ಮೈಸೂರು: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಯುವಜನತೆ ಮತದಾನದಿಂದ ದೂರ ಉಳಿಯದೆ, ಚುನಾವಣಾ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಪಿ.ಶಿವಶಂಕರ್ ಹೇಳಿದರು.
ಜಿಲ್ಲೆಯ ಚುನಾವಣಾ ಸಾಕ್ಷರತಾ ಕ್ಲಬ್‌ನಿಂದ ನಗರದ ಬನುಮಯ್ಯ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಚುನಾವಣಾ ನೋಂದಣಿ ಮತ್ತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿನ ಚುನಾವಣಾ ವ್ಯವಸ್ಥೆ ವಿಶ್ವದ ಗಮನ ಸೆಳೆದಿದ್ದರೂ ದೇಶದ ಯುವಜನತೆ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೆ, ನಿರಾಸಕ್ತಿ ತೋರುತ್ತಿದ್ದಾರೆ. ಆದರೆ, ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಯುವಜನತೆ ಚುನಾವಣಾ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಬೇಕಿದೆ ಎಂದು ಹೇಳಿದರು.
ಅಪಸ್ವರ ಸರಿಯಲ್ಲ: ದೇಶದಲ್ಲಿ ಪ್ರಸ್ತುತ ನಡೆಯುವ ಚುನಾವಣೆಗಳಿಗೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಮತಯಂತ್ರಗಳ ವಿರುದ್ಧ ಅಪಸ್ವರ ಕೇಳಿ ಬರುತ್ತಿದೆ. ವಿದ್ಯುನ್ಮಾನ ಮತಯಂತ್ರದಲ್ಲಿ ಮತದಾನ ಮಾಡಿದರೆ ಒಂದೇ ಅಭ್ಯರ್ಥಿಗೆ ಮತ ಚಲಾವಣೆಯಾಗಲಿದೆ ಎಂಬ ಆರೋಪವಿದೆ.
ಆದರೆ, ಇಂತಹ ಆರೋಪಗಳು ಸುಳ್ಳಾಗಿದ್ದು, ಯಾವುದೇ ಕಾರಣಕ್ಕೂ ವಿದ್ಯುನ್ಮಾನ ಮತಯಂತ್ರವನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಅಲ್ಲದೆ ಇವಿಎಂ ಯಂತ್ರವನ್ನು ಅಳವಡಿಸುವ ಮುನ್ನ ಎಲ್ಲಾ ಪಕ್ಷದವರನ್ನು ಆಹ್ವಾನಿಸಿ, ಅಭ್ಯರ್ಥಿಗಳ ಹೆಸರು, ಚಿಹ್ನೆಯನ್ನು ಅಪ್‌ಲೋಡ್ ಮಾಡಿ ಪರೀûಾರ್ಥ ಪ್ರಯೋಗವನ್ನು ಮಾಡಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮತಯಂತ್ರದ ಮೇಲೆ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.
ಇದೇ ವೇಳೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕೃಷ್ಣ ಅವರು ವಿದ್ಯಾರ್ಥಿಗಳಿಗೆ ಪ್ರತಿಜಾn ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ವಿ.ಬಿ.ಜಯದೇವ, ಕಾಲೇಜು ಶಿಕ್ಷಣ ಇಲಾಖೆ ವಿಶೇಷಾಧಿಕಾರಿ ಡಾ.ಎಚ್.ಎನ್. ಪ್ರಮೀಳಾ, ಉಪನ್ಯಾಸಕಿ ಎಚ್.ಆರ್.ನಾಗರತ್ನ ಇನ್ನಿತರರು ಹಾಜರಿದ್ದರು.
ನಿರ್ಭೀತಿಯಿಂದ ಮತಹಾಕಿ: 18 ವರ್ಷ ತುಂಬಿರುವವರು ಸಂಬಂಧಪಟ್ಟ ಕಚೇರಿಗಳಿಗೆ ತೆರಳಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬೇಕಿದೆ. ಮತದಾನ ಮಾಡುವ ಸಂದರ್ಭದಲ್ಲಿ ಕಣದಲ್ಲಿರುವ ಯಾವುದೇ ಪಕ್ಷಕ್ಕೆ ಅಥವಾ ವ್ಯಕ್ತಿಗೆ ಮತಹಾಕಲು ಆಸಕ್ತಿ ಇಲ್ಲದಿದ್ದರೆ ನೋಟಾಕ್ಕೆ ಮತ ಹಾಕಬಹುದು. ಈ ಬಾರಿ ಮತದಾನಕ್ಕೆ 1 ಗಂಟೆ ಸಮಯ ಹೆಚ್ಚುವರಿ ನೀಡುವ ಸಾಧ್ಯತೆ ಇದ್ದು, ಹೀಗಾಗಿ ನಿರ್ಭೀತಿಯಿಂದ ಮತದಾನ ಮಾಡಬೇಕಿದೆ ಎಂದು ಜಿಪಂ ಸಿಇಒ ಪಿ.ಶಿವಶಂಕರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.