ಮಂಗಳೂರು: ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ಬಾರಿಗೆ ಹಾಗೂ ರಾಜ್ಯದಲ್ಲಿ ಪ್ರಥಮವಾಗಿ ಪರಿವರ್ತನಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಪುರಭವನದಲ್ಲಿ ರವಿವಾರ ನಡೆದ “ಪರಿವರ್ತನಾ ಮಂಗಳಮುಖೀಯರ ಸೌಂದರ್ಯ ಸ್ಪರ್ಧೆ’ಯಲ್ಲಿ ದಾಂಡೇಲಿಯ ಸಂಜನಾ ಅವರು ಮೊದಲ ಸ್ಥಾನ ಗಳಿಸಿ “ಪರಿವರ್ತನಾ ಟ್ರಾನ್ಸ್ ಕ್ವೀನ್-2018′ ಪಟ್ಟವನ್ನು ಅಲಂಕರಿಸಿದರು.
ಗುಲ್ಬರ್ಗಾದ ಝೋಯಾ ಶೇಖ್ ಪ್ರಥಮ ರನ್ನರ್ ಅಪ್ ಹಾಗೂ ಬಳ್ಳಾರಿಯ ಶ್ರೀನಿಧಿ ದ್ವಿತೀಯ ರನ್ನರ್ ಅಪ್ ಆಗಿ ಆಯ್ಕೆಯಾದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಅಮರನಾಥ ಶೆಟ್ಟಿ ಮಾತನಾಡಿ, ಮಂಗಳಮುಖೀಯರನ್ನು ಮುಖ್ಯವಾಹಿನಿಗೆ ತರುವ ಕೆಲಸದಲ್ಲಿ ವಾಯ್ಲೆಟ್ ಪಿರೇರಾ ಕಾರ್ಯ ಶ್ಲಾಘನೀಯ ಎಂದರು. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
40ಕ್ಕೂ ಅಧಿಕ ಮಂಗಳಮುಖೀಯರು ನೋಂದಾಯಿಸಿದ್ದರು. ಈ ಪೈಕಿ ಆಯ್ದ 11 ಮಂಗಳಮುಖೀಯರಿಗೆ ರ್‍ಯಾಂಪ್ ಮೇಲೆ ಹೆಜ್ಜೆ ಹಾಕುವ ಅವಕಾಶ ಕಲ್ಪಿಸಲಾಗಿತ್ತು. ಸೀರೆ ಹಾಗೂ ಪಾಶ್ಚಾತ್ಯ ಉಡುಗೆ ತೊಟ್ಟ ಮಂಗಳಮುಖೀಯರು ವಯ್ನಾರದ ಹೆಜ್ಜೆ ಹಾಕಿದರು. 2017ರ ಮಿಸ್ ಇಂಡಿಯಾ ಜೋಯ್ಸ ರೇಗೊ, 2018ರ ದಿವಾ ಮಿಸ್ ಇಂಡಿಯಾ ರಿಪ್ಪಲ್ ರೈ, ಸೆನ್ಸಾರ್ ಬೋರ್ಡಿನ ಶ್ರೀನಿವಾಸ್ ಗುರ್ಜಾಲ್ ಮತ್ತು ಉದ್ಯಮಿ ಗೋಯೆಲ್ ತೀರ್ಪುಗಾರರಾಗಿದ್ದರು.
11 ಸ್ಪರ್ಧಿಗಳು
ಮಂಗಳಮುಖೀಯರಾದ ದಾಂಡೇಲಿಯ ಸಂಜನಾ, ಗುಲ್ಬರ್ಗಾದ ಝೋಯಾ ಶೇಖ್, ಮಂಗಳೂರಿನ ಸುಭದ್ರಾ ಪೂಜಾರಿ, ಮೈಸೂರಿನ ಅರುಂಧತಿ, ಬಳ್ಳಾರಿಯ ಶ್ರೀನಿಧಿ, ಮಂಡ್ಯದ ಅರುಂಧತಿ, ಬಳ್ಳಾರಿಯ ಸಂಧ್ಯಾ, ಬೆಂಗಳೂರಿನ ಪ್ರಿಯಾ, ಬಳ್ಳಾರಿಯ ರೇಖಾ, ಶಿವಮೊಗ್ಗದ ಅನು, ಬೆಂಗಳೂರಿನ ಶ್ವೇತಾ ಭಾಗವಹಿಸಿದ್ದರು.