ಬಸವನಬಾಗೇವಾಡಿ: ಶೈಕ್ಷಣಿಕ ಜೀವನದಲ್ಲಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಎಸ್‌ಎಸ್, ಎನ್‌ಸಿಸಿ ಘಟಕಗಳಲ್ಲಿ ಪಾಲ್ಗೊಂಡು ಬಹುಮುಖ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಪ್ರಶಾಂತ ನಾಯಕ ಹೇಳಿದರು.
ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ದ ಸಿಂಧೂರ ಲಕ್ಷ್ಮಣ ರೋವರ್ ಮತ್ತು ಮಾದಲಾಂಬಿಕೆ ರೆಂಜರ್ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಸಮಾಜ ಸೇವಾ ಮನೋಭಾವ, ದೇಶದಲ್ಲಿ ಸಂಭವಿಸುವ ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ ಹಾಗೂ ಯುದ್ದದ ಸಂದರ್ಭದಲ್ಲಿ ಸೈನಿಕರಿಗೆ ನೆರವಾಗಲು ತುಂಬಾ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಬಿ.ಬಿ. ಶಿರಡೋಣಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಪಡೆದು ರೈಲ್ವೆ ಇಲಾಖೆಯಲ್ಲಿನ ಮೀಸಲಾತಿಯ ಲಾಭ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸ¨ದೃಢರಾಗಬೇಕು. ಶಿಸ್ತು ಮತ್ತು ಸಮಯ ಪಾಲನೆಗೆ ಹೆಚ್ಚಿನ ಒತ್ತು ನೀಡುವುದರಿಂದ ವಿದ್ಯಾರ್ಥಿಗಳು ಯಶಸ್ವಿ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಎಸ್.ಬಿ. ದೇಸಾಯಿ, ವೈ.ಬಿ. ನಾಯಕ, ದಿಲೀಪಕುಮಾರ, ದೀಪಾ ಲಗಳಿ, ರವೀಂದ್ರಗೌಡ ಇದ್ದರು. ಎಂ.ಎಸ್. ಮಾಳಗೊಂಡ ಪ್ರಾರ್ಥಿಸಿದರು. ಎಂ.ಕೆ. ಯಾದವ ನಿರೂಪಿಸಿದರು. ಬಿ.ಆರ್. ಮ್ಯಾಗೇರಿ ವಂದಿಸಿದರು.