ನವದೆಹಲಿ: ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಪಾರ್ಥ ಚಟರ್ಜಿಯನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾಗೊಳಿಸಿ, ಪಕ್ಷದಿಂದ ಉಚ್ಛಾಟಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಕುನಾಲ್ ಘೋಷ್ ಗುರುವಾರ (ಜುಲೈ 28) ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಪಿಎಫ್ಐ ಬ್ಯಾನ್ ಕುರಿತು ಕೇಂದ್ರ ಗೃಹ ಇಲಾಖೆ ಜತೆ ಚರ್ಚೆ: ಪ್ರಲ್ಹಾದ್ ಜೋಶಿ
ಚಟರ್ಜಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಟಿಎಂಸಿ ಪಕ್ಷದಿಂದ ಉಚ್ಛಾಟಿಸಬೇಕು. ಒಂದು ವೇಳೆ ನನ್ನ ಹೇಳಿಕೆ ತಪ್ಪು ಎಂದಾದರೆ, ನನ್ನನ್ನೂ ಎಲ್ಲಾ ಹುದ್ದೆಯಿಂದ ವಜಾಗೊಳಿಸುವ ಹಕ್ಕು ಟಿಎಂಸಿಗಿದೆ ಎಂದು ಘೋಷ್ ತಿರುಗೇಟು ನೀಡಿದ್ದಾರೆ.
ಪಶ್ಚಿಮಬಂಗಾಳದಲ್ಲಿನ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಪಾರ್ಥ ಚಟರ್ಜಿ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ನಡುವೆಯೇ ಕುನಾಲ್ ಘೋಷ್ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿಯ ಎರಡನೇ ಫ್ಲ್ಯಾಟ್ ನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು 28.90 ಕೋಟಿ ರೂಪಾಯಿ ನಗದು ಹಾಗೂ 5 ಕೆಜಿಗೂ ಅಧಿಕ ಚಿನ್ನ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೊದಲು ಅರ್ಪಿತಾ ಮೊದಲ ಫ್ಲ್ಯಾಟ್ ನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 21.90 ಕೋಟಿ ರೂ. ಹಾಗೂ 56 ಲಕ್ಷ ರೂ. ವಿದೇಶಿ ಕರೆನ್ಸಿ ಹಾಗೂ 76 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದರು.