ಉಡುಪಿ: ಭತ್ತದ ಮೂಟೆ ಹೊತ್ತ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಟೂರಿಸ್ಟ್ ಕಾರಿನ ಮೇಲರಗಿದ ಘಟನೆ ಕೆಳ ಪರ್ಕಳದಲ್ಲಿ ನಡೆದಿದೆ. ಘಟನೆಯಲ್ಲಿ ಒಂದು ಕಾರು ಸಂಪೂರ್ಣ ಜಖಂಗೊಂಡಿದೆ.
ಉಡುಪಿಯಿಂದ ಹೆಬ್ರಿ ಕಡೆಗೆ ಸಂಚರಿಸುತ್ತಿದ್ದ ಲಾರಿ ಕೆಳ ಪರ್ಕದಲ್ಲಿರುವ ನಗರಸಭೆಯ ನೀರಿನ ರೇಚಕದ ಎದುರು ಕಳೆದ ಮಧ್ಯರಾತ್ರಿ ಘಟನೆ ನಡೆದಿದೆ. ಪರಿಣಾಮ ಭತ್ತದ ಮೂಟೆ ಲಾರಿಯಿಂದ ಬೇರ್ಪಟ್ಟು ರಸ್ತೆಯಲ್ಲಿ ಚೆಲ್ಲಾಡಿದೆ.
ಉಡುಪಿಯ ನಿಲ್ದಾಣಕ್ಕೆ ಸೇರಿದ ಒಂದು ಟೂರಿಸ್ಟ್ ಕಾರು, ಸಂತೆಕಟ್ಟೆಯ ನಿಲ್ದಾಣಕ್ಕೆ ಸೇರಿದ ಮತ್ತೊಂದು ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ವಾಹನದಲ್ಲಿರುವರು ಅಪಾಯದಿಂದ ಪಾರಾಗಿದ್ದಾರೆ.
ಈ ಸ್ಥಳದಲ್ಲಿ ಹೊಸ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಹೊಸ ಮಣ್ಣಿನ ರಸ್ತೆಯಲ್ಲಿ ಕಳೆದ 15 ದಿನಗಳಿಂದ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲ. ರಕ್ಷಣಾ ಬ್ಯಾರಿಕೇಡ್ ಗಳನ್ನು ತೆಗೆಯಲಾಗಿದೆ. ಸೂಕ್ತ ಬೆಳಕಿನ ವ್ಯವಸ್ಥೆಯು ಇಲ್ಲ. ವಾಹನ ಚಾಲಕರು ಹಳೆ ರಸ್ತೆಯಲ್ಲಿ ಸಂಚರಿಸುವುದೇ ಹೊಸ ರಸ್ತೆಯಲ್ಲಿ ಸಂಚರಿಸುವುದೇ ಎಂದು ಗೊಂದಲ ಉಂಟು ಮಾಡುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.