Advertisement

ನಾಗಬನವಾಗಿ ಪರಿವರ್ತನೆಗೊಳ್ಳುತ್ತಿದೆೆ ಚಿಣ್ಣರ ಪಾರ್ಕ್‌

03:45 AM Jul 12, 2017 | Team Udayavani |

ಪುತ್ತೂರು: ಮಂಗಳೂರಿನಲ್ಲಿ ಚಿಣ್ಣರ ಪಾರ್ಕ್‌ ಇದೆ. ಮೈಸೂರಿನಲ್ಲೂ ಚಿಣ್ಣರ ಪಾರ್ಕ್‌ ಇದೆ. ಅದರಂತೆಯೇ ಪುತ್ತೂರಿನಲ್ಲೂ ಚಿಣ್ಣರ ಪಾರ್ಕ್‌ ಇದ್ದರೂ ಅದು ನಾಗಬನವಾಗಿ ಪರಿವರ್ತನೆಯಾಗುತ್ತಿದೆ. ನಗರಸಭಾ ವ್ಯಾಪ್ತಿಯ ತಾಲೂಕು ಕಚೇರಿ ರಸ್ತೆಯಲ್ಲಿ ಚಿಣ್ಣರ ಪಾರ್ಕ್‌ ಇದೆ. ಇದರ ನಿರ್ವಹಣೆ ಸಮರ್ಪಕವಾಗಿಲ್ಲ. ಹಾಗಾಗಿ ಯಾರಿಗೂ ಪ್ರಯೋಜನವಾಗುತ್ತಿಲ್ಲ. ಸ್ಥಳೀಯ ಸ್ವಯಂಸೇವಾ ಸಂಸ್ಥೆ 25 ವರ್ಷಗಳ ಹಿಂದೆ ತಮ್ಮ ಸೇವಾ ಯೋಜನೆಯಾಗಿ ಈ ಪಾರ್ಕ್‌ ನಿರ್ಮಿಸಿ ಅಂದಿನ ಪುರಸಭೆಗೆ ಒಪ್ಪಿಸಿದ್ದರು. ಇಲ್ಲಿ ಜೋಕಾಲಿ, ಜಾರುಬಂಡಿ ಸೇರಿದಂತೆ ಮಕ್ಕಳ ಆಟದ ಸಲಕರಣೆಗಳಿದ್ದವು. ಒಂದಷ್ಟು ದಿನ ಮಕ್ಕಳೂ ಬಂದು ಆಡತೊಡಗಿದರು. ಆದರೆ, ನಗರಸಭೆ (ಆಗಿನ ಪುರಸಭೆ) ನಿರ್ವಹಣೆ ಮಾಡುವುದನ್ನು ಮರೆತಿದ್ದರಿಂದ ಕ್ರಮೇಣ ಪಾಳು ಬೀಳತೊಡಗಿತು. ಕ್ರಮೇಣ ಈ ಪಾರ್ಕ್‌ ಅಲೆಮಾರಿಗಳ ಪಾರ್ಕ್‌ ಆಯಿತು. ಈ ಮಧ್ಯೆ ಸೋಮವಾರ ಸಂತೆಯ ದಿನ ಬಾಳೆಕಾಯಿ ವ್ಯಾಪಾರದ ತಾಣವೂ ಆಯಿತು. ವಿಸ್ತರಿತ ಪುತ್ತೂರು ಪುರಸಭೆಯನ್ನು ಸಿಂಗಾ ಪುರ ಮಾಡಲು ಹೊರಟವರು ಈ ಪಾರ್ಕನ್ನು ಉದ್ಯಮವೊಂದಕ್ಕೆ ಹಸ್ತಾಂತರಿಸಿ ಅಭಿವೃದ್ಧಿಪಡಿಸುವ ಕನಸು ಕಂಡರೂ ಈಡೇರಲಿಲ್ಲ.

Advertisement

ಪಾರ್ಕ್‌ ಅಭಿವೃದ್ಧಿ
ಕೆಲವು ವರ್ಷಗಳ ಹಿಂದೆ ಪುರ ಸಭೆಯ ವತಿಯಿಂದ ಈ ಪಾರ್ಕ್‌ 10 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗಿತ್ತು. ಮಕ್ಕಳಿಗೆ ಆಟ ವಾಡಲು ಪುಟ್ಟಗುಹೆ, ಬಯಲು ರಂಗಮಂದಿರ, ವಾಕಿಂಗ್‌ ಪಾತ್‌, ಸಿಮೆಂಟ್‌ ಸೋಫಾಗಳನ್ನು ಅಳವಡಿಸಲಾಗಿತ್ತು. ಬಯಲು ರಂಗಮಂದಿರದಲ್ಲಿ ಒಂದೆರಡು ಕಾರ್ಯಕ್ರಮಗಳೂ ನಡೆದವು. ಒಂದು ಪುಟ್ಟ ಅಂಗಡಿಯನ್ನು ಮಾಡಲಾಗಿದ್ದು, ಇದನ್ನು ವಹಿಸಿಕೊಂಡವರು ಪಾರ್ಕ್‌ನ ನಿರ್ವಹಣೆ ಮಾಡುತ್ತಾರೆಂದು ಪುರಸಭೆ ಹೇಳಿತು. ಆದರೆ ಈಗ ಪುರಸಭೆ ನಗರಸಭೆಯಾಗಿದೆ.

ಮರೆತು ಕುಳಿತ ನಗರಸಭೆ 
ಚಿಣ್ಣರ ಪಾರ್ಕ್‌ ಹಾವುಗಳ ತಾಣವಾಗಿದೆ. ಮಂಡಿಯಷ್ಟು ಉದ್ದಕ್ಕೆ ಹುಲ್ಲು ಬೆಳೆದಿದ್ದು, ಮಕ್ಕಳ ಗುಹೆಯ ಮುಂದೆ ಬಲ್ಲೆ ರಾಶಿ ಬಿದ್ದಿದೆ. ಆದರೂ ನಗರ ಸಭೆ ಮರೆತು ಕುಳಿತಿದೆ ಎಂದು ದೂರುತ್ತಾರೆ ನಾಗರಿಕರು. ಪಾರ್ಕ್‌ನ ನಿಷ್ಪ್ರಯೋಜಕತೆಯನ್ನು ಕಂಡು ಕಳೆದ ವರ್ಷ ಪುತ್ತೂರು ಪತ್ರಕರ್ತರ ಸಂಘ ನಿರ್ವಹಣೆ ಹೊಣೆ ಹೊರಲು ಮುಂದೆ ಬಂದಿತ್ತು. ಈ ಸಂದರ್ಭದಲ್ಲಿ ಕೆಲವು ಸೌಕರ್ಯಗಳನ್ನು ಕಲ್ಪಿಸಲು ಕೇಳಿಕೊಳ್ಳಲಾಗಿತ್ತು. ನಗರಸಭೆಯೂ ಒಪ್ಪಿಕೊಂಡಿತ್ತು. ಆದರೆ ಅನಂತರ ಯಾವುದೇ ಬೆಳವಣಿಗೆ ನಡೆದಿಲ್ಲ.

ಯಾರೂ ಮಾತನಾಡುವುದಿಲ್ಲ
ನಗರಸಭೆಯಲ್ಲಿ ರಾಜಕೀಯ ವಿವಾದಗಳನ್ನು ಎಷ್ಟು ಬೇಕಾದರೂ ಚರ್ಚಿಸಲಾಗುತ್ತದೆ. ಆದರೆ, ನಗರದ ಏಕೈಕ ಚಿಣ್ಣರ ಪಾರ್ಕ್‌ ಅಭಿವೃದ್ಧಿ ಅಥವಾ ನಿರ್ವಹಣೆಯ ಕುರಿತು ಯಾರೂ ಮಾತನಾಡುವುದಿಲ್ಲ. ಅದಕ್ಕೆ ಸಮಯವಿಲ್ಲ ಎಂಬುದು ನಾಗರಿಕರ ಬೇಸರದ ನುಡಿ.

Advertisement

Udayavani is now on Telegram. Click here to join our channel and stay updated with the latest news.

Next