Advertisement
ಮಾ.5ರಂದು ಆರಂಭವಾದ ಬಜೆಟ್ ಅಧಿವೇಶನದ ಎರಡನೇ ಭಾಗ ಸರಿಯಾಗಿ ನಡೆಯಲೇ ಇಲ್ಲ. ಈ ಬಾರಿ ಒಟ್ಟಾರೆ ನಡೆದದ್ದು, ಕೇವಲ 124 ನಿಮಿಷ ಮಾತ್ರ. ಅಂದರೆ 22 ದಿನಗಳಲ್ಲಿ ಸರಿಸುಮಾರು 250 ಗಂಟೆ ಸಂಪೂರ್ಣವಾಗಿ ವ್ಯರ್ಥವಾಗಿದೆ. 2000ನೇ ಇಸವಿಯ ಅನಂತರ ಈ ಪ್ರಮಾಣದಲ್ಲಿ ಕಲಾಪದ ಸಮಯ ಹರಣವಾಗಿದ್ದು ಈಗಲೇ. ಈ ಹಿಂದೆ 2011ರಲ್ಲಿ 2ಜಿ ಸ್ಪೆಕ್ಟ್ರಂ ಹಗರಣದ ಕುರಿತಾಗಿ ಭಾರೀ ಗದ್ದಲವುಂಟಾದರೂ ಆಗಿನ ಯುಪಿಎ ಸರಕಾರ ಜಂಟಿ ಸಂಸದೀಯ ಸಮಿತಿ ರಚಿಸಿ ಸದನ ಸರಿಯಾಗಿ ನಡೆಯಲು ಅನುವು ಮಾಡಿಕೊಟ್ಟಿತ್ತು.
ಹೋರಾಟ-ಪ್ರತಿ ಹೋರಾಟ: ಅಧಿವೇಶನ ಕೊಚ್ಚಿ ಹೋದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರ ತಣ್ಣಗಾಗಿಲ್ಲ. ಕಲಾಪ ವ್ಯರ್ಥವಾಗಲು ವಿಪಕ್ಷಗಳೇ ಕಾರಣ ಎಂದು ಬಿಂಬಿಸುವ ಸಲುವಾಗಿ ಬಿಜೆಪಿ ಎ.12ರಂದು ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದೆ. ಅಂದು ಬಿಜೆಪಿಯ ಎಲ್ಲ ಸಂಸದರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸಿ, ಕಾಂಗ್ರೆಸ್‌ನ ವಿಭಜನಾತ್ಮಕ ಮತ್ತು ನಕಾರಾತ್ಮಕ ರಾಜಕೀಯವನ್ನು ಜನರ ಮುಂದಿಡುವಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ಕುಮಾರ್ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಕೂಡ ಎ.9ರಂದು ದೇಶಾದ್ಯಂತ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಹೇಳಿದೆ. ಎಲ್ಲ ಜಿಲ್ಲಾ ಹಾಗೂ ರಾಜ್ಯ ಕಚೇರಿಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ, ಕಲಾಪ ವ್ಯರ್ಥವಾಗಲು ಕಾಂಗ್ರೆಸ್ ಕಾರಣ ಎಂದು ಹೇಳಿದ್ದ ಸಚಿವ ಅನಂತ್‌ಕುಮಾರ್ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ನಿರ್ಣಯ ಮಂಡಿಸಿದೆ. ಕಡೇ ದಿನವೂ ಹೋರಾಟ: ಕೊನೆಯ ದಿನವಾದ ಶುಕ್ರವಾರವೂ ವಿಪಕ್ಷಗಳ ಸಂಸದರು ಗದ್ದಲ ನಡೆಸಿದ್ದರು. ಕಲಾಪ ಮುಗಿದು ಅಧಿವೇಶನ ಮುಕ್ತಾಯವಾಗುತ್ತಿದ್ದಂತೆ ಗಾಂಧಿ ಪ್ರತಿಮೆಯ ಎದುರು ನಿಂತು ಬಿಜೆಪಿ ಹಾಗೂ ವಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದವು. ಕಲಾಪ ನಡೆಯುವುದಕ್ಕೆ ಕಾಂಗ್ರೆಸ್ ಅವಕಾಶ ನೀಡಲಿಲ್ಲ ಎಂದು ಬಿಜೆಪಿ ಆರೋಪಿಸಿದರೆ, ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ ಎಂದು ಕಾಂಗ್ರೆಸ್ ಆಕ್ಷೇಪಿಸಿತು. ಪ್ರಧಾನಿ ಮೋದಿಗೆ 21 ರಾಜ್ಯಗಳು ನೀಡಿದ ಬಹುಮತವನ್ನು ಕಾಂಗ್ರೆಸ್‌ನಿಂದ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇನ್ನೊಂದೆಡೆ ಅಧಿವೇಶನದ ಕೊನೆಯ ದಿನ ಸಂಪ್ರದಾಯದಂತೆ ಸ್ಪೀಕರ್ ನಡೆಸುವ ಚಹಾ ಕೂಟಕ್ಕೆ ಕಾಂಗ್ರೆಸ್ ನಾಯಕರು ಹಾಜರಾಗಲಿಲ್ಲ. ಶುಕ್ರವಾರ ಬೆಳಗ್ಗೆ ಚಹಾಕೂಟಕ್ಕೆ ಎಲ್ಲ ಕಾಂಗ್ರೆಸ್ ಸಂಸದರು ಗೈರಾಗಿದ್ದರು.
Related Articles
Advertisement
ಐವರು ಸಂಸದರ ರಾಜೀನಾಮೆ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದಿರುವ ಕೇಂದ್ರ ಸರಕಾರದ ಕ್ರಮಕ್ಕೆ ಪ್ರತಿಭಟನೆ ರೂಪವಾಗಿ ವೈಎಸ್‌ಆರ್ ಕಾಂಗ್ರೆಸ್‌ನ ಐವರು ಸಂಸದರು ರಾಜೀನಾಮೆ ನೀಡಿದ್ದಾರೆ. ಕಲಾಪ ಮುಗಿಯುತ್ತಿದ್ದಂತೆಯೇ ಸ್ಪೀಕರ್ ಸುಮಿತ್ರಾ ಮಹಾಜನ್‌ಗೆ ರಾಜೀನಾಮೆ ಪತ್ರವನ್ನು ಅವರು ಹಸ್ತಾಂತರಿಸಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ. ಈಗ ಟಿಡಿಪಿ ಸಂಸದರೂ ರಾಜೀನಾಮೆ ನೀಡಲಿ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಗೆ ಇನ್ನಷ್ಟು ಬಲ ನೀಡಲಿ ಎಂದು ಸವಾಲು ಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ ವೈ.ಎಸ್.ಆರ್. ಕಾಂಗ್ರೆಸ್ ಮುಖಂಡ ಜಗನ್ ಮೋಹನ ರೆಡ್ಡಿ, ಎನ್.ಡಿ.ಎ. ಸರಕಾರ ಈ ವಿಚಾರದಲ್ಲಿ ವಿಫಲವಾಗಿರುವುದರಿಂದ ಈ ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ.
ಕಾವೇರಿ ಜಲ ನಿರ್ವಹಣ ಮಂಡಳಿ ಬೇಡಯಾವುದೇ ಕಾರಣಕ್ಕೂ ಕೇಂದ್ರ ಸರಕಾರ ಕಾವೇರಿ ಜಲ ನಿರ್ವಹಣ ಮಂಡಳಿ ರಚಿಸಬಾರದು ಎಂದು ಆಗ್ರಹಿಸಿ ಕರ್ನಾಟಕದ ಕೆಲವು ಕಾಂಗ್ರೆಸ್ ಸಂಸದರು ಲೋಕಸಭೆ ಮುಂದೆ ಶುಕ್ರವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು. 375 ಕೋಟಿ ರೂ. ವ್ಯರ್ಥ
ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಚರ್ಚೆಗೆ ನಿಗದಿಯಾಗಿದ್ದ ಸಮಯ 250 ಗಂಟೆ. ಈ ಅವಧಿಗೆ ಸರಕಾರ ಮಾಡಿರುವ ವೆಚ್ಚ 375 ಕೋಟಿ ರೂ. ಅಂದರೆ, ಅಧಿವೇಶನದ ವೇಳೆ ಸಂಸದರ ಎಲ್ಲ ಖರ್ಚು ವೆಚ್ಚಗಳನ್ನು ಸೇರಿಸಿ ಪ್ರತಿ ನಿಮಿಷಕ್ಕೆ 2.5 ಲಕ್ಷ ರೂ.ಗಳಂತೆ ಹಣವನ್ನು ತೆಗೆದಿರಿಸಲಾಗಿರುತ್ತದೆ. ಕಲಾಪ ನಡೆಯಲಿ, ನಡೆಯದೆ ಇರಲಿ ಇಷ್ಟು ಹಣ ಖರ್ಚಾಗಿಯೇ ಆಗುತ್ತದೆ. ಹೀಗಾಗಿ ಎನ್.ಡಿ.ಎ. ಸಂಸದರು ಜನರ ಹಣವನ್ನು ಪೋಲು ಮಾಡುವುದಿಲ್ಲ ಎಂದು ಬಿಂಬಿಸುವ ಸಲುವಾಗಿ ಬಜೆಟ್ ಅಧಿವೇಶನದ ಅವಧಿಯ ಸಂಪೂರ್ಣ ವೇತನ ನಿರಾಕರಿಸುವುದಾಗಿ ಘೋಷಿಸಿದ್ದಾರೆ.