ಹುನಗುಂದ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಕೆಯಲ್ಲಿ ಭಾಗವಹಿಸುವಿಕೆಯಿಂದ ದೈಹಿಕ ಮತ್ತು ಮಾನಸಿಕ ಅಭಿವೃದ್ಧಿ ಸಾಧಿ ಸಲು ಸಾಧ್ಯ ಎಂದು ವಿ.ಮ ಸಂಘದ ಗೌರವ ಕಾರ್ಯದರ್ಶಿ ಡಾ| ಮಹಾಂತೇಶ ಕಡಪಟ್ಟಿ ಹೇಳಿದರು.
ಪಟ್ಟಣದ ವಿ.ಎಂ.ಎಸ್.ಆರ್.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪದವಿ ಮಹಾವಿದ್ಯಾಲಯಗಳ ಜಿಲ್ಲಾಮಟ್ಟದ ಆಹ್ವಾನಿತ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಓದಿನ ಜತೆಗೆ ಉತ್ತಮ ಆರೋಗ್ಯಕ್ಕಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ. ಮೊಬೈಲ್‌ಗಳನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ ಬಳಸಿಕೊಳ್ಳಬೇಕು. ಅದನ್ನು ಬೇರೆ ಉದ್ದೇಶಕ್ಕೆ ಬಳಸಿ. ನಿಮ್ಮ ಭವ್ಯ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ,ಉತ್ತಮ ಅಧ್ಯಯನ ಜೊತೆಗೆ ದೈಹಿಕ ಸದೃಢತೆಗೆ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಸಾಧನೆ ತೋರಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ನೈತಿಕ ಮೌಲ್ಯ ಅಳವಡಿಸಿಕೊಂಡು ದೇಶದ ಸತ್ಪ್ರಜೆಗಳಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಕೆ.ಮಠ ಮಾತನಾಡಿ, ಸದೃಢವಾದ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಲೆಪ್ಟಿನೆಂಟ್ ಎಸ್.ಬಿ.ಚಳಗೇರಿ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಕವಾಗುವುದರ ಜತೆಗೆ ರಾಜ್ಯ ಮತ್ತು ಅಂತಾರಾಜ್ಯ ಹಾಗೂ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತಿತ್ವವನ್ನು ಬೆಳೆಸುವ ಬಹುದೊಡ್ಡ ಅವಕಾಶ
ಕಲ್ಪಿಸಿಕೊಡುತ್ತದೆ ಎಂದರು.
ವಿಜೇತ ತಂಡಕ್ಕೆ ಬಹುಮಾನ ವಿತರಣೆ: ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಹಿಳಾ ವಿಭಾಗದಲ್ಲಿ ವಿ.ಎಂ.ಎಸ್.ಆರ್. ವಸ್ತ್ರದ ಹಾಗೂ ವಿ.ಎಸ್.ಬೆಳ್ಳಿಹಾಳ ಕಾಲೇಜು ಪ್ರಥಮ ಸ್ಥಾನ ಹಾಗೂ ಬಾಗಲಕೋಟೆಯ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪುರುಷರ ವಿಭಾಗದಲ್ಲಿ ಇಳಕಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ, ಹುನಗುಂದದ ವಿ.ಎಂ.ಎಸ್.ಆರ್.ವಸ್ತ್ರದ ಮಹಾವಿದ್ಯಾಲಯ ದ್ವಿತೀಯ ಸ್ಥಾನ ಪಡೆದುಕೊಂಡಿತು. ವಿಜೇತ ತಂಡಗಳಿಗೆ ವಿ.ಮ.ಸಂಘದ ಗೌರವ ಕಾರ್ಯದರ್ಶಿ ಡಾ| ಮಹಾಂತೇಶ ಕಡಪಟ್ಟಿ ಟ್ರೋಫಿ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು.
ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ತೋರಿದ ವಿ.ಎಂ.ಎಸ್.ಆರ್. ವಸ್ತ್ರದ ಕಾಲೇಜು ವಿದ್ಯಾರ್ಥಿ ಮಹಾಂತೇಶ ಬೆಳ್ಳಿಹಾಳ ಮತ್ತು ಮಹಿಳೆಯರ ವಿಭಾಗದಲ್ಲಿ ಸೌಭಾಗ್ಯ ತೋಟಗೇರ ಆಲ್‌ರೌಂಡರ್ ಆಟಗಾರ ಎನ್ನುವ ಹೆಗ್ಗಳಿಕೆ ಪಾತ್ರರಾದರು.
ವಿ.ಮ ಸಂಘದ ನಿರ್ದೇಶಕ ವೀರಣ್ಣ ಚೆಟ್ಟೇರ, ಎಂ.ಎಸ್. ಮಠ, ವಿ.ಮ.ಪದವಿ ಕಾಲೇಜಿನ ಪ್ರಾಚಾರ್ಯ ಎಚ್.ಎಸ್. ಬೋಳಶೆಟ್ಟಿ, ರಾಠಿ ಭಂಡಾರಿ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಡಾ| ಸಚ್ಚಿದಾನಂದ ನಂದರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕ ಬಿ.ವಾಯ್.ಆಲೂರ, ನೀಲಪ್ಪ ಕುರಿ, ಜ್ಯೋತಿ ಇಂಜನಗೇರಿ, ಸುಭಾಸ ಹುನ್ನಳ್ಳಿ, ಡಾ| ಎಸ್. ಆರ್.ಗೋಲಗೊಂಡ, ಡಾ| ತಿಪ್ಪೇಸ್ವಾಮಿ, ವೆಂಕಣ್ಣ ದೇವರಡ್ಡಿ ಇದ್ದರು. ಡಾ|ಎಸ್.ಆರ್.ನಾಗಣ್ಣವರ ನಿರೂಪಿಸಿದರು.