Advertisement

ಪುತ್ತೂರು: ಪಾರ್ಕಿಂಗ್‌ ಸಂಕಟ 

07:59 PM Sep 02, 2021 | Team Udayavani |

ಪುತ್ತೂರು: ಸಾವಿರಾರು ವಾಹನ ಪ್ರವೇಶಿಸುವ ಪುತ್ತೂರು ನಗರದಲ್ಲಿ ಎರಡು ಪೇ-ಪಾರ್ಕಿಂಗ್‌ ವಾಹನ ನಿಲುಗಡೆ ಸ್ಥಳ ಭಾರ ಹೊರಬೇಕು.

Advertisement

ಜಿಲ್ಲಾ ಕೇಂದ್ರವಾಗುವ ಕನಸಿನಲ್ಲಿರುವ ಪುತ್ತೂರು ನಗರವು ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ಕಿಷ್ಕಿಂಧೆಯಂತಾಗಿದ್ದು ದಿನೇ ದಿನೇ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರ ಸಮಸ್ಯೆಯಲ್ಲಿ ಸಿಲುಕಿದೆ.

ನಿಲುಗಡೆಗೆ ಜಾಗವಿಲ್ಲ:

ದರ್ಬೆ, ಕೆಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸನಿಹ ಪೇ ಪಾರ್ಕಿಂಗ್‌ ಇದ್ದು ಅವೆರೆಡು ಸೇರಿ ಹೆಚ್ಚೆಂದರೆ 100 ವಾಹನ ನಿಲುಗಡೆ ಸಾಮರ್ಥ್ಯವನ್ನಷ್ಟೇ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ನಿರ್ಮಾಣಗೊಂಡ ಬೃಹತ್‌ ಕಟ್ಟಡಗಳ ಮುಂಭಾಗ ಆ ಕಟ್ಟಡಕ್ಕೆ ಬರುವ ಗ್ರಾಹಕರಿಗೆ ಮಾತ್ರ ಪಾರ್ಕಿಂಗ್‌ ಒದಗಿಸುವುದು ಬಿಟ್ಟರೆ ಉಳಿದೆಡೆ ರಸ್ತೆ ಬದಿಯೇ ಆಸರೆ. ಪ್ರತೀ ವರ್ಷ ರಸ್ತೆ ಅಗಲದ ಸಂದರ್ಭ ಇರುವ ಅಲ್ಪ ಪಾರ್ಕಿಂಗ್‌ ಸ್ಥಳಗಳು ಕಣ್ಮರೆಯಾಗುತ್ತಿದ್ದು ಭವಿಷ್ಯದಲ್ಲಿ ನಗರಕ್ಕೆ ವಾಹನ ಸಂಚಾರವೇ ದೊಡ್ಡ ಸವಲಾಗಿ ಪರಿಣಮಿಸಲಿದೆ.

ಗ್ರಾಹಕರಿಗೆ ಸಂಕಷ್ಟ :

Advertisement

ನಗರದ ಶೇ. 60ಕ್ಕೂ ಅಧಿಕ ಅಂಗಡಿ ಮುಂಭಾಗ ಪಾರ್ಕಿಂಗ್‌ ಜಾಗವಿಲ್ಲದೆ ರಸ್ತೆ ಇಕ್ಕಲಗಳಲ್ಲಿ ವಾಹನ ನಿಲ್ಲಿಸಬೇಕಾದ ಅನಿವಾರ್ಯ ಸೃಷ್ಟಿ ಯಾಗಿದೆ. ಗ್ರಾಹಕರು ರಸ್ತೆ ಬದಿ ವಾಹನ ನಿಲ್ಲಿಸಿದರೆ ಸಂಚಾರ ಪೊಲೀಸರು ದಂಡ ವಿಧಿಸುತ್ತಾರೆ. ನಗರಸಭೆ ಪಾರ್ಕಿಂಗ್‌ ಜಾಗ ಕಲ್ಪಿಸದಿರುವುದು ಸಮಸ್ಯೆಯಾಗಿದ್ದರೂ ಅದರ ಪರಿಣಾಮ ಜನರ ಮೇಲಾಗುತ್ತಿದೆ. ಪಾರ್ಕಿಂಗ್‌ ಎಲ್ಲಿ ಮಾಡಬೇಕು ಎಂದು ಗ್ರಾಹಕರು ಸಂಚಾರ ಪೊಲೀಸರನ್ನು ಮರು ಪ್ರಶ್ನಿಸಿದರೆ ಅವರ ಬಳಿಯು ಉತ್ತರವಿಲ್ಲ. ಒಟ್ಟಿನಲ್ಲಿ ಕಟ್ಟಡ, ರಸ್ತೆ ನಿರ್ಮಾಣ ಸಂದರ್ಭ ಪಾರ್ಕಿಂಗ್‌ ಬಗ್ಗೆ ನಿರ್ಲಕ್ಷé ವಹಿಸಿ ಪರ ವಾನಿಗೆ ನೀಡಿರುವುದೆ ಈ ಇಕ್ಕಟ್ಟಿಗೆ ಕಾರಣ.

ನಗರಕ್ಕೆ ನುಗ್ಗುವ ವಾಹನ :

ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಉಪವಿಭಾಗದ ತಾಲೂಕುಗಳ ಪೈಕಿ ಮುಂಚೂಣಿಯಲ್ಲಿರುವ ಪುತ್ತೂರು ನಗರಕ್ಕೆ ಸುಳ್ಯ, ಕಡಬ, ಬಂಟ್ವಾಳ, ಬೆಳ್ತಂಗಡಿ ಭಾಗದಿಂದ ದಿನನಿತ್ಯದ ವ್ಯವಹಾರಕ್ಕೆ ನೂರಾರು ವಾಹನಗಳು ಪ್ರವೇಶಿಸುತ್ತವೆ.

ಬಹಳಷ್ಟು ಜಾಗ ಅಗತ್ಯ :

ದರ್ಬೆಯಿಂದ ಬೊಳುವಾರು ತನಕ ನೂರಾರು ಅಟೋ ರಿಕ್ಷಾಗಳು ಬಾಡಿಗೆ ಮಾಡುತ್ತಿದ್ದು ಅವುಗಳ ನಿಲುಗಡೆಗೆ ಬಹಳಷ್ಟು ಜಾಗದ ಅಗತ್ಯ ಇದೆ. ಮಂಗಳೂರು-ಮಡಿಕೇರಿ ಸಂಪರ್ಕದ ನಡುವೆ ತುರ್ತು ಸಂದರ್ಭದಲ್ಲಿ ಅತಿ ಅಗತ್ಯವಿರುವ ಪಟ್ಟಣ ಪುತ್ತೂರಾಗಿದ್ದು ಮಿನಿ ವಿಧಾನಸಭೆ, ಸಹಾಯಕ ಆಯುಕ್ತ, ಸಬ್‌ ರಿಜಿಸ್ಟ್ರಾರ್‌, ಡಿವೈಎಸ್‌ಪಿ ಕಚೇರಿ, ಕ್ಯಾಂಪ್ಕೋ ಹೀಗೆ ಹತ್ತಾರು ಸೌಲಭ್ಯಗಳಿಗೆ ಪುತ್ತೂರನ್ನೇ ಆಶ್ರಯಿಸಬೇಕಾಗಿರುವ ಕಾರಣ ಇಲ್ಲಿನ ವಾಹನ ದಟ್ಟಣೆ ಹೆಚ್ಚಳಕ್ಕೆ ಕಾರಣವೆನಿಸಿದೆ.

ಪ್ರಸ್ತಾವನೆ ನೆನೆಗುದಿಗೆ :

ನಗರದ ಟ್ರಾಫಿಕ್‌ ದಟ್ಟಣೆ ತಗ್ಗಿಸಲು ಪುತ್ತೂರು ನಗರಸಭೆ ಪೇಟೆಯ ಕೇಂದ್ರದಲ್ಲೇ ಅರಣ್ಯ ಇಲಾಖೆಗೆ ಸೇರಿದ 1.5 ಎಕ್ರೆ ಜಾಗದ ಮೇಲೆ ಕಣ್ಣಿಟ್ಟಿತ್ತು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗವೇ ಇರುವ ಅರಣ್ಯ ಇಲಾಖೆಯ ಕಚೇರಿ ಇರುವ ಜಾಗವದು. ಹಲವಾರು ವರ್ಷಗಳಿಂದ ಈ ಜಾಗ ಅರಣ್ಯ ಇಲಾಖೆಯ ಸುಪರ್ದಿಯಲ್ಲೇ ಇದೆ.

ಪ್ರಯೋಜನ ಆಗಲಿಲ್ಲ :

ಮರಗಳನ್ನು ಉಳಿಸಿಕೊಂಡು, ಉಳಿದ ಜಾಗದಲ್ಲಿ ಪಾರ್ಕಿಂಗ್‌ ಮಾಡಬೇಕು ಎಂದು ನಗರಸಭೆ ಯೋಜನೆ ರೂಪಿಸಿತ್ತು. ಇದಕ್ಕೆ ಅರಣ್ಯ ಇಲಾಖೆ ಗ್ರೀನ್‌ ಸಿಗ್ನಲ್‌ ನೀಡಲಿಲ್ಲ. ಬೆಂಗಳೂರಿನಲ್ಲಿ ಸರಕಾರದ ಹಂತದಲ್ಲಿ ಪ್ರಯತ್ನ ನಡೆಸಿದರೂ ಅದು ಪ್ರಯೋಜನ ಆಗಲಿಲ್ಲ.

ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ನಗರಸಭೆಗೆ ನೀಡುವ ಪ್ರಸ್ತಾವನೆ ನಮ್ಮ ಮುಂದಿಲ್ಲ. ಕಳೆದ ಒಂದು ವರ್ಷದಿಂದ ಆ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಸುಬ್ಬಯ್ಯ ನಾಯ್ಕ, ವಲಯ ಅರಣ್ಯಧಿಕಾರಿ, ಪುತ್ತೂರು

ಪಾರ್ಕಿಂಗ್‌ ಸಮಸ್ಯೆ ಬಗ್ಗೆ ಶೀಘ್ರ ಸಭೆ ಕರೆಯ ಲಾಗುವುದು. ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಅಭಿಪ್ರಾಯ ಸಂಗ್ರಹಿ ಸಲಾಗುವುದು. ಸದ್ಯಕ್ಕೆ ನಗರಾಡಳಿತದ ಮೂಲಕ 2 ಪೇ ಪಾರ್ಕಿಂಗ್‌ ಸೌಲಭ್ಯವಿದೆ. ಮಧು ಎಸ್‌. ಮನೋಹರ್‌,  ಪೌರಾಯುಕ್ತ, ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next