರು ಕ್ರೀಡಾ ಪ್ರತಿಜ್ಞೆ ಬೋಧಿಸಿದರು.
ವೇದಿಕೆಯಲ್ಲಿ ಕಾರ್ಪೊರೇಟರ್ ಜಯಂತಿ ಆಚಾರ್, ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ, ಅಮೆಚೂರ್ ದ.ಕ. ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಮಹಮ್ಮದ್ ಝುಲ್ಫಿಕರ್ ಅಲಿ, ಯುವಜನ ಒಕ್ಕೂಟದ ಜಿಲ್ಲಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ತಾಲೂಕು ಅಧ್ಯಕ್ಷ ಟಿ. ಗಿರೀಶ್ ಶೆಟ್ಟಿ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಯುವ ಸಬಲೀಕರಣ ಇಲಾಖೆಯ ಉಡುಪಿ ಜಿಲ್ಲಾ ಉಪನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ, ಭೋಜರಾಜ್, ಕೆ.ಎಚ್.ನಾಯಕ್, ಪ್ರೇಮ ನಾಥ್ ಶೆಟ್ಟಿ, ದಿನೇಶ್ ಕುಂದರ್ ಉಪಸ್ಥಿತರಿದ್ದರು.
ದ.ಕ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜಾ ಸ್ವಾಗತಿಸಿದರು. ಕ್ರೀಡಾಕೂಟದಲ್ಲಿ ದ.ಕ, ಉಡುಪಿ, ಕೊಡಗು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಮೈಸೂರು ಜಿಲ್ಲೆಗಳನ್ನೊಳಗೊಂಡ 800 ಮಂದಿ ಕ್ರೀಡಾಳುಗಳು ಭಾಗವಹಿಸಿದ್ದರು. ಪಂದ್ಯಾಟಗಳು ಮಂಗಳಾ ಕ್ರೀಡಾಂಗಣ ಹಾಗೂ ಮೂಡಬಿದಿರೆಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸೆ. 17ರಂದು ಕೂಡ ಮುಂದುವರಿಯಲಿದೆ.