Advertisement
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಹತ್ತು ಟಿಟಿಎಂಸಿಗಳು ಸೇರಿದಂತೆ ನಗರದಾದ್ಯಂತ 20ಕ್ಕೂ ಅಧಿಕ ಬಹುಮಹಡಿ ವಾಹನಗಳ ನಿಲುಗಡೆ ತಾಣಗಳಿವೆ. ಅದರಲ್ಲಿ ಕೆಲವು ಸಮರ್ಪಕ ಬಳಕೆ ಆಗುತ್ತಿಲ್ಲ. ಬದಲಿಗೆ ರಸ್ತೆ, ಫುಟ್ ಪಾತ್ ಹೀಗೆ ಎಲ್ಲೆಂದರಲ್ಲಿ ನಿಲುಗಡೆ ಮಾಡಲಾಗುತ್ತಿದೆ. ಆದ್ದರಿಂದ ಸಾರ್ವಜನಿಕ ವಾಹನ ನಿಲುಗಡೆ ತಾಣಗಳ ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
Related Articles
Advertisement
ಈ ಬಹುಮಹಡಿ ಪಾರ್ಕಿಂಗ್ ತಾಣಗಳು ವಾಣಿಜ್ಯ ಚಟುವಟಿಕೆಗಳು ಹೆಚ್ಚಿರುವ ಕಡೆಗಳಲ್ಲೇ ನಿರ್ಮಿಸಲಾಗಿದೆ. ಇದರಿಂದ ವ್ಯಾಪಾರಿಗಳು, ಗ್ರಾಹಕರಿಗೆ ಅನುಕೂಲ ಆಗುತ್ತದೆ. ಅಷ್ಟೇ ಅಲ್ಲ, ಲಾಸ್ಟ್‌ಮೈಲ್ ಕನೆಕ್ಟಿವಿಟಿ ಕೂಡ ಇದೆ. ಬಹುತೇಕ ಕಡೆಗಳಲ್ಲಿ ಲಭ್ಯವಿರುವ ಜಾಗದಲ್ಲಿ ಶೇ. 60-70ರಷ್ಟೂ ಬಳಕೆ ಆಗುತ್ತಿಲ್ಲ. ಈ ತಾಣಗಳ ಸುತ್ತ “ನೋ ಪಾರ್ಕಿಂಗ್’ ಫಲಕಗಳ ಅಳವಡಿಕೆ ಜತೆಗೆ ಬೆಂಗಳೂರು ಸಂಚಾರ ಪೊಲೀಸರು, ಉದ್ದೇಶಿತ ತಾಣಗಳ ಆಸುಪಾಸು ಬೇಕಾಬಿಟ್ಟಿ ವಾಹನಗಳ ನಿಲುಗಡೆ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಬೇಕು. ನಿಯಮ ಉಲ್ಲಂಘಿಸುವವರಿಗೆ ಭಾರಿ ಪ್ರಮಾಣದ ದಂಡ ವಿಧಿಸಬೇಕು ಎಂದು ಈಚೆಗೆ ನಡೆದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸವಾರರಲ್ಲೂ ಬೇಕಿದೆ ಜಾಗೃತಿ: ಈಗಾಗಲೇ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿರುವ ಮಹಾರಾಜ ಕೆಂಪೇಗೌಡ ಮಲ್ಟಿಲೆವೆಲ್ ಪಾರ್ಕಿಂಗ್ ಸುತ್ತ ಸೈನೇಜ್ ಗಳನ್ನು ಅಳವಡಿಸಲಾಗಿದೆ. ಉಳಿದ ಕಡೆಗಳಲ್ಲೂ ಇದೇ ಮಾದರಿಯಲ್ಲಿ ವಾಹನ ಸವಾರರಿಗೆ ಅನುಕೂಲವಾಗುವಂತೆ ಸಂಕೇತಗಳನ್ನು ಅಳವಡಿಸುವ ಕಾರ್ಯ ನಡೆದಿದೆ. ಶುಲ್ಕ ಪಾವತಿಸಿ, ಪಾರ್ಕಿಂಗ್ ಮಾಡುವ ಸಂಸ್ಕೃತಿ ನಮ್ಮಲ್ಲಿ ಇನ್ನೂ ಬೆಳೆಯದಿರುವುದು ಕೂಡ ಇದಕ್ಕೆ ಕಾರಣ. ಈ ನಿಟ್ಟಿನಲ್ಲಿ ಜನರಲ್ಲೂ ಜಾಗೃತಿಯ ಅವಶ್ಯಕತೆ ಇದೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ (ಮುಖ್ಯ ರಸ್ತೆಗಳು) ಎಸ್. ಸೋಮಶೇಖರ ತಿಳಿಸುತ್ತಾರೆ.
ಬಿಎಂಟಿಸಿ ವ್ಯಾಪ್ತಿಯ ಬಹುತೇಕ ಎಲ್ಲ ಟಿಟಿಎಂಸಿ ಪಾರ್ಕಿಂಗ್ ತಾಣಗಳು ವಾಹನಗಳ ನಿಲುಗಡೆಯಿಂದ ಭರ್ತಿಯಾಗಿವೆ. ಶಾಂತಿನಗರ, ಮೈಸೂರು ರಸ್ತೆಯಂತಹ ಕೆಲವು ಕಡೆಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ವಾಹನಗಳ ಪಾರ್ಕಿಂಗ್ ಆಗುತ್ತಿದೆ. ಯಶವಂತಪುರ ಸೇರಿದಂತೆ ಅಲ್ಲೊಂದು ಇಲ್ಲೊಂದು ಸ್ವಲ್ಪ ಕಡಿಮೆ ಇರುವುದು ಕಾಣಬಹುದು ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ (ವಾಣಿಜ್ಯ) ಶ್ರೀರಾಮ್ ಮುಲ್ಕಾವನ್ ಸ್ಪಷ್ಟಪಡಿಸಿದ್ದಾರೆ.
ಬೇಕಿದೆ ಅಟೋಮೆಟೆಡ್ ಕಾರು ಪಾರ್ಕಿಂಗ್ ವ್ಯವಸ್ಥೆ : ನಗರದಲ್ಲಿ ಅಟೋಮೆಟೆಡ್ ಕಾರು ಪಾರ್ಕಿಂಗ್ ವ್ಯವಸ್ಥೆ ಪರಿಚಯಿಸುವ ಅವಶ್ಯಕತೆ ಇದೆ. ಇದರಿಂದ ಜಾಗದ ಸದ್ಬಳಕೆ ಜತೆಗೆ ಖಾಲಿ ಜಾಗ ಮತ್ತು ವಾಹನ ನಿಲ್ಲಿಸಿದ ಜಾಗದ ಹುಡುಕಾಟದ ಸಮಯ ಉಳಿತಾಯ ಆಗುತ್ತದೆ. ದೆಹಲಿ, ಕೊಲ್ಕತ್ತದಲ್ಲಿ ಈ ರೀತಿಯ ವ್ಯವಸ್ಥೆ ಇದೆ
-ವಿಜಯಕುಮಾರ್ ಚಂದರಗಿ