ಉಡುಪಿ: ಮಣಿಪಾಲ- ಪರ್ಕಳ ರಾಷ್ಟ್ರೀಯ ಹೆದ್ದಾರಿಯ ಪರ್ಕಳ ಪೇಟೆಯ ಸಿಂಡಿಕೇಟ್ ಬ್ಯಾಂಕ್ ಬಳಿ ಮಳೆಗೆ ಕೆಸರು ತುಂಬಿ ಸಂಚಾರ ಅಸ್ತವ್ಯಸ್ತವಾದ ಹಿನ್ನೆಲೆಯಲ್ಲಿ ಇದರ ತಾತ್ಕಾಲಿಕ ದುರಸ್ತಿ ಗುರುವಾರದಿಂದ ಆರಂಭಗೊಂಡಿದೆ.
ಹೆದ್ದಾರಿ ಕಾಮಗಾರಿ ವೇಳೆ ಹಳೆ ರಸ್ತೆ ಮೇಲೆ ಮಣ್ಣು ತುಂಬಿ ಎತ್ತರಿಸಲಾಗಿತ್ತು. ಮಳೆಗಾಲ ಮುಗಿಯುವ ತನಕ ಹಳೆ ರಸ್ತೆಯನ್ನು 3-4 ಅಡಿಗಳಷ್ಟು ಎತ್ತರದ ಮಣ್ಣಿನ ರಾಶಿಯನ್ನು ತೆಗೆದು ಸಂಚಾರಕ್ಕೆ ಯೋಗ್ಯವಾಗುವ ರೀತಿಯಲ್ಲಿ ದುರಸ್ತಿಪಡಿಸಲಾಗುತ್ತಿದೆ.
ಪರ್ಕಳ ಹೆದ್ದಾರಿಯಲ್ಲಿ ಮಳೆ ಬಂದಾಗ ಆಗುತ್ತಿರುವ ಸಾರ್ವಜನಿಕ ಸಮಸ್ಯೆ ಬಗ್ಗೆ “ಸುದಿನ’ದಲ್ಲಿ ನಿರಂತರ ಸುದ್ದಿ ಪ್ರಕಟಿಸಲಾಗಿತ್ತು. ಇವೆಲ್ಲದರ ಫಲಶ್ರುತಿ ಯಾಗಿ ಈ ಹಳೆ ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಹೆದ್ದಾರಿ ಇಲಾಖೆ ಮುಂದಾಗಿದ್ದು, ಸಮಸ್ಯೆ ತಕ್ಕಮಟ್ಟಿಗೆ ಸುಧಾರಣೆ ಕಾಣುವ ವಿಶ್ವಾಸವಿದೆ.
ಮುಂದಿನ ದಿನಗಳಲ್ಲಿ ಮಳೆಗಾಲದ ಅವಧಿಯಲ್ಲಿ ಈ ಭಾಗದ ಇನ್ನೂ ಹಲವೆಡೆ ಸಮಸ್ಯೆ ತಲೆದೋರುವ ಸಾಧ್ಯತೆ ಇದ್ದು ಈ ಬಗ್ಗೆಯೂ ಗಮನಹರಿಸಿ ಸಮಸ್ಯೆ ನಿವಾರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಆದರೆ ರಸ್ತೆ ವಿಸ್ತರಣೆ ಕಾಮಗಾರಿ ಮಳೆಗಾಲದ ಮೊದಲು ಮುಗಿಯುವ ಸಾಧ್ಯತೆ ಇಲ್ಲ.