Advertisement

Paralympics: ಇಂಗ್ಲಿಷ್‌ ಕಾಲುವೆಯಲ್ಲಿ ಸಾಗಲಿದೆ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌  ಜ್ಯೋತಿ

10:32 PM Aug 24, 2024 | Team Udayavani |

ಪ್ಯಾರಿಸ್‌: ಫ್ರಾನ್ಸ್‌ನ  ಖ್ಯಾತ ಈಜುಪಟು ಲಿಯಾನ್‌ ಮಾರ್ಚಂಡ್‌ ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಜ್ಯೋತಿಯನ್ನು ನಂದಿಸಿದ ಎರಡೇ ವಾರಗಳಲ್ಲಿ ಪ್ಯಾರಿಸ್‌ನಲ್ಲಿ ಮತ್ತೂಂದು ಜ್ಯೋತಿ ಪ್ರಜ್ವಲಿಸಲಿದೆ. ಇದು ಪ್ಯಾರಾಲಿಂಪಿಕ್ಸ್‌ ಜ್ಯೋತಿ!

Advertisement

ಈ ಕ್ರೀಡಾಕೂಟ ಪ್ಯಾರಿಸ್‌ ಆತಿಥ್ಯ ದಲ್ಲೇ ಆ. 28ರಿಂದ ಸೆ. 8ರ ತನಕ ನಡೆಯಲಿದೆ. ಇದರ ಜ್ಯೋತಿಯನ್ನು ಶನಿವಾರ ಲಂಡನ್‌ ಸಮೀಪದ ಬಕಿಂಗ್‌ಹ್ಯಾಮ್‌ಶೈರ್‌ನ ಸ್ಟೋಕ್‌ ಮ್ಯಾಂಡೆವಿಲ್ಲೆಯಲ್ಲಿ ಬೆಳಗಿಸಲಾಯಿತು. ಇದು ಪ್ಯಾರಾಲಿಂಪಿಕ್ಸ್‌ ಜನ್ಮಸ್ಥಳ. ಇಲ್ಲಿಂದ ಈ ಜ್ಯೋತಿ 4 ದಿನಗಳ ಕಾಲ ಇಂಗ್ಲಿಷ್‌ ಕಾಲುವೆ ಮೂಲಕ ಪ್ಯಾರಿಸ್‌ಗೆ ಆಗಮಿಸಲಿದೆ. ಅಟ್ಲಾಂಟಿಕ್‌ ಮಹಾ ಸಾಗರದಿಂದ ಮೆಡಿಟರೇನಿಯನ್‌ ಕಿನಾರೆ, ಪೈರಿನೀಸ್‌-ಆಲ್ಫ್ ಪರ್ವತ ಶ್ರೇಣಿಯನ್ನು ಹಾದು ಬರಲಿದೆ. ಕ್ರೀಡಾಕೂಟದ ಆರಂಭದ ದಿನವಾದ ಬುಧವಾರ ಪ್ಯಾರಾಲಿಂಪಿಕ್ಸ್‌ ಜ್ಯೋತಿ ಪ್ಯಾರಿಸ್‌ ತಲುಪಲಿದೆ.

50 ಕಿ.ಮೀ. ದೂರದ ಇಂಗ್ಲಿಷ್‌ ಕಾಲುವೆಯಲ್ಲಿ, 24 ಮಂದಿ ಬ್ರಿಟಿಷ್‌ ಆ್ಯತ್ಲೀಟ್‌ಗಳ ತಂಡವೊಂದು ಈ ರಿಲೇ ಯಲ್ಲಿ ಪಾಲ್ಗೊಳ್ಳಲಿದೆ. ಅನಂತರ ಇದನ್ನು 24 ಸದಸ್ಯರ ಫ್ರಾನ್ಸ್‌ ಕ್ರೀಡಾಪಟುಗ ಳಿಗೆ ಹಸ್ತಾಂತರಿಸಲಾಗುವುದು. ಫ್ರಾನ್ಸ್‌ ತಲುಪಿದ ಬಳಿಕ ಸಾವಿರದಷ್ಟು ಟಾರ್ಚ್‌ ರಿಲೇ ಸದಸ್ಯರು ಇದನ್ನು ಕೊಂಡೊಯ್ಯಲಿದ್ದಾರೆ.

ಸೈನಿಕರ ಕ್ರೀಡಾಕೂಟ:

ಬಕಿಂಗ್‌ಹ್ಯಾಮ್‌ಶೈರ್‌ನಲ್ಲಿ “ಸ್ಟೋಕ್‌ ಮ್ಯಾಂಡೆವಿಲ್ಲೆ ಗೇಮ್ಸ್‌’ ಹೆಸರಿನ ಕ್ರೀಡಾಕೂಟ 1948ರಲ್ಲಿ ಮೊದಲ ಸಲ ನಡೆದಿತ್ತು. ದ್ವಿತೀಯ ವಿಶ್ವಯುದ್ಧದಲ್ಲಿ ಅಂಗವೈಕಲ್ಯಕ್ಕೊಳಗಾದ ಕೆಲವು ಮಂದಿ ಸೈನಿಕರು ವೀಲ್‌ಚೇರ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

Advertisement

ಈ ಕ್ರೀಡಾಕೂಟದ ಕಲ್ಪನೆಯ ಹಿಂದಿ ರುವ ವ್ಯಕ್ತಿ ಲುಡ್ವಿಂಗ್‌ ಗಟ್‌ಮ್ಯಾನ್‌. ಯಹೂದಿ ಶಸ್ತ್ರಚಿಕಿತ್ಸಕರಾಗಿದ್ದ ಇವರು ಜರ್ಮನಿಯ ನಾಝಿ ಶಿಬಿರದಿಂದ ಪಲಾಯನಗೈದು, ಸ್ಟೋಕ್‌ ಮ್ಯಾಂಡೆವಿಲ್ಲೆ ಆಸ್ಪತ್ರೆಯಲ್ಲಿ ಕೆಲಸ ಮಾಡಿದರು.

ಬಳಿಕ ಈ ಕ್ರೀಡಾಕೂಟ ಪ್ಯಾರಾಲಿಂಪಿಕ್ಸ್‌ ಗೇಮ್ಸ್‌ ಎಂದು ಕರೆಯಲ್ಪಟ್ಟಿತು. 1960ರಲ್ಲಿ ಮೊದಲ ಸಲ ರೋಮ್‌ನಲ್ಲಿ ನಡೆಯಿತು. 2012ರ ಲಂಡನ್‌ ಪ್ಯಾರಾಲಿಂಪಿಕ್ಸ್‌ ವೇಳೆ ಸ್ಟೋಕ್‌ ಮ್ಯಾಂಡೆವಿಲ್ಲೆಯಲ್ಲಿ ಮೊದಲ ಸಲ ಕ್ರೀಡಾಜ್ಯೋತಿಯನ್ನು ಬೆಳಗಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next