ಉಡುಪಿ: ಉಡುಪಿ ತಾಲೂಕಿನಲ್ಲಿ ರವಿವಾರ ರಾತ್ರಿ ಮತ್ತು ಸೋಮವಾರ ಮತ್ತೆ ಮಳೆ ಬಿರುಸಾಗಿದೆ. ಉಡುಪಿ ನಗರವೂ ಸೇರಿದಂತೆ ತಾಲೂಕಿನ ವಿವಿಧೆಡೆ ಸೋಮವಾರ ನಿರಂತರ ಮಳೆ ಸುರಿದಿದೆ.
ಮಧ್ಯಾಹ್ನ ಅನಂತರ ಮಳೆ ಕಡಿಮೆ ಆಗಿದೆ. ನೆರೆ ಸಮಸ್ಯೆ ಉಂಟಾಗಿಲ್ಲವಾದರೂ ರಸ್ತೆ ಗುಂಡಿಗಳು ಅಲ್ಲಲ್ಲಿ ಅಪಾಯ ಆಹ್ವಾನಿಸುತ್ತಲೇ ಇವೆ. ನೀರು ನಿಂತ ರಸ್ತೆ ಹೊಂಡಗಳು ಅಪಘಾತಕ್ಕೂ ಕಾರಣವಾಗುತ್ತಿವೆ.
ಕರಾವಳಿ ಬೈಪಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗಳು ಹಾಗೂ ಇಕ್ಕಟ್ಟಿನ ರಸ್ತೆಯ ಪರಿಣಾಮ ದಿನನಿತ್ಯವೆಂಬಂತೆ ಟ್ರಾಫಿಕ್ ಜಾಮ್ ಆಗುತ್ತಿದೆ. ಬೈಪಾಸ್‌ನಿಂದ ಆದಿಉಡುಪಿ ಕಡೆಗೆ ಹೋಗುವ ರಸ್ತೆಯಲ್ಲೂ ಕೆಲವೆಡೆ ದೊಡ್ಡ ಹೊಂಡಗಳುಂಟಾಗಿವೆ. ಇವುಗಳನ್ನು ತಾತ್ಕಾಲಿಕವಾಗಿಯಾದರೂ ಮುಚ್ಚುವ ಕಾಮಗಾರಿ ನಡೆಸಬೇಕಾಗಿದೆ.
ಜೂ. 22ರಿಂದೀಚೆಗೆ ತಾಲೂಕಿನಲ್ಲಿ 10 ಮನೆಗಳಿಗೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿದೆ. ಕಡೆಕಾರು ನೇಮು ಪೂಜಾರಿ¤ ಅವರ ಮನೆಗೆ ಹಾನಿಯಾಗಿ 60,000 ರೂ., ಶಿವರಾಮ್ ಪೂಜಾರಿ ಅವರ ಮನೆಗೆ ಹಾನಿಯಾಗಿ 20,000 ರೂ., ನಾರಾಯಣ ಪೂಜಾರಿ ಅವರ ಮನೆಗೆ ಹಾನಿಯಾಗಿ 22,000 ರೂ., ಸುನಿಲ್ ಕೆ.ಎಂ ಅವರ ಮನೆಗೆ ಹಾನಿಯಾಗಿ 20,000 ರೂ., ಕುತ್ಪಾಡಿ ಪ್ರೇಮಾ ಅವರ ಮನೆಗೆ ಹಾನಿಯಾಗಿ 15,000 ರೂ., ಸುಗಂಧಿ ಅವರ ಮನೆಗೆ ಹಾನಿಯಾಗಿ 20,000 ರೂ., ಗಿರಿಜಾ ಸುವರ್ಣ ಅವರ ಮನೆಗೆ ಹಾನಿಯಾಗಿ 10,000 ರೂ., ಕುತ್ಪಾಡಿ ಬಡ್ಡಿ ಕೋಟ್ಯಾನ್ ಅವರ ಮನೆಗೆ ಹಾನಿಯಾಗಿ 10,000 ರೂ. ಹಾಗೂ ಗಿರಿಜಾ ಕರ್ಕೇರ ಅವರ ಮನೆಗೆ ಹಾನಿಯಾಗಿ 15,000 ರೂ. ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಜಿಲ್ಲೆಯಲ್ಲಿ ಜೂ.25ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಸರಾಸರಿ 51 ಮಿ.ಮೀ ಮಳೆ ದಾಖಲಾಗಿದೆ. ಕುಂದಾಪುರ ತಾಲೂಕಿನಲ್ಲಿ ಅತೀ ಹೆಚ್ಚು 74.2 ಮಿ.ಮೀ, ಉಡುಪಿಯಲ್ಲಿ 46.2 ಮಿ.ಮೀ ಹಾಗೂ ಕಾರ್ಕಳದಲ್ಲಿ 32.7 ಮಿ.ಮೀ ಮಳೆ ಸುರಿದಿದೆ.