Advertisement

CISF ಗೆ ಸಂಸತ್‌ ಭದ್ರತೆಯ ಹೊಣೆ: ಸಮಯೋಚಿತ ನಿರ್ಧಾರ

10:19 PM Dec 21, 2023 | Team Udayavani |

ವಾರದ ಹಿಂದಷ್ಟೇ ದೇಶದ ಪ್ರಜಾಸತ್ತೆಯ ದೇಗುಲವಾದ ಸಂಸತ್‌ ಭವನದಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಭದ್ರತಾ ಲೋಪ ನಡೆದ ಘಟನೆಯ ಬಳಿಕ ಈಗ ಇಡೀ ಸಂಸತ್‌ ಆವರಣದ ಸಮಗ್ರ ಭದ್ರತೆಯ ಹೊಣೆಗಾರಿಕೆಯನ್ನು ಕೇಂದ್ರೀಯ ಕೈಗಾರಿಕ ಭದ್ರತಾ ಪಡೆ (ಸಿಐಎಸ್‌ಎಫ್)ಗೆ ವಹಿಸಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ. ಕಳೆದ ವಾರ ಸಂಸತ್ತಿನಲ್ಲಿ ಸಂಭವಿಸಿದ ಕರಾಳ ಘಟನೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತಲ್ಲದೆ ಜನತೆಯಲ್ಲಿ ಆತಂಕ ಸೃಷ್ಟಿಸಿತ್ತು. ಈ ಎಲ್ಲ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ಈ ಸಮಯೋಚಿತ ಮತ್ತು ಸಕಾಲಿಕ ನಿರ್ಧಾರವನ್ನು ಕೈಗೊಂಡಿದೆ.

Advertisement

ಈವರೆಗೆ ಸಂಸತ್‌ ಭವನದ ಭದ್ರತೆಯ ಹೊಣೆಯನ್ನು ವಿವಿಧ ಭದ್ರತಾ ಸಂಸ್ಥೆಗಳು ಮತ್ತು ಪಡೆಗಳನ್ನು ಒಳಗೊಂಡ ಸಂಸತ್‌ ಭದ್ರತಾ ಸೇವೆ(ಪಿಎಸ್‌ಎಸ್‌) ಹೊಂದಿತ್ತು. ಇದು ದೆಹಲಿ ಪೊಲೀಸರ ಅಧೀನಕ್ಕೊಳಪಟ್ಟಿತ್ತು. ಇನ್ನು ಮುಂದೆ ಅವರು ಸಂಸತ್‌ ಭವನದ ಹೊರವಲಯದ ರಕ್ಷಣ ಕಾರ್ಯದಲ್ಲಿ ಮುಂದುವರಿಯಲಿದ್ದರೆ, ಸಂಸತ್‌ ಸಂಕೀರ್ಣದ ಒಳಗಿನ ಭದ್ರತೆಯ ಹೊಣೆಗಾರಿಕೆ ಈಗಿನಂತೆಯೇ ಲೋಕಸಭಾ ಕಾರ್ಯಾಲಯದ ಅಧೀನದಲ್ಲಿಯೇ ಮುಂದುವರಿಯಲಿದೆ. ಆದರೆ ಇನ್ನು ಮುಂದೆ ಹಳೆಯ ಹಾಗೂ ಹೊಸ ಸಂಸತ್‌ ಭವನದ ಭದ್ರತೆಯ ಸಮಗ್ರ ಹೊಣೆಗಾರಿಕೆ ಸಿಐಎಸ್‌ಎಫ್ನದ್ದಾಗಿರಲಿದೆ.

ದೇಶದ ರಾಜಧಾನಿಯ ಪ್ರಮುಖ ಸರ್ಕಾರಿ ಕಟ್ಟಡಗಳು, ದೇಶದ ವಿವಿಧೆಡೆಗಳಲ್ಲಿನ ಸಾರ್ವಜನಿಕ ವಲಯದ ಉದ್ಯಮ ಸಂಸ್ಥೆಗಳು, ವಿಮಾನ ನಿಲ್ದಾಣಗಳು, ಪರಮಾಣು ಘಟಕಗಳು, ದೆಹಲಿ ಮೆಟ್ರೋ ಸಹಿತ ವಿವಿಧ ಮಹತ್ವದ ಮತ್ತು ಅತ್ಯುನ್ನತ ಸಂಸ್ಥೆ, ಕಟ್ಟಡಗಳ ಭದ್ರತೆಯ ಹೊಣೆಗಾರಿಕೆಯನ್ನು ಸಿಐಎಸ್‌ಎಫ್ ಸಮರ್ಥವಾಗಿ ನಿರ್ವಹಿಸುತ್ತಿದೆ. ಅಷ್ಟೇ ಅಲ್ಲದೆ ಸಂಸತ್‌ ಭವನದ ಭದ್ರತೆಯನ್ನು ನಿರ್ವಹಿಸುತ್ತಿದ್ದ ಪಿಎಸ್‌ಎಸ್‌ನ ಒಂದು ಭಾಗವಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಕೇಂದ್ರ ಸರ್ಕಾರ ಸಂಸತ್‌ ಭವನದ ಭದ್ರತೆಯ ಸಂಪೂರ್ಣ ಜವಾಬ್ದಾರಿಯನ್ನು ಸಿಐಎಸ್‌ಎಫ್ಗೆ ವಹಿಸುವ ತೀರ್ಮಾನ ಕೈಗೊಂಡಿದೆ.

ಡಿ. 13ರಂದು ಸಂಸತ್‌ ಭವನದಲ್ಲಿ ಸಂಭವಿಸಿದಂತಹ ಭದ್ರತಾ ವೈಫ‌ಲ್ಯ ಭವಿಷ್ಯದಲ್ಲಿ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರ್ಕಾರ ಈ ಮಹತ್ತರ ನಿರ್ಧಾರ ಕೈಗೊಂಡಿದೆ. ಇದೇ ವೇಳೆ ಕೇಂದ್ರ ಸರ್ಕಾರ ಸಂಸತ್‌ ಭವನಕ್ಕೆ ಸಂದರ್ಶಕರ ಪ್ರವೇಶದ ವ್ಯವಸ್ಥೆಯಲ್ಲೂ ಆಮೂಲಾಗ್ರ ಬದಲಾವಣೆಯನ್ನು ಮಾಡಬೇಕಿದೆ. ಪಾಸ್‌ ಪಡೆದುಕೊಂಡು ಸಂಸತ್‌ ಭವನವನ್ನು ಪ್ರವೇಶಿಸುವವರ ಮೇಲೆ ಇನ್ನಷ್ಟು ಹೆಚ್ಚಿನ ನಿಗಾ ಇರಿಸುವ ಅಗತ್ಯವಿದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ರಂಗೋಲಿಯಡಿಗೆ ನುಸುಳುವವರ ಸಂಖ್ಯೆಯೇ ಅಧಿಕವಾಗಿರುವುದರಿಂದ ಸರ್ಕಾರ ಮತ್ತು ಭದ್ರತಾ ಪಡೆಗಳು ಕೂಡ ಭದ್ರತಾ ವ್ಯವಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ಬಳಸಬೇಕು. ಸಂಸತ್‌ ಭವನದ ಭದ್ರತೆಯ ವಿಷಯದಲ್ಲಿ ಸರ್ಕಾರ ಸಿಐಎಸ್‌ಎಫ್ಗೆ ಸಂಪೂರ್ಣ ಸ್ವಾಯತ್ತೆ ನೀಡಬೇಕು. ಇಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ, ರಾಜಿ, ಹೊಂದಾಣಿಕೆಗೆ ಅವಕಾಶ ನೀಡಕೂಡದು. ಭದ್ರತಾ ವ್ಯವಸ್ಥೆಯಲ್ಲಿನ ಅತೀ ಸಣ್ಣ ಲೋಪ ಕೂಡ ಬಲುದೊಡ್ಡ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಮತ್ತು ಸಂಸತ್‌ ಭವನದ ಭದ್ರತೆ ಮತ್ತು ಅದಕ್ಕೆ ಭಂಗದಂತಹ ಘಟನೆಗಳು ದೇಶದ ಘನತೆ-ಗೌರವಗಳ ವಿಚಾರವೂ ಆಗಿರುವುದರಿಂದ ಸರಕಾರ ಇದರತ್ತ ಹೆಚ್ಚಿನ ಲಕ್ಷ್ಯ ಹರಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next