Advertisement
ಈ ಅದ್ಧೂರಿ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡರೂ, ಉದ್ಘಾಟನೆಯನ್ನು ಯಾರು ಮಾಡಬೇಕು ಎಂಬ ವಿಚಾರದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ವಾಗ್ಯುದ್ಧ ಮಾತ್ರ ನಿಂತಿಲ್ಲ. ಶನಿವಾರವೂ ಬಿಜೆಪಿ ಹಾಗೂ ಪ್ರತಿಪಕ್ಷಗಳ ನಾಯಕರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ ಮುಂದುವರಿದಿತ್ತು.
Related Articles
Advertisement
ಸಂವಿಧಾನದ 79ನೇ ವಿಧಿಯ ಪ್ರಕಾರ, ರಾಷ್ಟ್ರಪತಿಗಳು, ರಾಜ್ಯಸಭೆ ಮತ್ತು ಲೋಕಸಭೆ ಮೂರೂ ಸೇರಿ ಸಂಸತ್ ರೂಪುಗೊಂಡಿದೆ. ರಾಷ್ಟ್ರಪತಿಯು ದೇಶದ ಪ್ರಥಮ ಪ್ರಜೆ ಮತ್ತು ದೇಶದ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್. ಹೀಗಿರುವಾಗ ಸಂಸತ್ ಭವನ ಉದ್ಘಾಟನೆಯಿಂದ ರಾಷ್ಟ್ರಪತಿಯವರನ್ನು ಹೊರಗಿಟ್ಟಿರುವುದು ಭಾರತದ ಪರಮೋಚ್ಚ ಹುದ್ದೆಗೆ ಮಾಡುವ ಅವಮಾನ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ. ನಾವು ಪ್ರಧಾನಿ ಮೋದಿಯವರನ್ನು ವಿರೋಧಿಸುತ್ತಿಲ್ಲ. ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳ ಕಡೆಗಣನೆಯನ್ನು ವಿರೋಧಿಸುತ್ತಿದ್ದೇವೆ ಎಂದೂ ಸುಳೆ ಸ್ಪಷ್ಟಪಡಿಸಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತನಾಡಿ, “ಹೊಸ ಸಂಸತ್ ಭವನದ ಅಗತ್ಯವೇನಿತ್ತು? ಹಿಂದಿನ ಕಟ್ಟಡವೇ ಐತಿಹಾಸಿಕವಾಗಿತ್ತು. ಅಧಿಕಾರದಲ್ಲಿರುವ ಜನರು ಈ ದೇಶದ ಇತಿಹಾಸವನ್ನು ಬದಲಿಸುತ್ತಾರೆ ಎಂದು ನಾನು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದೇನೆ’ ಎಂದಿದ್ದಾರೆ.
ರಾಜಕೀಯ ಮಾಡಲೂ ಮಿತಿ ಬೇಕು:
20 ಪ್ರತಿಪಕ್ಷಗಳು ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, ಇದೊಂದು ದುರದೃಷ್ಟಕರ ಸಂಗತಿ. ರಾಜಕೀಯ ಮಾಡುವುದಕ್ಕೂ ಮಿತಿ ಬೇಕು. ಹೊಸ ಸಂಸತ್ ಭವನದ ಉದ್ಘಾಟನೆಯನ್ನು ಇಡೀ ದೇಶದ ಹಬ್ಬವೆಂಬಂತೆ ಆಚರಿಸಬೇಕು ಎಂದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, “ಕೆಲವು ವ್ಯಕ್ತಿಗಳಿಗೆ ಸಂಸತ್ ಭವನ ಪ್ರವೇಶಿಸುವುದಕ್ಕೆ ನಿರ್ಬಂಧವಿದೆ. ಈವರೆಗೆ ಇವರೆಲ್ಲ ಸದನಗಳ ಕಲಾಪ ಕೊಚ್ಚಿಹೋಗುವಂತೆ ಮಾಡಲು ನೆಪಗಳನ್ನು ಹುಡುಕುತ್ತಿದ್ದರು. ಈಗ ಸಂಸತ್ ಭವನ ಉದ್ಘಾಟನೆಯನ್ನೇ ಬಹಿಷ್ಕರಿಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಖರ್ಗೆ, ಕೇಜ್ರಿವಾಲ್ ವಿರುದ್ಧ ಎಫ್ಐಆರ್
ಸಂಸತ್ ಭವನ ಉದ್ಘಾಟನೆ ವಿಚಾರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜಾತಿಯ ಬಗ್ಗೆ ಪ್ರಸ್ತಾಪಿಸಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ, ರಾಜಕೀಯ ಉದ್ದೇಶಕ್ಕಾಗಿ ಭಾರತ ಸರ್ಕಾರದ ಬಗ್ಗೆ ಅಪನಂಬಿಕೆ ಮೂಡಿಸುವ ಯತ್ನ ಆರೋಪವನ್ನು ಈ ನಾಯಕರ ವಿರುದ್ಧ ಹೊರಿಸಲಾಗಿದೆ.