Advertisement

Udupi; ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ: ಪುತ್ತಿಗೆ ಶ್ರೀ ಸಂಕಲ್ಪ

12:27 AM Apr 15, 2024 | Team Udayavani |

ಉಡುಪಿ: ಶ್ರೀಕೃಷ್ಣನಿಗೆ ನಮ್ಮನ್ನು ಸಮರ್ಪಿಸಿಕೊಂಡು 50 ವರ್ಷಗಳ ಕಾಲ ಸೇವೆ ಸಲ್ಲಿಸಲು ಅವನದ್ದೇ ಸಂಕಲ್ಪ ಹೊರತು ನಮ್ಮದೇನೂ ಇಲ್ಲ. ನಮ್ಮ 50 ವರ್ಷಗಳ ಸನ್ಯಾಸ ರಥವನ್ನು ಸಾಂಗವಾಗಿ ಮುನ್ನಡೆಸಿ ಅನುಗ್ರಹಿಸಿದ ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥವನ್ನು ನಿರ್ಮಿಸಲು ಸಂಕಲ್ಪಿಸಲಾಗಿದೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು.

Advertisement

ರಾಜಾಂಗಣದಲ್ಲಿ ರವಿವಾರ ಹಮ್ಮಿಕೊಳ್ಳಲಾದ ಪುತ್ತಿಗೆ ಶ್ರೀಪಾದರ ಸನ್ಯಾಸ ಸ್ವೀಕಾರ ಸುವರ್ಣ ಸಂಭ್ರಮ ಪ್ರಯುಕ್ತ ಶ್ರೀ ಕೃಷ್ಣನಿಗೆ ಸುವರ್ಣ ನಾಣ್ಯ ಅಭಿಷೇಕ ಮತ್ತು ಶ್ರೀಪಾದರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಪ್ರಸ್ತುತ ಹುಟ್ಟುಹಬ್ಬಕ್ಕೆ ವಾಹನವನ್ನು ಉಡುಗೊರೆಯಾಗಿ ಕೊಡುವುದು ಸಂಪ್ರದಾಯವಾಗಿ ಬೆಳೆಯುತ್ತಿದೆ. ಅದಕ್ಕೆ ಅನುಗುಣವಾಗಿ ರಥವನ್ನು ನಿರ್ಮಿಸಿ, ಪ್ರತಿನಿತ್ಯ ಕೃಷ್ಣ ಸೇವೆ ನಡೆದರೆ ನಮ್ಮೆಲ್ಲರ ಕಾರ್ಯಗಳು ಸಾಂಗವಾಗಿ ನೆರವೇರಲಿವೆ. ಎಲ್ಲ ಸಮಾಜದ ಸಜ್ಜನರು ಒಂದಾದಾಗ ದುರ್ಜನರು ಹಿಮ್ಮೆಟ್ಟಲ್ಪಟ್ಟು, ಇಡೀ ಜಗತ್ತಿಗೆ ಶಾಂತಿ ದೊರಕಲಿದೆ. ರಥ ನಿರ್ಮಾಣ ಸೇವಾ ಕೈಂಕರ್ಯದಲ್ಲಿ ಪಾಲ್ಗೊಂಡ ಎಲ್ಲ ಭಕ್ತರ ಮನೋರಥ ಪೂರ್ಣವಾಗುವುದರೊಂದಿಗೆ ಎಲ್ಲರ ಜೀವನ ಸುವರ್ಣಮಯವಾಗಲಿ ಎಂದು ಅವರು ಹರಸಿದರು.

ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

ಕೆ. ರಘುಪತಿ ಭಟ್‌ ಮಾತನಾಡಿ, ಪುತ್ತಿಗೆ ಶ್ರೀಪಾದರ ಪಾರ್ಥಸಾರಥಿ ಸುವರ್ಣ ರಥದ ಕಲ್ಪನೆ ವಿಶಿಷ್ಟವಾದುದು. ದಿನವೂ ಕೃಷ್ಣನನ್ನು ರಥದಲ್ಲಿ ಕುಳ್ಳಿರಿಸಿ ಸೇವೆ ಮಾಡುವ ಸದವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಪ್ರತೀ ಪರ್ಯಾಯದಲ್ಲಿ ವಿನೂತನ ಯೋಜನೆಯ ಮೂಲಕ ದಾಖಲೆ ನಿರ್ಮಿಸಿದ ಕೀರ್ತಿ ಶ್ರೀಪಾದರಿಗೆ ಸಲ್ಲುತ್ತದೆ ಎಂದರು.

Advertisement

ಶತಾವಧಾನಿರಾಮನಾಥ ಆಚಾರ್ಯ ಅವರು, ಪುತ್ತಿಗೆ ಶ್ರೀಪಾದರ ಗುರುತ್ವ ಮಹಿಮೆ ಮತ್ತು ಸಾಮರ್ಥ್ಯದ ಬಗ್ಗೆ ಆಭಿನಂದನ ಮಾತುಗಳಲ್ಲಿ ತಿಳಿಸಿದರು.

ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಬ್ರಹ್ಮಾವರ ರೋಟರಿ ನಿಯೋಜಿತ ಗವರ್ನರ್‌ ಬಿ.ಎಂ. ಭಟ್‌, ಆ್ಯಕ್ಸಿಸ್‌ ಬ್ಯಾಂಕಿನ ಉಪಾಧ್ಯಕ್ಷ ಸುರೇಶ್‌ ರಾವ್‌, ಬ್ರಹ್ಮಾವರ ಜಿ.ಎಂ. ವಿದ್ಯಾನಿಕೇತನದ ಪ್ರಕಾಶ್ಚಂದ್ರ ಶೆಟ್ಟಿ, ರಥಶಿಲ್ಪಿ ರಾಜಗೋಪಾಲ ಆಚಾರ್‌, ಗುಜರಾತ್‌ ಸಮಾಜದ ಅಮೃತಲಾಲ್‌ ಪಾಟೀಲ್ , ಕರ್ಣಾಟಕ ಬ್ಯಾಂಕ್‌ನ ಎಜಿಎಂ ರಾಜಗೋಪಾಲ್ , ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯ, ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇಟ್ , ಕಿದಿಯೂರು ಹೊಟೇಲ್‌ನ ಎಂಡಿ ಭುವನೇಂದ್ರ ಕಿದಿಯೂರು, ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಪುತ್ತಿಗೆ ಶ್ರೀಪಾದರ ಆಪ್ತ ಕಾರ್ಯದರ್ಶಿ ರತೀಶ್‌ ತಂತ್ರಿ, ಶಿಷ್ಯರಾದ ಸಂತೋಷ್‌ ಪಿ. ಶೆಟ್ಟಿ ತೆಂಕರಗುತ್ತು, ಕಿಶೋರ್‌ ಕುಮಾರ್‌ ಗುರ್ಮೆ ಉಪಸ್ಥಿತರಿದ್ದರು.

ವಿದ್ವಾಂಸ ಗೋಪಾಲ ಆಚಾರ್ಯ ನಿರೂಪಿಸಿ, ವಂದಿಸಿದರು. ಶ್ರೀ ಮಠದ ರಮೇಶ್‌ ಭಟ್‌ ಪ್ರಾಸ್ತಾವಿಕ ಮಾತನಾಡಿದರು.

ಗುರುವಂದನೆ
ಪುತ್ತಿಗೆ ಶ್ರೀಪಾದರನ್ನು ಪದ್ಮಪೀಠದಲ್ಲಿ ಕುಳ್ಳಿರಿಸಿ ಗುರುವಂದನೆ ಸಮರ್ಪಿಸಲಾಯಿತು. ಪುತ್ತಿಗೆ ಶ್ರೀಪಾದರ ನಾಲ್ಕನೇ ಪರ್ಯಾಯದ ಮಹತ್ವಾಕಾಂಕ್ಷೆಯ ಯೋಜನೆಯಾದ “ಕೋಟಿಗೀತಾ ಲೇಖನ ಯಜ್ಞ’ದ ಸ್ಮರಣಾರ್ಥ ಶ್ರೀಕೃಷ್ಣನಿಗೆ “ಪಾರ್ಥ ಸಾರಥಿ ಸುವರ್ಣ ರಥ’ವನ್ನು 18 ಕೋ.ರೂ. ವೆಚ್ಚದಲ್ಲಿ ಸಮರ್ಪಿಸಲು ಸಂಕಲ್ಪಿಸಿದ್ದು, ಯೋಜನೆಯ ಪ್ರಾರಂಭ ಮುಹೂರ್ತ ನೆರವೇರಿತು. ರಥ ನಿರ್ಮಾಣಕ್ಕೆ ಭಕ್ತರು ಸಾಂಕೇತಿಕವಾಗಿ 1 ಗ್ರಾಂ ಚಿನ್ನದ ನಾಣ್ಯವನ್ನು ಸಮರ್ಪಿಸಿದರು. ಪಾರ್ಥಸಾರಥಿ ಸುವರ್ಣ ರಥದ ಮನವಿ ಪತ್ರವನ್ನು ಶ್ರೀಪಾದರು ಬಿಡುಗಡೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next