ಮಹಾನಗರ: ನಗರದ ಸೌಂದರ್ಯದ ಜತೆಗೆ ಸಾರ್ವಜನಿಕರಿಗೆ ವಾಯುವಿಹಾರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ “ವಾರ್ಡ್‌ಗೊಂದು ಪಾರ್ಕ್’ ಎಂಬ ವಿನೂತನ ಯೋಜನೆಯ ಅನುಷ್ಠಾನಕ್ಕೆ ಮಂಗಳೂರು ಮಹಾನಗರ ಪಾಲಿಕೆ ಇದೀಗ ಮುಂದಾಗಿದೆ.
ಮೊದಲ ಹಂತದಲ್ಲಿ ನಗರದ ಐದು ವಾರ್ಡ್‌ಗಳಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನಿರ್ಧರಿ ಸಲಾಗಿದೆ. ಪಾಲಿಕೆ ನಿಧಿ, ಸ್ಮಾರ್ಟ್ ಸಿಟಿ ಅಥವಾ ಪಿಪಿಪಿ ಮಾಡೆಲ್‌ನಲ್ಲಿ ಪಾರ್ಕ್ ಅಭಿವೃದ್ಧಿಗೆ ಚಿಂತಿಸಲಾಗುತ್ತಿದೆ. ದೊಡ್ಡಗಾತ್ರದ ಉದ್ಯಾನಗಳು ನಿರ್ಮಿಸಲು ನಗರದಲ್ಲಿ ಜಾಗದ ಕೊರತೆ ಇದೆ. ಹಾಗಾಗಿ ವಾರ್ಡ್ ಮಟ್ಟದಲ್ಲಿ ಸಣ್ಣ ಪ್ರಮಾಣದ ಮಿನಿ ಉದ್ಯಾನ ಅಭಿವೃದ್ಧಿಗೆ ಪಾಲಿಕೆ ತೀರ್ಮಾನಿಸಿದೆ.
ನಗರವು 60 ವಾರ್ಡ್‌ಗಳನ್ನು ಹೊಂದಿದೆ. ಇದರಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸಿ ಸ್ಥಳೀಯವಾಗಿ ದಾನಿಗಳ ನೆರವು ಪಡೆದುಕೊಂಡು ಮಿನಿಪಾರ್ಕ್ ನಿರ್ಮಿಸಿದರೆ ಸ್ಥಳೀಯ ಜನರಿಗೆ ವಿಶ್ರಾಂತಿ, ವ್ಯಾಯಾಮಕ್ಕೆ ಒಂದು ಉದ್ಯಾನವೂ ಲಭಿಸುತ್ತದೆ. ಜತೆಗೆ ವಾರ್ಡ್ ನ ಸೌಂದರ್ಯವೂ ಹೆಚ್ಚುತ್ತದೆ. ಆಯಾ ಭಾಗದ ಕಾರ್ಪೊರೇಟರ್‌ಗಳು, ಸಂಘ-ಸಂಸ್ಥೆಗಳು ಆಸಕ್ತಿ ವಹಿಸಿದರೆ ಇದು ಸದ್ಯದಲ್ಲಿಯೇ ಸಾಕಾರಗೊಳ್ಳಲು ಸಾಧ್ಯವಿದೆ ಎನ್ನುವುದು ಪಾಲಿಕೆಯವರ ನಿರೀಕ್ಷೆಯಾಗಿದೆ.
ನಗರದ ಕೆಲವು ಕಡೆಗಳಲ್ಲಿ ಈಗಾಗಲೇ ಮಿನಿ ಪಾರ್ಕ್ ನಿರ್ಮಾಣವಾಗಿದೆ. ಮುಖ್ಯ ವಾಗಿ ಬಿಜೈಯ ವಿವೇಕಾನಂದ ಮಿನಿ ಪಾರ್ಕ್, ಕರಂಗಲ್ಪಾಡಿ ಆರೈಸ್ ಆವೇಕ್ ಮಿನಿ ಪಾರ್ಕ್ ಪ್ರಮುಖವಾದುದು. ಇಲ್ಲಿ ಪುಟಾಣಿಗಳಿಗೆ ಆಟವಾಡಲು ಒಂದಷ್ಟು ಜಾಗ ಮೀಸಲಿರಿಸಲಾಗಿದೆ. ಜತೆಗೆ ಹಿರಿಯು ನಾಗರಿಕರು ಕುಳಿತುಕೊಳ್ಳಲು ವ್ಯವಸ್ಥೆ ರೂಪಿಸಲಾಗಿದೆ.
ನಗರದಲ್ಲಿ ಇರುವ ಪ್ರಧಾನ ಉದ್ಯಾನವೆಂದರೆ ಕದ್ರಿಪಾರ್ಕ್ ಮಾತ್ರ. ಪಿಲಿಕುಳ ನಿಸರ್ಗಧಾಮ ಉದ್ಯಾನದ ಪ್ರವಾಸಿ ಮತ್ತು ಶೈಕ್ಷಣಿಕ ತಾಣವಾಗಿ ಹೆಚ್ಚು ಗುರುತಿಸಿಕೊಂಡಿದೆ. ಪುರಭವನದ ಮುಂಭಾಗದ ಗಾಂಧಿ ಪಾರ್ಕ್ ಬಳಿ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಕೆಲವು ತಿಂಗಳು ಪಾರ್ಕ್‌ಗೆ ಸಾರ್ವಜನಿಕರು ಆಗಮಿಸುವುದು ಕಷ್ಟಸಾಧ್ಯ. ಬಾವುಟಗುಡ್ಡೆಯ ಟಾಗೋರ್ ಪಾರ್ಕ್, ನೆಹರೂ ಮೈದಾನದ ಬಳಿ ಇರುವ ಕಾರ್ಪೊರೇಶನ್ ಬ್ಯಾಂಕ್ ಪ್ರವರ್ತಿತ ಉದ್ಯಾನ, ಮಣ್ಣಗುಡ್ಡ ಪಾರ್ಕ್, ವೆಲೆನ್ಸಿಯಾ ಸಹಿತ ಕೆಲವು ಕಿರು ಉದ್ಯಾನಗಳಾಗಿವೆ.
ಪಾಳು ಬಿದ್ದ ಪಾರ್ಕ್ ಗಳ ಬಗ್ಗೆ ಗಮನ
ನಗರದಲ್ಲಿ ಈಗಾಗಲೇ ನಿರ್ಮಾಣವಾಗಿರುವ ಕೆಲವೊಂದು ಪಾರ್ಕ್‌ಗಳು ಪಾಳು ಬಿದ್ದಿವೆ. ಅದರಲ್ಲೂ ನಗರದ ಅತೀ ದೊಡ್ಡ ಪಾರ್ಕ್ ಆದ ಕದ್ರಿ ಪಾರ್ಕ್, ಕೋಡಿಕಲ್ ಬಳಿಯ ಪಾರ್ಕ್ ಸಹಿತ ಪ್ರಮುಖ ಪಾರ್ಕ್‌ಗಳು ಮತ್ತಷ್ಟು ಅಭಿವೃದ್ಧಿ ಹೊಂದಬೇಕು. ಈ ಮೂಲಕ ಸಾರ್ವಜನಿಕರನ್ನು ಮತ್ತಷ್ಟು ಸೆಳೆಯಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.
ಮೂಲ ಸೌಕರ್ಯಕ್ಕೆ ಆದ್ಯತೆ
ಸಾರ್ವಜನಿಕರಿಗೆ ವಾಯು ವಿಹಾರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ವಾರ್ಡ್ ಗೊಂದು ಪಾರ್ಕ್ ಎಂಬ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದೇವೆ. ಮೂಲ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೊದಲ ಹಂತದಲ್ಲಿ ಸುಮಾರು ಐದು ವಾರ್ಡ್ ಗಳಲ್ಲಿ ಪಾರ್ಕ್ ನಿರ್ಮಿಸಲಾಗುವುದು. ಈಗಾಗಲೇ ಇರುವ ಪಾರ್ಕ್‌ನ ಮೂಲ ಸೌಕರ್ಯ ಸಹಿತ ಅಭಿವೃದ್ಧಿಯ ಕಡೆಗೂ ಗಮನಹರಿಸಲಾಗುವುದು.
-ದಿವಾಕರ್ ಪಾಂಡೇಶ್ವರ, ಪಾಲಿಕೆ ಮೇಯರ್
ನವೀನ್‌ಭಟ್ ಇಳಂತಿಲ