Advertisement

ಉದ್ಯಾನಗಳ ಅಭಿವೃದ್ಧಿಯಲ್ಲಿ ಅಕ್ರಮ: ತನಿಖೆಗೆ ಆದೇಶ

11:44 AM Jan 03, 2017 | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಉದ್ಯಾನವನ ಅಭಿವೃದ್ಧಿಗಾಗಿ ಕೆಆರ್‌ಐಡಿಎಲ್‌ ವತಿಯಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳಲ್ಲಿ ವ್ಯಾಪಕ ಅವ್ಯಹಾರ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಮೇಯರ್‌ ಜಿ. ಪದ್ಮಾವತಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಲಾಲ್‌ಬಾಗ್‌ನಲ್ಲಿ ಮಗು ಸಾವನ್ನಪ್ಪಿದ ಪ್ರಕರಣದ ಹಿನ್ನೆಲೆಯಲ್ಲಿ ಬಿಬಿಎಂಪಿ ಉದ್ಯಾನವನ ಗಳಲ್ಲಿನ ಸುರಕ್ಷತೆ ಹಾಗೂ ನಿರ್ವಹಣೆ ಕಾಮಗಾರಿಗಳ ಕುರಿತು ಸೋಮವಾರ ಅವರು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಅಗ್ರಹಾರ ದಾಸರಹಳ್ಳಿ ವಾರ್ಡ್‌ನ ಗಾಯತ್ರಿ ಆಸ್ಪತ್ರೆ ಎದುರಿಗಿನ ಬಿಬಿಎಂಪಿ ಉದ್ಯಾನವನ, ನಂದನವನ ಉದ್ಯಾನ ಹಾಗೂ ಬಸವನ ಉದ್ಯಾನಗಳಿಗೆ ಭೇಟಿ ನೀಡಿದ ಮೇಯರ್‌, ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ಈ ವೇಳೆ ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ ಸಾಕಷ್ಟು ಲೋಪದೋಷಗಳು ಕಂಡು ಬಂದವು. ಉದ್ಯಾನವನಗಳಲ್ಲಿ ಸಸಿ ನೆಡಲು ಒಂದೊಂದು ಸಸಿಗೆ 2,500 ರೂ. ನೀಡಿ ಖರೀದಿ ಮಾಡಲಾಗಿದೆ.

ಅಲ್ಲದೆ, ಸಸಿ ನೆಡುವುದಕ್ಕೂ ಪ್ರತ್ಯೇಕವಾಗಿ ಹಣ ವೆಚ್ಚ ಮಾಡಲಾಗಿದೆ. ಹೀಗಾಗಿ ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ಬಿಬಿಎಂಪಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆ ವಹಿಸಿಕೊಂಡಿದ್ದ ಪ್ರಕಾಶ್‌ ಅವ್ಯವಹಾರದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಹೇಳಿದ ಮೇಯರ್‌ ಪದ್ಮಾವತಿ, ಈ ಕುರಿತು ತನಿಖೆ ನಡೆಸುವಂತೆ ತೋಟಗಾರಿಕೆ ವಿಶೇಷ ಆಯುಕ್ತರಿಗೆ ಆದೇಶಿಸಿದರು.

ಬಳಿಕ ಕಾವೇರಿಪುರ ವಾರ್ಡ್‌ನ ಮಾಳಗಾಳ ಕೆರೆ ಪ್ರದೇಶದ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಿರುವ ಉದ್ಯಾನವನ್ನು ಪರಿಶೀಲಿಸಿದರು. ಅಲ್ಲೂ ಸಹ ಕಾಮಗಾರಿ ಪೂರ್ಣಗೊಳಿಸದೆ ಇರುವುದು ಹಾಗೂ ಗ್ರಿಲ್ಸ್‌ ಅಗತ್ಯವಿಲ್ಲದಿದ್ದರೂ ಸುತ್ತಲೂ ಅಳವಡಿಕೆ ಮಾಡಿರುವುದು ಕಂಡು ಬಂದಿದೆ. ಹೀಗಾಗಿ ಕೂಡಲೇ ಕಾಮಗಾರಿಗಳಿಗೆ ಸಂಬಂಧಿಸಿದ ಕಾರ್ಯಯೋಜನೆ ಹಾಗೂ ಅಂದಾಜುಪಟ್ಟಿಯಂತಹ ಎಲ್ಲಾ ವಿವರ ಒದಗಿಸುವಂತೆ ತೋಟಗಾರಿಕೆ ವಿಭಾಗದ ಇಂಜಿನಿಯರ್‌ಗೆ ನಿರ್ದೇಶನ ನೀಡಿದರು. 

ಮೇಯರ್‌ ಜತೆಗೆ ಪಾಲಿಕೆ ಆಡಳಿತ ಪಕ್ಷದ ನಾಯಕರಾದ ಮಹಮ್ಮದ್‌ ರಿಜಾನ್‌, ಜೆಡಿಎಸ್‌ ಪಕ್ಷದ ನಾಯಕರಾದ ಆರ್‌.ರುಮೀಳಾ ಉಮಾಶಂಕರ್‌, ಸ್ಥಳೀಯ ಪಾಲಿಕೆ ಸದಸ್ಯರು, ಜಂಟಿ ಆಯುಕ್ತರು ಹಾಜರಿದ್ದರು.

Advertisement

ಪೌರಕಾರ್ಮಿಕರಿಗೆ ಮೂಲ ಸೌಕರ್ಯ: ಮೇಯರ್‌ ಪದ್ಮಾವತಿ ಭರವಸೆ
ಬೆಂಗಳೂರು:
ಪೌರ ಕಾರ್ಮಿಕರಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಚಾಲನೆ ನೀಡಿರುವ ಬಿಬಿಎಂಪಿ, ಇದೀಗ ಮಸ್ಟರಿಂಗ್‌ ಕೇಂದ್ರಗಳಲ್ಲಿ ಅವರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಮುಂದಾಗಿದೆ. ಸೋಮವಾರ ನಗರದ ಪುರಭವನದಲ್ಲಿ ಬಿಬಿಎಂಪಿ ದಕ್ಷಿಣ ವಲಯದ ಪೌರಕಾರ್ಮಿಕರಿಗೆ ಬಿಸಿಯೂಟ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೇಯರ್‌ ಜಿ. ಪದ್ಮಾವತಿ, ಮಸ್ಟರಿಂಗ್‌ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ತಮ್ಮ ಅನುದಾನದಿಂದಲೇ ಹಣ ಬಿಡುಗಡೆ ಮಾಡುವುದಾಗಿ ಹೇಳಿದರು.

ಬಿಬಿಎಂಪಿ ವ್ಯಾಪ್ತಿಯ 30 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಪ್ರತಿನಿತ್ಯ ಬಿಸಿಯೂಟ ಪೂರೈಸಲು ಯೋಜನೆ ಶುರು ಮಾಡಲಾಗಿದೆ. ದಕ್ಷಿಣ ವಲಯದ ಬಿಸಿಯೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದರಿಂದ ಒಟ್ಟು ಆರು ವಲಯಗಳಿಗೆ ಯೋಜನೆ ವಿಸ್ತರಿಸಿದಂತಾಗಿದೆ. ಎರಡು ವಲಯದಲ್ಲಿ ಮಾತ್ರ ಯೋಜನೆ ಜಾರಿ ಬಾಕಿ ಇದ್ದು, ಜ.3 ರಂದು ರಾಜರಾಜೇಶ್ವರಿ ನಗರ ವಲಯದಲ್ಲೂ ಚಾಲನೆ ದೊರೆಯಲಿದೆ ಎಂದು ಹೇಳಿದರು.

ಪೌರಕಾರ್ಮಿಕರಿಗೆ ವೇತನ ಪರಿಷ್ಕರಣೆ, ರಜೆ, ಅಗತ್ಯ ಸಲಕರಣೆ ವಿತರಿಸುವ ಜತೆಗೆ ಬಿಸಿಯೂಟ ಕಾರ್ಯಕ್ರಮವನ್ನೂ ಜಾರಿಗೆ ತಂದಿದ್ದೇವೆ. ಇನ್ನು ಪ್ರತಿ ದಿನ ಪೌರಕಾರ್ಮಿಕರು ಊಟ ಮಾಡುವ ಮಸ್ಟರಿಂಗ್‌ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ, ಸಮವಸ್ತ್ರ ಬದಲಾವಣೆಗೆ ಕೊಠಡಿಗಳ ವ್ಯವಸ್ಥೆ ಇಲ್ಲ ಎಂಬ ದೂರುಗಳಿವೆ. ಹೀಗಾಗಿ ಮೇಯರ್‌ ಅನುದಾನದಿಂದ ಹಣ ಬಿಡುಗಡೆ ಮಾಡಿ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂದರು.

ವೇತನ ನೇರ ಬ್ಯಾಂಕ್‌ ಖಾತೆಗೆ: ಗುತ್ತಿಗೆ ಪೌರಕಾರ್ಮಿಕರಿಗೆ ಜನವರಿಯಿಂದ 12,200 ರೂ. ವೇತನ ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ. ಜತೆಗೆ ಬಿಬಿಎಂಪಿ ವತಿಯಿಂದಲೇ ನೇರವಾಗಿ ಪೌರಕಾರ್ಮಿಕರಿಗೆ ಇಎಸ್‌ಐ ಮತ್ತು ಪಿಎಫ್‌ ಸೌಲಭ್ಯ ಕಲ್ಪಿಸಲಾಗುವುದು. ವಸತಿ ರಹಿತ ಪೌರಕಾರ್ಮಿಕರಿಗೆ 400 ಮನೆಗಳನ್ನು ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇಷ್ಟೊಂದು ಸೌಲಭ್ಯಗಳನ್ನು ಪೌರಕಾರ್ಮಿರಿಗೆ ಸರ್ಕಾರ ನೀಡುತ್ತಿದ್ದು, ಅದಕ್ಕೆ ತಕ್ಕಂತೆ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದರು.

ಶಾಸಕ ಆರ್‌.ವಿ. ದೇವರಾಜ್‌, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ರಿಜ್ವಾನ್‌, ಪಾಲಿಕೆ ಜೆಡಿಎಸ್‌ ನಾಯಕಿ ರಮೀಳಾ ಉಮಾಶಂಕರ್‌, ವಿಶೇಷ ಅಯುಕ್ತ ರವೀಂದ್ರ, ಜಂಟಿ ಆಯುಕ್ತ ಬಾಲಚಂದ್ರ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next