ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗು ಸಚಿವ ಪದವಿ ಎರಡೂ ಹುದ್ದೆಯನ್ನು ನಿಭಾಯಿಸುವ ಶಕ್ತಿ ನನಗಿದೆ ಎಂದು ಹೈ ಕಮಾಂಡ್‌ಗೆ ಗೊತ್ತಿದೆ. ಹೀಗಾಗಿ ಎರಡು ಹುದ್ದೆಯನ್ನ ಏಕಕಾಲಕ್ಕೆ ನಿಭಾಯಿಸುವ ಜವಾಬ್ದಾರಿಯನ್ನ ತಮಗೆ ನೀಡಿದ್ದಾರೆ. ಕೆಲವರು ಸುಮ್ಮನೆ ಹೇಳಿಕೆ ಕೊಟ್ಟು ಗೊಂದಲ ಸೃಷ್ಠಿಸುವ ಅಗತ್ಯವಿಲ್ಲ ಎಂದು ಸಂಸದ ಕೆ.ಎಚ್. ಮುನಿಯಪ್ಪ ಹೆಸರು ಹೇಳದೇ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಕಿಡಿಕಾರಿದ್ದಾರೆ.
ನೂತನ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೊಪಾಲ ಅವರನ್ನ ಅಭಿನಂದಿಸಿ ನಂತರ ಮಾತನಾಡಿದ ಅವರು,ಸಂಸದ ಮುನಿಯಪ್ಪ ವಿರುದ್ಧ ಪರೋಕ್ಷವಾಗಿ ಅಸಮಾದಾನ ಹೊರಹಾಕಿದರು.
ಕೆಪಿಸಿಸಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಹೈ ಕಮಾಂಡ್‌ಗೆ ಬಿಟ್ಟ ವಿಚಾರ, ಡಿ.ಕೆ.ಶಿವಕುಮಾರ್, ಎಂ.ಬಿ. ಪಾಟೀಲ್, ಎಸ್. ಆರ್. ಪಾಟೀಲ್, ಮಲ್ಲಿಕಾರ್ಜುನ ಖರ್ಗೆ, ಸೇರಿದಂತೆ ಅನೇಕರ ಹೆಸರು ಕೇಳಿ ಬರುತ್ತಿದೆ. ನನ್ನನ್ನು ಮುಂದುವರೆಸುವ ಬಗ್ಗೆ ನಾನೇನು ಹೇಳುವುದಿಲ್ಲ. ಹೈ ಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಪಕ್ಷಕ್ಕೆ ಹೊಸ ಅಧ್ಯಕ್ಷರ ಅಗತ್ಯವಿದೆ ಎಂದರೆ, ಹೈ ಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ವೇಣುಗೋಪಾಲ ಅವರು ಹೊಸದಾಗಿ ಪಕ್ಷದ ಉಸ್ತುವಾರಿ ವಹಿಸಿಕೊಂಡು ರಾಜ್ಯಕ್ಕೆ ಬಂದಿದ್ದಾರೆ. ಪಕ್ಷದಲ್ಲಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಅನುಭವ ಅವರಿಗಿದೆ. ಎಲ್ಲರೊಂದಿಗೆ ಅವರು ಪ್ರತ್ಯೇಕವಾಗಿ ಮಾತನಾಡಿ, ಹೈ ಕಮಾಂಡ್‌ಗೆ ಮಾಹಿತಿ ನೀಡುತ್ತಾರೆ ಎಂದು ಪರಮೇಶ್ವರ ಹೇಳಿದರು. ಮುಂದಿನ ಚುನಾವಣೆಯನ್ನು ಗೆಲ್ಲುವುದಷ್ಟೇ ನಮ್ಮೆಲ್ಲರ ಗುರಿ ಯಾಗಿರಬೇಕು ಎಂದು ಅವರು ಹೇಳಿದರು.
ಹೈ ಕಮಾಂಡ್ ಮೇಲೆ ಅಸಮಾಧಾನ ಇಲ್ಲ: ಡಿಕೆಶಿ
ಬೆಂಗಳೂರು:ಕೆಪಿಸಿಸಿ ಅಧ್ಯಕ್ಷರ ನೇಮಕದ ವಿಚಾರದಲ್ಲಿ ಹೈ ಕಮಾಂಡ್ ಮೇಲೆ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಸೋಮವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಅವರನ್ನು ಭೇಟಿ ಮಾಡಿ ನಂತರ ಮಾತನಾಡಿದ ಅವರು, ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿ ಕೂತಿಲ್ಲ. ಜನ, ಕಾರ್ಯಕರ್ತರು ಹಾಗೂ ಹೈ ಕಮಾಂಡ್ ಏನು ಹೇಳಿದೆ ಅದನ್ನು ಮಾಡುತ್ತಿದ್ದೇನೆ. 2018 ಕ್ಕೆ ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನನ್ನ ಮುಖ್ಯ ಗುರಿ. ಅಲ್ಲದೇ 2019 ಕ್ಕೆ ಕೇಂದ್ರದಲ್ಲಿ ಕಾಂಗ್ರೆಸ ಸರ್ಕಾರ ಅಧಿಕಾರಕ್ಕೆ ತರುವುದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ದನಿದ್ದೇನೆ ಎಂದು ತಿಳಿಸಿದರು.