Advertisement

ಅ. 16: ಬ್ರಹ್ಮಾವರದಲ್ಲಿ ಪರಿವರ್ತನಾ ಸಮಾವೇಶ

10:50 AM Oct 14, 2017 | Team Udayavani |

ಉಡುಪಿ: ಕಳೆದ ಒಂದು ವರ್ಷದಲ್ಲಿ ಜಯಪ್ರಕಾಶ್‌ ಹೆಗ್ಡೆ ಸಹಿತ ರಾಜ್ಯಾದ್ಯಂತ ಹಲವು ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅ. 16ರಂದು ಬ್ರಹ್ಮಾವರದಲ್ಲಿ ನಡೆಯುವ ಪರಿವರ್ತನಾ ಸಮಾವೇಶದಲ್ಲಿ ಉಡುಪಿ ಜಿಲ್ಲೆಯ ಸಾವಿರ ಮಂದಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಬ್ರಹ್ಮಾವರದ ಆಶ್ರಯ ಹೊಟೇಲ್‌ ಬಳಿಯ ವ್ಯಾಲೆಂಟೀನ್‌ ಕಾಂಪೌಂಡ್‌ನ‌ಲ್ಲಿ ಅಪರಾಹ್ನ 3 ಗಂಟೆಗೆ ಆರಂಭವಾಗುವ ಸಮಾವೇಶವನ್ನು ಕೇಂದ್ರ ಸಚಿವ ಅನಂತ್‌ ಕುಮಾರ್‌ ಉದ್ಘಾಟಿಸಲಿದ್ದು, ರತ್ನಾಕರ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. 
ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ್‌, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ವಿ. ಸುನಿಲ್‌ ಕುಮಾರ್‌, ಕೋಟ ಶ್ರೀನಿವಾಸ ಪೂಜಾರಿ, ಕ್ಯಾ| ಗಣೇಶ್‌ ಕಾರ್ಣಿಕ್‌, ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ, ಮಾಜಿ ಶಾಸಕರಾದ ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಲಕ್ಷ್ಮೀನಾರಾಯಣ, ನಾಯಕರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದಯ ಕುಮಾರ್‌ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ 4,000ದಿಂದ 5,000 ಮಂದಿ ಪಕ್ಷದ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ರಥಯಾತ್ರೆ: 4,000 ಮಂದಿ ಭಾಗಿ
ನ. 2ರಂದು ಬೆಂಗಳೂರಿನಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಕರ್ನಾಟಕ ನವನಿರ್ಮಾಣ ರಥಯಾತ್ರೆ ಆರಂಭವಾಗಲಿದ್ದು, ಉಡುಪಿಯ 5 ವಿಧಾನಸಭಾ ಕ್ಷೇತ್ರಗಳ 1,059 ಬೂತ್‌ಗಳಿಂದ ತಲಾ ಮೂವರಂತೆ ಸುಮಾರು 4,000 ಮಂದಿ ಭಾಗಿಯಾಗಲಿದ್ದಾರೆ. ಈ ರಥಯಾತ್ರೆಯು ನ. 11 ಹಾಗೂ 12ಕ್ಕೆ ಉಡುಪಿಗೆ ಬರಲಿದೆ.

ಕಾಂಗ್ರೆಸ್‌ ಉಸ್ತುವಾರಿ ಬದಲಿಸಿ
ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ವಿರುದ್ಧ ಬಹುಕೋಟಿ ಸೋಲಾರ್‌ ಹಾಗೂ ಲೈಂಗಿಕ ಹಗರಣ ಆರೋಪವಿದ್ದು, ಕಾಂಗ್ರೆಸ್‌ಗೆ ನೈತಿಕತೆಯಿದ್ದರೆ ತತ್‌ಕ್ಷಣ ಅವರನ್ನು ಕೇರಳಕ್ಕೆ ವಾಪಸ್‌ ಕಳಿಸಲಿ. ರಾಜ್ಯದಲ್ಲಿ ಮುಂದುವರಿದರೆ ಬಿಜೆಪಿ ಅವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಮಟ್ಟಾರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕುಯಿಲಾಡಿ ಸುರೇಶ್‌ ನಾಯಕ್‌, ಪ್ರವೀಣ್‌ ಶೆಟ್ಟಿ ಉಪಸ್ಥಿತರಿದ್ದರು.

ಮೌಡ್ಯ ನಿಷೇಧ: ನಂಬಿಕೆಗೆ ಧಕ್ಕೆ 
ರಾಜ್ಯ ಸರಕಾರ ಮೌಡ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದ್ದು, ಅದು ಇನ್ನಷ್ಟು ಪರಿಷ್ಕೃತಗೊಳ್ಳಬೇಕಿದೆ. ನಮ್ಮ ಕೆಂಡಸೇವೆಯಂತಹ ಆಚರಣೆಗಳನ್ನು ನಿಷೇಧಿಸುವುದು ಸರಿಯಲ್ಲ. ಮುಸ್ಲಿಮರ ಮೊಹರಂ ಹಬ್ಬದ ವೇಳೆಯೂ ಇಂತಹ ಕೆಲವು ಆಚರಣೆಗಳಿದ್ದು, ಅವುಗಳ ಬಗ್ಗೆ ಮೌಡ್ಯ ನಿಷೇಧ ಕಾಯ್ದೆಯಲ್ಲಿ ಯಾವುದೇ ಉಲ್ಲೇಖ ಮಾಡದೆ ಬರೀ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಜಾರಿಗೆ ತರುತ್ತಿರುವುದು ಸರಿಯಲ್ಲ. ಈ ಕಾನೂನು ಪರಂಪರಾಗತ ನಂಬಿಕೆ, ಆಚರಣೆಗೆ ಧಕ್ಕೆ ತರದಿರಲಿ ಎಂದು ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next