Advertisement

ಪರಿವರ್ತನಾ ರಾಲಿಗೆ ಹೆಗ್ಡೆ ಬೆಂಬಲಿಗರ ಪರಿವರ್ತನೆ

04:40 PM Mar 15, 2017 | Harsha Rao |

ಉಡುಪಿ: ಬಿಜೆಪಿ ಸದ್ಯದಲ್ಲಿಯೇ ಉಡುಪಿ ಚಿತ್ತರಂಜನ್‌ ಸರ್ಕಲ್‌ನಲ್ಲಿ ಆಯೋಜಿಸುವ ಪರಿವರ್ತನಾ ರ್ಯಾಲಿಯಲ್ಲಿ ಮಾಜಿ ಸಚಿವ ಕೆ. ಜಯಪ್ರಕಾಶ್‌ ಹೆಗ್ಡೆ ಅವರ ಬೆಂಬಲಿಗರು ಬಿಜೆಪಿ ಸೇರಲಿದ್ದಾರೆ.

Advertisement

ಬಿಜೆಪಿಗೆ ಸೇರಿದ ಬಳಿಕ ಇದೇ ಮೊದಲ ಬಾರಿ ಜಿಲ್ಲಾ ಬಿಜೆಪಿ ಕಚೇರಿಗೆ ಮಂಗಳವಾರ ಭೇಟಿ ನೀಡಿದ ಹೆಗ್ಡೆ ಅವರನ್ನು ಸ್ವಾಗತಿಸುವ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮತ್ತು ಜಯಪ್ರಕಾಶ್‌ ಹೆಗ್ಡೆ ಈ ವಿಷಯ ಪ್ರಕಟಿಸಿದರು. 

ಮಾ. 25ರಂದು ಕಾರ್ಯಕ್ರಮ ನಡೆಸಬೇಕೆಂದು ನಿರ್ಧರಿಸಿದ್ದೇವೆ. ಒಂದೆರಡು ದಿನ ಹಿಂದೆ ಮುಂದೆ ಆಗಬಹುದು. ಈ ರ್ಯಾಲಿಯಲ್ಲಿ ಹಿಂದೆ ಪಕ್ಷದಲ್ಲಿದ್ದವರು, ಮುಂದೆ ಪಕ್ಷಕ್ಕೆ ಬರುವವರು, ಹೆಗ್ಡೆ ಅಭಿಮಾನಿಗಳು ಬಿಜೆಪಿ ಸೇರಲಿದ್ದಾರೆ ಎಂದು ಅಧ್ಯಕ್ಷತೆ ವಹಿಸಿ ಪ್ರಸ್ತಾವನೆಗೈದ ಮಟ್ಟಾರು ತಿಳಿಸಿದರು.

ವಾಸ್ತವ ಹೇಳಿದ ದಿನೇಶ್‌, ಡಿಕೆಶಿ
ನಾನು ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿದ್ದೇನೆ ಎಂದು ಪತ್ರಿಕೆಗಳಲ್ಲಿ ಬಂತು. ನಾನು ಬಿಟ್ಟದ್ದಲ್ಲ, ಅವರೇ ಉಚ್ಚಾಟಿಸಿದ್ದು. ದಿನೇಶ್‌ ಗುಂಡೂರಾಯರೇ “ಕಾಂಗ್ರೆಸ್‌ನಿಂದ ಉಚ್ಚಾಟನೆ ಮಾಡಿದ್ದೆವು’ ಎಂದು ಹೇಳಿದಾಗ “ಅದು ಸರಿ’ ಎಂದು ಹೇಳಿದ್ದೆ. “ಬಿಜೆಪಿಯವರ ಜತೆ ಹೆಗ್ಡೆ ಅವರು ಚರ್ಚೆ ಮಾಡಿದ್ದರು’ ಎಂದು ಡಿಕೆಶಿ ಹೇಳಿದರು. ಇದೂ ಸರಿಯೇ. ಪಕ್ಷ ಸೇರುವಾಗ ಚರ್ಚಿಸುವುದು ಸಹಜ. ಇವರಿಬ್ಬರೂ ವಾಸ್ತವ ಹೇಳಿದರು ಎಂದು ಹೆಗ್ಡೆ ತಿಳಿಸಿದರು.

ಡಾ| ಆಚಾರ್ಯ ಸ್ಮರಣೆ
ಉಡುಪಿ ಜಿಲ್ಲೆ ರಚನೆಯಾಗುವಾಗ ಕೆಲವರು ಸಣ್ಣ ಜಿಲ್ಲೆ ಎಂದು ಆಕ್ಷೇಪಿಸಿದರು. ಆದರೂ ಸಚಿವನಾಗಿದ್ದ ನನ್ನ ಒತ್ತಾಯಕ್ಕೆ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಘೋಷಿಸಿದರು. ಇದರಿಂದ ಅಭಿವೃದ್ಧಿಗೆ ಅನುಕೂಲವಾಗಿದೆ. ಆಗ ಡಾ| ವಿ.ಎಸ್‌. ಆಚಾರ್ಯ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ನಾನು ಶಾಸಕನಾಗಿ ಶಾಲಾ ಎಸ್‌ಡಿಎಂಸಿ ಸಭೆಗೆ ಹೋಗುತ್ತಿದ್ದೆ. ಅಲ್ಲಿಗೆ ಚುನಾವಣೆ ಪ್ರಚಾರಕ್ಕೆ ಡಾ| ಆಚಾರ್ಯ ಬಂದು “ಎಲ್ಲ ಶಾಲೆಗಳ ಎಸ್‌ಡಿಎಂಸಿ ಸಭೆಗೆ ಹೋಗ್ತಿàರಾ’ ಎಂದು ಕೇಳಿದರು. “ಹೌದು’ ಎಂದೆ. ಇದನ್ನು ಕೆಡಿಪಿ ಸಭೆಯಲ್ಲಿ ಅವರು ಪ್ರಸ್ತಾವಿಸಿದ್ದರು  ಎಂದರು.

Advertisement

150 ಸ್ಥಾನ ಗೆಲುವಿನ ಗುರಿ
ಪತ್ರಕರ್ತರಿಗೆ ಅನೇಕ ಪ್ರಶ್ನೆಗಳಿವೆ. ಇದಕ್ಕೆ ಉತ್ತರ ನೀಡುತ್ತೇನೆ. ಇದು ನನ್ನೊಬ್ಬನ ತೀರ್ಮಾನವಲ್ಲ, ಅಭಿಮಾನಿಗಳ ನಿರ್ಧಾರ. ಅವರೂ ಪರಿವರ್ತನಾ ರ್ಯಾಲಿಯಲ್ಲಿ ಸೇರಲಿದ್ದಾರೆ. ನಾವೆಲ್ಲರೂ ಸೇರಿ 2018ರ ಚುನಾವಣೆಯಲ್ಲಿ 150 ಸ್ಥಾನಗಳ ಗೆಲುವಿಗೆ ಕೆಲಸ ಮಾಡಬೇಕು ಎಂದು ಹೆಗ್ಡೆ ಹೇಳಿದರು. 

ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಮಾಜಿ ಶಾಸಕ ಕೆ. ರಘುಪತಿ ಭಟ್‌, ವಿಭಾಗ ಪ್ರಭಾರಿ ಕೆ. ಉದಯಕುಮಾರ ಶೆಟ್ಟಿ, ಕುಂದಾಪುರ ಕ್ಷೇತ್ರಾಧ್ಯಕ್ಷ ಸುರೇಶ ಶೆಟ್ಟಿ ಕಾಡೂರು ಉಪಸ್ಥಿತರಿದ್ದರು. 
ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್‌ ಶೆಟ್ಟಿ ಅವರು ಸ್ವಾಗತಿಸಿ ಯಶಪಾಲ್‌ ಸುವರ್ಣ ಅವರು ವಂದಿಸಿದರು. 

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರೇ…! 
ಜಯಪ್ರಕಾಶ್‌ ಹೆಗ್ಡೆ ಭಾಷಣ ಆರಂಭಿಸುವಾಗ ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುರೇಶ್‌ ಹೆಗ್ಡೆ ಅವರನ್ನು ಉದ್ದೇಶಿಸಿ “ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರೇ’ ಎಂದರು. ಸಭಾಸದರಲ್ಲಿ ನಗು ತೇಲಿಬಂತು. “ಇಂತಹ ಪ್ರಸಂಗ ನಡೆಯುವುದಿದೆ. ಅಭ್ಯಾಸದ ಬಲದಲ್ಲಿ ಹೀಗೆ ಆಗುತ್ತದೆ. ಇದನ್ನು ಸ್ಲಿಪ್‌ ಆಫ್ ಟಂಗ್‌ ಎನ್ನುತ್ತಾರೆ. ಇದನ್ನು ಸರಿಪಡಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ’ ಎಂದು ಹೆಗ್ಡೆ ವಾಸ್ತವದತ್ತ ಬೆಟ್ಟು ಮಾಡಿದರು. 

ಬಿಜೆಪಿಯಲ್ಲಿ ಜಿಲ್ಲಾ ಉದಯದ ಸಚಿವರು
ಉಡುಪಿ ಜಿಲ್ಲೆ ಉದಯವಾಗುವಾಗ ರಮೇಶ್‌ ಜಿಗಜಿಣಗಿ ಕಂದಾಯ ಸಚಿವರಾಗಿದ್ದರೆ, ಜಯಪ್ರಕಾಶ್‌ ಹೆಗ್ಡೆಯವರು ಅವಿಭಜಿತ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಜಿಗಜಿಣಗಿ ಈಗಾಗಲೇ ಬಿಜೆಪಿಯಲ್ಲಿದ್ದರೆ ಹೆಗ್ಡೆ ಅವರು ಬಿಜೆಪಿ ಸೇರಿದ್ದಾರೆ.

– ಮಟ್ಟಾರ್‌ ರತ್ನಾಕರ ಹೆಗ್ಡೆ

ಆಗ ಅಲ್ಲಿ, ಈಗ ಇಲ್ಲಿ
ಮೊನ್ನೆ ಬಿಜೆಪಿ ಸೇರುವಾಗ ಬಚ್ಚೇಗೌಡರು, ಸೋಮಣ್ಣ ಮೊದಲಾದವಧಿರಿದ್ದರು. ನಾನೂ ಅವರೆಲ್ಲ ಒಂದೇ ಕಡೆ ಇದ್ದೆವು ಎಂದು ಹೇಳಿದೆ. ಮಟ್ಟಾರ್‌ ನಮ್ಮೊಂದಿಗೆ ಹಿಂದೆ ಇದ್ದವರು. ರಾಮಕೃಷ್ಣ ಹೆಗಡೆ ಕಾಲದಲ್ಲಿ ಬಿಜೆಪಿ ಬೆಂಬಲದಿಂದ ಸರಕಾರ ರಚನೆಯಾಗಿತ್ತು. ಅನಂತರ ಜನತಾ ಪಕ್ಷ ವಿಭಜನೆಯಾಯಿತು. ನಾವು ಹೊಂದಾಣಿಕೆ ಮಾಡಿಕೊಂಡೇ ಬಂದವರು. 
– ಕೆ. ಜಯಪ್ರಕಾಶ್‌ ಹೆಗ್ಡೆ

Advertisement

Udayavani is now on Telegram. Click here to join our channel and stay updated with the latest news.

Next