Advertisement

ಅಭಿವೃದ್ಧಿಯಲ್ಲಿ ಭಾಗವಹಿಸಿ; ಡಾ|ಎಂ. ಚಂದ್ರಪೂಜಾರಿ

06:15 PM Aug 11, 2022 | Team Udayavani |

ಬಳ್ಳಾರಿ: ಭಾರತದಲ್ಲಿ ತಲಾದಾಯವು ಜಾಸ್ತಿ ಆಗುತ್ತಿದೆ ಎಂದು ಹೇಳುತ್ತೇವೆ. ತಲಾದಾಯ ಹೆಚ್ಚಾದರೂ ಮೂಲಸೌಕರ್ಯಗಳು, ಶಿಕ್ಷಣ ಅಷ್ಟಕ್ಕಷ್ಟೇ ಇದೆ. ಸರ್ಕಾರ ತೆರಿಗೆಯ ಹಣವನ್ನು ಸಾಕಷ್ಟು ಖರ್ಚು ಮಾಡುತ್ತಿದೆ. ಆದರೆ ಸಾಮಾನ್ಯ ಜನರು ಅಭಿವೃದ್ಧಿಯಾಗುತ್ತಿಲ್ಲ. ಹಾಗಾಗಿ ಸಾಮಾನ್ಯ ಜನರು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವರ ಆರ್ಥಿಕ, ಸಾಮಾಜಿಕ, ಮೂಲಭೂತ ಸೌಕರ್ಯ ಮತ್ತು ಶೈಕ್ಷಣಿಕ ಸಾಮರ್ಥ್ಯವನ್ನು ಬೆಳೆಸಬೇಕು ಎಂದು ಹಂಪಿ ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕ ಡಾ| ಎಂ. ಚಂದ್ರಪೂಜಾರಿ ತಿಳಿಸಿದರು.

Advertisement

ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ದಿ. ಡಾ.ಬಿ.ಶೇಷಾದ್ರಿ ಮೆಮೋರಿಯಲ್‌ ಟ್ರಸ್ಟ್‌ ಹಮ್ಮಿಕೊಂಡಿದ್ದ ಡಾ| ಬಿ. ಶೇಷಾದ್ರಿ ಸ್ಮಾರಕ ಉಪನ್ಯಾಸ 2021-22ರ ಕಾರ್ಯಕ್ರಮದಲ್ಲಿ “ಅಂತರ್ಗತ ಬೆಳವಣಿಗೆ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ಸರ್ಕಾರಗಳು ಕೋಟಿಗಟ್ಟಲೆ ಬಂಡವಾಳವನ್ನು ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಿದರೂ ಅದರ ಲಾಭ ಪಡೆಯಲು ಸ್ಥಳೀಯ ಜನರಿಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಮೂಲಭೂತ ಸೌಲಭ್ಯಗಳ ಕೊರತೆ ಕಾರಣವಾಗಿದೆ. ಆದ್ದರಿಂದ ಸಾಮಾನ್ಯ ಜನರನ್ನು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಬೇಕಾದರೆ ಅವರಲ್ಲಿರುವ ನ್ಯೂನ್ಯತೆಗಳನ್ನು ನಿವಾರಿಸಬೇಕು. ಹಾಗಾದಾಗ ಮಾತ್ರ ಸಮತೋಲನ ಅಭಿವೃದ್ಧಿ ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಅದು ವಿಫಲವಾಗುತ್ತದೆ ಎಂದು ಹೇಳಿದರು.

ದೇಶಕ್ಕೆ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸುವ ಸಾಮರ್ಥ್ಯವಿರಬೇಕು. ಇತ್ತೀಚಿನ ವರ್ಷಗಳಲ್ಲಿ ಚೀನಾದಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗವು ಬಂದಾಗ ಜಗತ್ತಿನ ಬಹುರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಬರಬಹುದು, ಕಂಪನಿಗಳು ಸ್ಥಾಪನೆಯಾಗಬಹುದು ಎಂದು ಭಾರತವು ಊಹಿಸಿತ್ತು. ಆದರೆ ಇಲ್ಲಿನ ಮೂಲಭೂತ ಸೌಕರ್ಯಗಳು, ಕೌಶಲ್ಯರಹಿತ ಮಾನವ ಸಂಪನ್ಮೂಲ, ಕಾನೂನು ಸುವ್ಯವಸ್ಥೆಯನ್ನು ಕಂಡ ಬಹುರಾಷ್ಟ್ರೀಯ ಕಂಪನಿಗಳು ಇತ್ತ ಕಡೆ ಮುಖ ಮಾಡಲಿಲ್ಲ. ಅವೆಲ್ಲವೂ ಬೇರೆ ಬೇರೆ ದೇಶಗಳಿಗೆ ಲಗ್ಗೆ ಇಟ್ಟವು.

ಆದರೆ ಬಹುರಾಷ್ಟ್ರೀಯ ಕಂಪನಿಗಳನ್ನು ದೇಶಕ್ಕೆ ಆಹ್ವಾನಿಸಬೇಕಾದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕಾದುದು ಸರ್ಕಾರಗಳ ಜವಾಬ್ದಾರಿಯಾದಲ್ಲಿ ಮಾತ್ರ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಕಾಲೇಜಿನ ಪ್ರಾಚಾರ್ಯರಾದ ಡಾ| ಆರ್‌.ಎಂ. ಶ್ರೀದೇವಿ ಟ್ರಸ್ಟ್ ನ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನನ್ನ ವಿದ್ಯಾಗುರುಗಳಾಗಿದ್ದ ಡಾ| ಶೇಷಾದ್ರಿರವರು ಅವರೊಬ್ಬ ಆದರ್ಶ ಪ್ರಾಧ್ಯಾಪಕರಾಗಿದ್ದರು.
ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರ ಕಾರ್ಯದರ್ಶಿಯಾಗಿದ್ದರು. ನಂಜುಂಡಪ್ಪ ಸಮಿತಿಯ ಸದಸ್ಯರಾಗಿ ಅವರು ಕರ್ನಾಟಕದ ಆರ್ಥಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಮತ್ತು ಬಳ್ಳಾರಿಯ ಆರ್ಥಿಕಾಭಿವೃದ್ಧಿಯಲ್ಲಿ ಅವರ ಕಾಣಿಕೆ ಅನನ್ಯವಾದುದು ಎಂದು ನುಡಿದರು.

Advertisement

ಮೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಡಾ.ಹೊನ್ನೂರಾಲಿ ಐ, ಅವರು ಡಾ.ಅಬ್ದುಲ್‌ ಅಜೀಜ್‌ರವರ “ಧಾರ್ಮಿಕ ಅಲ್ಪಸಂಖ್ಯಾತರ ಸಮಸ್ಯೆಗಳು ಮತ್ತು ನೀತಿಗಳು’ ಎಂಬ ವಿಷಯದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಸಂಸದರು ಹಾಗೂ ಡಾ| ಶೇಷಾದ್ರಿ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಕೆ.ಸಿ.ಕೊಂಡಯ್ಯ ಮಾತನಾಡಿ, ಡಾ.ಶೇಷಾದ್ರಿ ಅವರು ಕರ್ನಾಟಕ ಕಂಡ ಉತ್ತಮ ಅರ್ಥಶಾಸ್ತ್ರಜ್ಞರು. ಅವರು ಬಳ್ಳಾರಿ ಜಿಲ್ಲೆಯ ಬಗ್ಗೆ ಅಭಿವೃದ್ಧಿ ಚಿಂತನೆಗಳನ್ನು ಉನ್ನತ ಮಟ್ಟದಲ್ಲಿ ಹೊಂದಿದ್ದರು. ನಾನು ಸಂಸದನಾಗಿದ್ದಾಗ ಮತ್ತು ವಿಧಾನ ಪರಿಷತ್‌ ಸದಸ್ಯನಾಗಿದ್ದ ಸಂದರ್ಭದಲ್ಲಿ ಅವರ ಸಲಹೆಗಳನ್ನು ಪಡೆದುಕೊಂಡಿದ್ದೇನೆ. ಅವರ ಬರಹಗಳನ್ನು ಟ್ರಸ್ಟ್‌ ಮೂಲಕ ಪುಸ್ತಕ ರೂಪದಲ್ಲಿ ಪ್ರಕಟಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಡಾ| ಶೇಷಾದ್ರಿಯವರ ಭಾವಚಿತ್ರವನ್ನು ಪೆನ್ಸಿಲ್‌ ಮೂಲಕ ಚಿತ್ರಿಸಿದ ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಆಶಿಷ್‌ಶೇಷಾದ್ರಿ, ನಿವೃತ್ತ ತೆಲುಗು ಪ್ರಾಧ್ಯಾಪಕ ಪ್ರೊ| ಸುರೇಂದ್ರಬಾಬು, ಅಹಿರಾಜ್‌, ಕಾಲೇಜಿನ ವಿದ್ಯಾರ್ಥಿಗಳು ಮುಂತಾದವರು ಹಾಜರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿ ಲಕ್ಷ್ಮೀ ಪ್ರಾರ್ಥನೆಯ ನಂತರ ಡಾ| ಬಿ.ಶೇಷಾದ್ರಿ ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ ಗೌರವ ನಮನ ಸಲ್ಲಿಸಲಾಯಿತು. ಡಾ| ಟಿ.ದುರುಗಪ್ಪ ಸ್ವಾಗತಿಸಿದರು. ಸಿರಿಗೇರಿ ಪನ್ನರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಡಾ| ಎಸ್‌.ಜಯಣ್ಣ, ಡಾ| ಶೇಷಾದ್ರಿ ಅವರ ಕುರಿತ ಪರಿಚಯವನ್ನು ಮಾಡಿದರು. ಡಾ| ಕೆ. ಬಸಪ್ಪ ಕಾರ್ಯಕ್ರಮ ನಿರೂಪಿಸಿದರು. ಟಿ.ಜಿ.ವಿಠಲ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next