ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ ಸೋಮವಾರ (ನಾಳೆ)ದಿಂದ ಆರಂಭಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹೊಸದಾಗಿ ಆಯ್ಕೆಯಾದ ಸಂಸತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ, ಸ್ಪೀಕರ್ ಆಯ್ಕೆಯ ಚುನಾವಣೆ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ನೆರವೇರಲಿದೆ.
ಬೆಳಗ್ಗೆ 11ಗಂಟೆಗೆ ಆರಂಭವಾಗುವ ಅಧಿವೇಶನದಲ್ಲಿ ಮೊದಲಿಗೆ ಪ್ರಧಾನಿ ಮೋದಿ, ಆ ಬಳಿಕ ಸಚಿವ ಸಂಪುಟದ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಂತರ ಅಸ್ಸಾಂನಿಂದ ಮೊದಲ್ಗೊಂಡು ಪಶ್ಚಿಮ ಬಂಗಾಳ ರಾಜ್ಯದ ಸದಸ್ಯರು ಕ್ರಮವಾಗಿ ಪ್ರಮಾಣ ವಚನ ಸ್ವೀಕರಿಸುವರು. 280 ಸದಸ್ಯರು ಸೋಮವಾರ ಹಾಗೂ 264 ಸದಸ್ಯರು ಮಂಗಳವಾರ ಪ್ರಮಾಣ ಸ್ವೀಕರಿಸಲಿದ್ದಾರೆ. 26ರಂದು ಲೋಕಸಭೆ ಸ್ಪೀಕರ್ ಆಯ್ಕೆ ಚುನಾವಣೆ ಹಾಗೂ 27ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಹಂಗಾಮಿ ಸ್ಪೀಕರ್ ಭತೃಹರಿಗೆ ರಾಷ್ಟ್ರಪತಿ ಪ್ರಮಾಣ ವಚನ ಬೋಧನೆ
ಹಂಗಾಮಿ ಸ್ಪೀಕರ್ ಆಗಿ ಆಯ್ಕೆಯಾದ ಹಿರಿಯ ಸದಸ್ಯ ಭತೃಹರಿಗೆ ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು ಸೋಮವಾರ ಬೆಳಗ್ಗೆ ಪ್ರಮಾಣ ವಚನ ಬೋಧಿಸುವರು. ಆ ಬಳಿಕ ಬೆಳಗ್ಗೆ 11ಗಂಟೆಗೆ ಸಂಸತ್‌ಗೆ ಆಗಮಿಸುವರು. ನೂತನ ಸ್ವೀಕರ್ ಆಯ್ಕೆವರೆಗೆ ಹಂಗಾಮಿ ಸ್ಪೀಕರ್ ಅಧಿವೇಶನದ ಕಲಾಪಗಳ ನಿರ್ವಹಿಸಲಿದ್ದಾರೆ. ಲೋಕಸಭೆ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ನೂತನ ಸಂಸತ್ ಸದಸ್ಯರಿಗೆ ಆಸನಗಳ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 293 ಸ್ಥಾನ ಹಾಗೂ ಇಂಡಿಯಾ ಮೈತ್ರಿಕೂಟವು234 ಸ್ಥಾನಗಳ ಗಳಿಸಿತ್ತು.