Advertisement

ಪರ್ಕಳ: ಕೊನೆಗೂ 540 ಮೀಟರ್‌ ಹೆದ್ದಾರಿ ಕಾಮಗಾರಿ ಶುರು

05:43 PM Dec 21, 2021 | Team Udayavani |

ಉಡುಪಿ: ಪರ್ಕಳ ರಾಷ್ಟ್ರೀಯ ಹೆದ್ದಾರಿಗೆ (ಎನ್‌ಎಚ್‌169ಎ) ಹಿಡಿದ ಗ್ರಹಣ ಕೊನೆಗೂ ಬಿಡುವ ಹಂತಕ್ಕೆ ತಲುಪಿದೆ. ಸಾರ್ವಜನಿಕ ವಲಯದ ವಿಪರೀತ ಟೀಕೆಗೆ ಮಣಿದ ಹೆದ್ದಾರಿ ಸಚಿವಾಲಯ ಹೈಕೋರ್ಟ್‌ ತಡೆಯಾಜ್ಞೆ ಇರುವ ಪ್ರದೇಶ ಹೊರತುಪಡಿಸಿ ಉಳಿದ ಭಾಗದ 540 ಮೀಟರ್‌ ಹೆದ್ದಾರಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.

Advertisement

ಸೋಮವಾರ ಕೆನರಾಬ್ಯಾಂಕ್‌ ಸಮೀಪದ ತಂಪು ಪಾನಿಯ ಘಟಕ ಮುಂಭಾಗದ ತಿರುವಿನಲ್ಲಿ ಕೆಲಸ ಆರಂಭಿಸಿದೆ. ಜಲ್ಲಿ, ಮಣ್ಣು ಸಹಿತ ಆರಂಭಿಕ ಹಂತದ ಕಾಮಗಾರಿ ಸಾಗುತ್ತಿದೆ. ಯಂತ್ರಗಳು ಸ್ಥಳಕ್ಕಾಗಮಿಸಿದ್ದು, ಕಾರ್ಮಿಕರು ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಪರ್ಕಳ ಹೆದ್ದಾರಿ ಅವ್ಯವಸ್ಥೆಯಿಂದಾಗಿ ಜನ ಸಮಾನ್ಯರು ಬೇಸತ್ತು ಹೋಗಿದ್ದು , ಇಷ್ಟು ದಿನ ಮಳೆಗಾಲದಲ್ಲಿ ಕೆಸರು, ಕೊಚ್ಚೆಯಿಂದ ರಂಪವಾಗಿದ್ದ ಪರ್ಕಳ ಪ್ರಸ್ತುತ ಪ್ರತೀನಿತ್ಯ ದೂಳಿನ ಅಭಿಷೇಕದಿಂದ ಮಿಂದೇಳುತ್ತಿದೆ. ಪರ್ಕಳ ಪೇಟೆ ಕೆನರಾಬ್ಯಾಂಕ್‌ ಎದುರಿನಿಂದ ಕೆಳ ಪರ್ಕಳದ ನಗರಸಭೆ ನೀರಿನ ಟ್ಯಾಂಕ್‌ವರೆಗೂ ವಾಹನ ಸವಾರರು ಜೀವ ಭಯದಿಂದಲೆ ಓಡಾಡುವ ಸನ್ನಿವೇಶ ನಿರ್ಮಾಣಗೊಂಡಿತ್ತು. ಕೆಲದಿನಗಳ ಹಿಂದೆ ನೀರಿನ ಟ್ಯಾಂಕ್‌ ಸಮೀಪದ ರಸ್ತೆಗೆ ತೇಪೆ ಕಾರ್ಯ ಮಾಡಲಾಗಿದೆ. ಕಿತ್ತುಹೋದ ಹಳೆ ರಸ್ತೆ ಕಡಿದಾದ ಮಾರ್ಗದಲ್ಲಿ ವಾಹನ ಚಾಲನೆ ಕಷ್ಟ ಹೇಳತೀರದಾಗಿದ್ದು, ರಸ್ತೆಯೊಳಗಿನ ಗುಂಡಿ, ಜಲ್ಲಿಕಲ್ಲುಗಳು ಅಪಾಯವನ್ನು ಆಹ್ವಾನಿಸುತ್ತಿದ್ದವು. ಸಾಕಷ್ಟು ಭಾರಿ ದ್ವಿಚಕ್ರ ವಾಹನದಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಅರ್ಧಂಬರ್ಧ ಕಾಮಗಾರಿಗೆ ತೆರೆದಿದ್ದ ಕಡಿದಾದ ತಿರುವಿನಲ್ಲಿ ಸಂಚರಿಸಲು ಸವಾರರು ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಘನ ವಾಹನಗಳ ವೇಗದ ಅಬ್ಬರದಲ್ಲಿ ಜೀವ ಕೈನಲ್ಲಿಟ್ಟುಕೊಂಡು ವಾಹನ ಚಾಲನೆ ಮಾಡಬೇಕು ಎಂದು ಸವಾರರು ಬೇಸರ ವ್ಯಕ್ತಪಡಿಸುತ್ತಿದ್ದರು.

ಹೆದ್ದಾರಿ ಪ್ರಾಧಿಕಾರ ಏನು ಹೇಳುತ್ತದೆ ?
ಪರ್ಕಳ ಸ್ಟೇಟ್‌ಬ್ಯಾಂಕ್‌ನಿಂದ ಕೆನರಾ ಬ್ಯಾಂಕ್‌ವರೆಗಿರುವ 540 ಮೀಟರ್‌ ರಸ್ತೆ ಕಾಮಗಾರಿಯನ್ನು ಡಿ.20 ರಿಂದ ಆರಂಭಿಸುತ್ತೇವೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಉಳಿದ (ಕೆನರಾ ಬ್ಯಾಂಕ್‌ನಿಂದ ಕೆಳಪರ್ಕಳ ನೀರಿನ ಟ್ಯಾಂಕ್‌ವರೆಗೂ) 390 ಮೀಟರ್‌ ಕೋರ್ಟ್‌ ತಡೆಯಾಜ್ಞೆ ಇದೆ. ಸದ್ಯ ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ವಿಪರೀತ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ತತ್‌ಕ್ಷಣ ತಡೆಯಾಜ್ಞೆ ಇಲ್ಲದ 540 ಮೀಟರ್‌ ರಸ್ತೆ ಕೆಲಸ ನಡೆಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಹೆದ್ದಾರಿ ಪ್ರಾಧಿಕಾರ ಅಧಿಕೃತ ಮೂಲಗಳು ತಿಳಿಸಿವೆ.

ಪ್ರತೀನಿತ್ಯ ಧೂಳಿನ ಅಭಿಷೇಕ
ಪರ್ಕಳ ಮೇಲ್ಭಾಗದಲ್ಲಿ ಒಂದೊಂದು ಗುಂಡಿಯೂ ಅಪಾಯಕಾರಿಯಾಗಿತ್ತು. ಒಂದೆಡೇ ದೂಳಿನ ರಾಶಿಯಲ್ಲಿ ಇಡೀ ಪರ್ಕಳ ಜನತೆ, ವಾಹನ ಸವಾರರು ತತ್ತರಿಸಿ ಹೋಗಿದ್ದು, ಅಷ್ಟೊಂದು ಪ್ರಮಾಣದ ಧೂಳು ಪರಿಸರವನ್ನು ಆವರಿಸಿಕೊಂಡಿದೆ. ಪರ್ಕಳ ಸುತ್ತಮುತ್ತ ನೂರಾರು ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಉದ್ಯೋಗಸ್ಥರು ಉಡುಪಿ, ಮಣಿಪಾಲ ಕಡೆಗೆ ಓಡಾಟ ನಡೆಸುತ್ತಾರೆ. ಬೆಳಗ್ಗೆ, ಸಾಯಂಕಾಲ ಅವಧಿಯಲ್ಲಿ ಇಲ್ಲಿನ ವಾಹನ ಓಡಾಟ ಹೆಚ್ಚಿರುತ್ತದೆ.

Advertisement

ನಿರ್ದೇಶನ ನೀಡಲಾಗಿದೆ
ಪರ್ಕಳ ಹೆದ್ದಾರಿ ವಿಸ್ತರೀಕರಣ ಕಾಮಗಾರಿ, ಭೂಸ್ವಾಧೀನ ಪ್ರಕ್ರಿಯೆ ಸಂಬಂಧಿಸಿ ಕೋರ್ಟ್‌ ತಡೆಯಾಜ್ಞೆ ಇರುವುದರಿಂದ ವಿಳಂಬವಾಗಿದೆ. ಸಾರ್ವಜನಿಕರಿಗೆ ಸಮಸ್ಯೆಯಾಗದ ರೀತಿಯಲ್ಲಿ ತಡೆಯಾಜ್ಞೆ ಹೊರತುಪಡಿಸಿದ ಉಳಿದ ಭಾಗದ ರಸ್ತೆಯನ್ನು ಪರಿಶೀಲಿಸಿ ಉತ್ತಮಪಡಿಸುವ ಬಗ್ಗೆ ಹೆದ್ದಾರಿ ಇಲಾಖೆ ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಲಾಗಿದೆ.
– ಕೂರ್ಮಾ ರಾವ್‌ ಎಂ. ಜಿಲ್ಲಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next