Advertisement

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

01:34 AM Jul 27, 2024 | Team Udayavani |

ಪ್ಯಾರಿಸ್‌: ಕಳೆದ ಶತ ಮಾನದ ಒಲಿಂಪಿಕ್ಸ್‌ ಹಾಕಿಯಲ್ಲಿ ಬಂಗಾರದ ಹಾರ ಧರಿಸಿ ಮೆರೆದಾಡು ತ್ತಿದ್ದ ಭಾರತ, 1980ರ ಬಳಿಕ ಮಂಕಾ ಗುತ್ತ ಬಂದಿರುವುದು ಇತಿಹಾಸ. ಟೋಕಿಯೋದಲ್ಲಿ ಒಂದು ಹಂತದ ಬರಗಾಲವೇನೋ ನೀಗಿದೆ. ಅಲ್ಲಿ ಗೆದ್ದದ್ದು ಕಂಚು. ಪ್ಯಾರಿಸ್‌ನಲ್ಲಿ ಇನ್ನಷ್ಟು ಹೊಳಪಿನ ಪದಕವೊಂದರಿಂದ ಅಲಂಕೃತಗೊಳ್ಳಬೇಕಿದೆ. ಶನಿವಾರದ ಲೀಗ್‌ ಸ್ಪರ್ಧೆಯಲ್ಲಿ ನ್ಯೂಜಿಲ್ಯಾಂಡನ್ನು ಎದುರಿಸುವ ಮೂಲಕ ಭಾರತ ಪ್ಯಾರಿಸ್‌ ಹಾಕಿ ಅಭಿಯಾನ ಆರಂಭಿಸಲಿದೆ.

Advertisement

8 ಚಿನ್ನದ ಪದಕಗಳು ಆಧುನಿಕ ಭಾರತ ತಂಡಕ್ಕೆ ಪ್ರತೀ ಒಲಿಂಪಿಕ್ಸ್‌ ನಲ್ಲೂ ಸ್ಫೂರ್ತಿ ಆಗಬೇಕಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಧ್ಯಾನ್‌ಚಂದ್‌ ಜಮಾನಾ ಕೇವಲ ನೆನಪು ಮಾತ್ರವಾಗಿ ಉಳಿದಿದೆ. ಪ್ಯಾರಿಸ್‌ನಲ್ಲಿ ಏನೋ… ಕಾದು ನೋಡಬೇಕು.

ಆರಂಭದಲ್ಲಿ ಸುಲಭ ಸವಾಲು
ಭಾರತದ ಬಣದಲ್ಲಿ ಹಾಲಿ ಚಾಂಪಿಯನ್‌ ಬೆಲ್ಜಿಯಂ, ಬಲಿಷ್ಠ ಆಸ್ಟ್ರೇಲಿಯ, ಆರ್ಜೆಂಟೀನ, ನ್ಯೂಜಿ ಲ್ಯಾಂಡ್‌ ಮತ್ತು ಐರ್ಲೆಂಡ್‌ ತಂಡ ಗಳಿವೆ. ಇನ್ನೊಂದು ವಿಭಾಗದಲ್ಲಿ ನೆದರ್ಲೆಂಡ್ಸ್‌, ಜರ್ಮನಿ, ಗ್ರೇಟ್‌ ಬ್ರಿಟನ್‌, ಸ್ಪೇನ್‌, ದಕ್ಷಿಣ ಆಫ್ರಿಕಾ ಮತ್ತು ಫ್ರಾನ್ಸ್‌ ತಂಡಗಳಿವೆ.

ಪ್ರತಿಯೊಂದು ಗುಂಪಿನ ಅಗ್ರ 4 ತಂಡಗಳು ಕ್ವಾರ್ಟರ್‌ ಫೈನಲ್‌ ತಲುಪಲಿವೆ. ಭಾರತಕ್ಕೆ ಆರಂಭದಲ್ಲೇ ಸುಲಭ ಸವಾಲು ಎದುರಾಗಿದೆ. ಶನಿವಾರ ನ್ಯೂಜಿಲ್ಯಾಂಡ್‌ ವಿರುದ್ಧ, ಬಳಿಕ ಆರ್ಜೆಂಟೀನ (ಜು. 29) ಮತ್ತು ಐರ್ಲೆಂಡ್‌ (ಜು. 30) ವಿರುದ್ಧ ಆಡಲಿದೆ. ಈ 3 ಪಂದ್ಯಗಳಲ್ಲಿ ಭಾರತ ಗರಿಷ್ಠ ಅಂಕ ಕಲೆಹಾಕಬೇಕಿದೆ. ಇದರಿಂದ ಬೆಲ್ಜಿಯಂ (ಆ. 1) ಮತ್ತು ಆಸ್ಟ್ರೇಲಿಯವನ್ನು (ಆ. 2) ಎದುರಿಸುವಾಗ ಸಹಜವಾಗಿಯೇ ಒತ್ತಡ ಕಡಿಮೆ ಆಗಲಿದೆ ಎಂಬುದೊಂದು ಲೆಕ್ಕಾಚಾರ.

“ನಾವು ಅತ್ಯುತ್ತಮ ಪೂಲ್‌ನಲ್ಲಿದ್ದೇವೆ. ಮೊದಲ 3 ಪಂದ್ಯಗಳು ಅತ್ಯಂತ ನಿರ್ಣಾಯಕ…’ ಎಂಬುದಾಗಿ ಕೋಚ್‌ ಕ್ರೆಗ್‌ ಫ‌ುಲ್ಟನ್‌ ಹೇಳಿದ್ದಾರೆ.

Advertisement

ಹರ್ಮನ್‌ಪ್ರೀತ್‌ ಸಿಂಗ್‌ ನೇತೃತ್ವದ ಹಾಕಿ ತಂಡದಲ್ಲಿ 11 ಮಂದಿ ಟೋಕಿಯೋದಲ್ಲಿ ಆಡಿದವರೇ. ಜರ್ಮನ್‌ಪ್ರೀತ್‌ ಸಿಂಗ್‌, ಸುಖಜೀತ್‌ ಸಿಂಗ್‌, ಅಭಿಷೇಕ್‌, ರಾಜ್‌ಕುಮಾರ್‌ ಪಾಲ್‌ ಮತ್ತು ಸಂಜಯ್‌ ಅವರಿಗೆ ಇದು ಮೊದಲ ಒಲಿಂಪಿಕ್ಸ್‌. ಪಿ.ಆರ್‌. ಶ್ರೀಜೇಶ್‌, ಮನ್‌ಪ್ರೀತ್‌ ಸಿಂಗ್‌ 4ನೇ ಒಲಿಂಪಿಕ್ಸ್‌ ಕಾಣುತ್ತಿದ್ದಾರೆ. ಇವರಿಗೆ ಸ್ಮರಣೀಯ ವಿದಾಯ ಕೋರಬೇಕಿದೆ.

ಶೂಟಿಂಗ್‌: ದೊಡ್ಡ ತಂಡದಿಂದ ಒಲಿಯಬೇಕಿದೆ ದೊಡ್ಡ ಪದಕ
ಒಂದು ಬಂಗಾರ ಸೇರಿದಂತೆ ಒಲಿಂಪಿಕ್ಸ್‌ ಶೂಟಿಂಗ್‌ನಲ್ಲಿ 4 ಪದಕ ಗೆದ್ದಿರುವ ಭಾರತ, ಕಳೆದೆರಡು ಕೂಟಗಳಲ್ಲಿ ಪದಕಕ್ಕೆ ಗುರಿ ಇಡುವಲ್ಲಿ ವಿಫ‌ಲವಾಗಿತ್ತು. ಈ ಬಾರಿ 21 ಸದಸ್ಯರ ಬೃಹತ್‌ ತಂಡವನ್ನು ಕಟ್ಟಿಕೊಂಡು ಪ್ಯಾರಿಸ್‌ಗೆ ಆಗಮಿಸಿದೆ. ಇವರಲ್ಲಿ ಬಹುತೇಕರಿಗೆ ಇದು ಮೊದಲ ಒಲಿಂಪಿಕ್ಸ್‌. ಶನಿವಾರದಿಂದ ಸ್ಪರ್ಧೆ ಆರಂಭಗೊಳ್ಳಲಿದೆ.
ಮನು ಬಾಕರ್‌, ಐಶ್ವರಿ ಪ್ರತಾಪ್‌ ಸಿಂಗ್‌ ತೋಮರ್‌, ಅಂಜುಮ್‌ ಮೌದ್ಗಿಲ್‌, ಇಳವೆನಿಲ್‌ ವಲರಿವನ್‌ ಅವರಂಥ ಅನುಭವಿಗಳು ತಂಡದಲ್ಲಿದ್ದಾರೆ. ಟೋಕಿಯೊ ಅರ್ಹತಾ ಸುತ್ತಿನ ವೇಳೆ ಪಿಸ್ತೂಲ್‌ ಕೈಕೊಟ್ಟದ್ದು ಮನುಗೆ ಹಿನ್ನಡೆಯಾಗಿ ಪರಿಣಮಿಸಿತ್ತು. ಪ್ಯಾರಿಸ್‌ನಲ್ಲಿ ಇವರಿಂದ ಪದಕ ನಿರೀಕ್ಷಿಸಲಾಗಿದೆ.

ಶಿಫ್¤ ಕೌರ್‌ ಸಾಮ್ರ ಮೇಲೆ ಭಾರತ ಹೆಚ್ಚಿನ ನಿರೀಕ್ಷೆ ಇರಿಸಿದೆ. ಇವರು ಏಷ್ಯಾಡ್‌ 50 ಮೀ. ರೈಫ‌ಲ್‌ 3 ಪೊಸಿಶನ್‌ನಲ್ಲಿ ಚಿನ್ನ ಗೆದ್ದಿದ್ದರು.

ಪುರುಷರ ವಿಭಾಗದಲ್ಲಿ ಈ ಮೊದಲು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದವರೆಂದರೆ ತೋಮರ್‌ ಮಾತ್ರ. 2023ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರ ವಿಜೇತ ತಂಡದ ಸದಸ್ಯರಾಗಿದ್ದರು.

ಭಾರತಕ್ಕೆ ಚೀನದಿಂದ ಬಲವಾದ ಸ್ಪರ್ಧೆ ಎದುರಾಗುವ ಸಾಧ್ಯತೆ ಇದೆ. ಚೀನ ಕೂಡ 21 ಶೂಟರ್‌ಗಳನ್ನು ಕಳುಹಿಸಿದೆ. 2012ರ ಒಲಿಂಪಿಕ್ಸ್‌ ಶೂಟಿಂಗ್‌ನಲ್ಲಿ ಕಂಚು ಜಯಿಸಿದ್ದ ಗಗನ್‌ ನಾರಂಗ್‌ ಭಾರತ ತಂಡದ ಚೆಫ್ ಡಿ ಮಿಷನ್‌ ಆಗಿರುವುದು ಶೂಟರ್‌ಗಳ ಪಾಲಿಗೊಂದು ವರವೇ ಸರಿ.

ಟೆನಿಸ್‌ ; ಯಶಸ್ವಿಯಾದೀತೇ ಬೋಪಣ್ಣ-ಬಾಲಾಜಿ ಆಟ?
ರೋಹನ್‌ ಬೋಪಣ್ಣ ಮತ್ತು ಶ್ರೀರಾಮ್‌ ಬಾಲಾಜಿ ಒಲಿಂಪಿಕ್ಸ್‌ ಟೆನಿಸ್‌ ಡಬಲ್ಸ್‌ನಲ್ಲಿ ಭಾರತದ ಪದಕದ ಬರಗಾಲ ನೀಗಿಸುವ ದೊಡ್ಡ ಹೊಣೆಗಾರಿಕೆಯೊಂದಿಗೆ ಶನಿವಾರ ಒಲಿಂಪಿಕ್ಸ್‌ ಕಣಕ್ಕೆ ಇಳಿಯಲಿದ್ದಾರೆ.
44 ವರ್ಷದ ರೋಹನ್‌ ಬೋಪಣ್ಣ ಭಾರತದ ಆ್ಯತ್ಲೀಟ್‌ಗಳಲ್ಲೇ ಹಿರಿಯವರಾಗಿದ್ದು, ಕೊನೆಯ ಸಲ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ಡಬಲ್ಸ್‌ನಲ್ಲಿ ಇವರು ಬಲಿಷ್ಠ ಜತೆಗಾರನನ್ನು ಹೊಂದಿಲ್ಲ. ಎನ್‌. ಶ್ರೀರಾಮ್‌ ಬಾಲಾಜಿ ಎಷ್ಟರ ಮಟ್ಟಿಗೆ ಹೊಂದಿಕೊಂಡು ಹೋದಾರು ಎಂಬ ಪ್ರಶ್ನೆ ಇದ್ದೇ ಇದೆ.

ಒಂದೇ ಟೆನಿಸ್‌ ಪದಕ
ಒಲಿಂಪಿಕ್ಸ್‌ ಟೆನಿಸ್‌ನಲ್ಲಿ ಭಾರತ ಈವರೆಗೆ ಜಯಿಸಿದ್ದು ಒಂದು ಪದಕ ಮಾತ್ರ. 1996ರ ಅಟ್ಲಾಂಟಾ ಗೇಮ್ಸ್‌ನಲ್ಲಿ ಲಿಯಾಂಡರ್‌ ಪೇಸ್‌ ಕಂಚು ಗೆದ್ದಿದ್ದರು. ಅನಂತರ 2004 ಹಾಗೂ 2008ರಲ್ಲಿ ಲಿಯಾಂಡರ್‌ ಪೇಸ್‌-ಮಹೇಶ್‌ ಭೂಪತಿ ಜತೆಗೂಡಿ ಆಡಿದಾಗಲೂ ಪದಕ ಒಲಿಯಲಿಲ್ಲ. 2012ರಲ್ಲಿ ಬೋಪಣ್ಣ-ಭೂಪತಿ ಜತೆಗೂಡಿದರು. ಪದಕ ಮತ್ತೆ ಮರೀಚಿಕೆಯಾಯಿತು. 2016ರ ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ-ಸಾನಿಯಾ ಮಿರ್ಜಾ ಜೋಡಿಗೂ ಪದಕ ಗೆಲ್ಲಲಾಗಲಿಲ್ಲ. ಇದನ್ನೆಲ್ಲ ಅವಲೋಕಿಸುವಾಗ ಬೋಪಣ್ಣ-ಬಾಲಾಜಿ ಮ್ಯಾಜಿಕ್‌ ಮಾಡಿಯಾರೆಂಬ ನಿರೀಕ್ಷೆ ಇರಿಸಿಕೊಳ್ಳುವಂತಿಲ್ಲ. ಆದರೆ ಆಶಾವಾದಿಗಳಾಗಿರುವುದು ತಪ್ಪಲ್ಲ. ಮೊದಲ ಸುತ್ತಿನಲ್ಲಿ ಬೋಪಣ್ಣ-ಬಾಲಾಜಿ ಆತಿಥೇಯ ನಾಡಿನ ಎಡ್ವರ್ಡ್‌ ರೋಜರ್‌ ವಸೆಲಿನ್‌-ಫ್ಯಾಬೀನ್‌ ರೀಬೌಲ್‌ ವಿರುದ್ಧ ಆಡಲಿದ್ದಾರೆ.

ಬಾಕ್ಸಿಂಗ್‌;ನಿಖತ್‌, ಲವ್ಲಿನಾ ಸವಾಲು ಕಠಿನ
ಪ್ಯಾರಿಸ್‌ ಒಲಿಂಪಿಕ್ಸ್‌ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಭಾರೀ ನಿರೀಕ್ಷೆ ಮೂಡಿಸಿದವರೆಂದರೆ ನಿಖತ್‌ ಜರೀನ್‌ ಮತ್ತು ಲವ್ಲಿನಾ ಬೊರ್ಗೊಹೇನ್‌. ಆದರೆ ಇವರಿಗೆ ಕಠಿನ ಡ್ರಾ ಎದುರಾಗಿದೆ.

ಎರಡು ಬಾರಿಯ ಹಾಲಿ ವಿಶ್ವ ಚಾಂಪಿಯನ್‌ ನಿಖತ್‌ ಜರೀನ್‌ ಲೈಟ್‌ ಫ್ಲೈಟ್‌ವೇಟ್‌ (50 ಕೆಜಿ) ವಿಭಾಗದಲ್ಲಿ ಸ್ಪರ್ಧಿಸಲಿದ್ದು, ಚೀನದ ವು ಯು, ಥಾಯ್ಲೆಂಡ್‌ನ‌ ಚುತಾಮತ್‌ ರಕ್ಸತ್‌, ಉಜ್ಬೆಕಿಸ್ಥಾನದ ಸಬೀನಾ ಬೊಬೊಕುಲೋವ್‌ ಅವರನ್ನು ಎದುರಿಸಬೇಕಿದೆ. ರವಿವಾರ ಜರ್ಮನಿಯ ಮ್ಯಾಕ್ಸಿ ಕ್ಲೋಜರ್‌ ವಿರುದ್ಧ ಮೊದಲ ಸುತ್ತಿನ ಸ್ಪರ್ಧೆಗೆ ಇಳಿಯಲಿದ್ದಾರೆ.

ಕಳೆದ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಲವ್ಲಿನಾ ಬೊರ್ಗೊಹೇನ್‌ ನಾರ್ವೆಯ ಸನ್ನಿವಾ ಹಾಫ್ಸ್ಟಾಡ್‌ ವಿರುದ್ಧ ಮೊದಲ ಸುತ್ತಿನ ಸ್ಪರ್ಧೆಗೆ ಇಳಿಯಲಿದ್ದಾರೆ. ಶನಿವಾರ ಅದೃಷ್ಟ ಪರೀಕ್ಷೆಗೆ ಇಳಿಯುವವರು ಪ್ರೀತಿ ಪವಾರ್‌ ಮಾತ್ರ (54 ಕೆಜಿ).

ಬ್ಯಾಡ್ಮಿಂಟನ್‌ ; ಚಿರಾಗ್‌-ಸಾತ್ವಿಕ್‌ ಫೇವರಿಟ್‌
ಸಿಂಧುಗೆ ಒಲಿದೀತೇ ಹ್ಯಾಟ್ರಿಕ್‌ ಪದಕ?

ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಎರಡು ನಿರೀಕ್ಷೆ ಇದೆ. ಪಿ.ವಿ. ಸಿಂಧು ಹ್ಯಾಟ್ರಿಕ್‌ ಪದಕ ಗೆಲ್ಲಬಹುದೇ, ಚಿರಾಗ್‌ ಶೆಟ್ಟಿ- ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ದೊಡ್ಡ ಪದಕವೊಂದನ್ನು ತಮ್ಮದಾಗಿಸಿ ಕೊಳ್ಳಬಹುದೇ ಎಂಬುದು. ಶನಿವಾರ ಇವರೆಲ್ಲರ ಸ್ಪರ್ಧೆ ಆರಂಭವಾಗಲಿದೆ.

2016ರಲ್ಲಿ ಬೆಳ್ಳಿ, 2020ರಲ್ಲಿ ಕಂಚು ಜಯಿಸಿದ್ದ ಸಿಂಧು ಮುಂದಿನ ಸವಾಲು ಸುಲಭದ್ದಲ್ಲ. ಇದಕ್ಕಿಂತ ಮಿಗಿಲಾಗಿ ಅವರ ಫಾರ್ಮ್ ನಿರೀಕ್ಷಿತ ಮಟ್ಟದಲ್ಲಿಲ್ಲ. ಗಾಯದ ಸಮಸ್ಯೆಯಿಂದಲೂ ಸಂಕಟ ಅನುಭವಿಸಿದ್ದಾರೆ. ಫೆಬ್ರವರಿಯಲ್ಲಷ್ಟೇ ಸ್ಪರ್ಧಾತ್ಮಕ ಆಟಕ್ಕೆ ಮರಳಿದ್ದರು. ಆ್ಯನ್‌ ಸೆ ಯಂಗ್‌, ಚೆನ್‌ ಯು ಫಿ, ತೈ ಜು ಯಿಂಗ್‌, ಕ್ಯಾರೋಲಿನಾ ಮರಿನ್‌ ಮೊದಲಾದವರ ಕಠಿನ ಸವಾಲನ್ನು ಸಿಂಧು ಎದುರಿಸಬೇಕಿದೆ.

ಆದರೆ ಪುರುಷರ ಡಬಲ್ಸ್‌ನಲ್ಲಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ಮೇಲೆ ಬಂಗಾರವನ್ನೇ ನಿರೀಕ್ಷಿಸಲಾಗಿದೆ. ಇವರು ಥಾಮಸ್‌ ಕಪ್‌ ಚಿನ್ನ, ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನ, ವಿಶ್ವ ಚಾಂಪಿಯನ್‌ಶಿಪ್‌ ಕಂಚು, ಏಷ್ಯಾಡ್‌ ಮತ್ತು ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಜತೆಗೆ ವಿಶ್ವದ ನಂ.1 ಜೋಡಿಯಾಗಿಯೂ ಮೂಡಿಬಂದಿದ್ದಾರೆ. ಪ್ಯಾರಿಸ್‌ನಲ್ಲಿ ಇವರಿಗೆ 3ನೇ ಶ್ರೇಯಾಂಕ ಲಭಿಸಿದ್ದು, “ಸಿ’ ವಿಭಾಗದಲ್ಲಿದ್ದಾರೆ. ಈ ಗ್ರೂಪ್‌ನ ಎಲ್ಲ ಜೋಡಿಗಳ ವಿರುದ್ಧವೂ ಗೆಲುವಿನ ಸಾಧನೆಗೈದಿದ್ದಾರೆ. ಹೀಗಾಗಿ ಗುಂಪಿನ ಅಗ್ರಸ್ಥಾನಕ್ಕೇನೂ ಅಡ್ಡಿಯಿಲ್ಲ.
ಹಾಗೆಯೇ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌, ಪ್ರಣಯ್‌ ಕೂಡ ಪದಕ ಗೆಲ್ಲುವ ನೆಚ್ಚಿನ ಶಟ್ಲರ್‌ಗಳಾಗಿದ್ದಾರೆ. ವನಿತಾ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ-ತನಿಷಾ ಕ್ರಾಸ್ಟೊ ಮೇಲೆ ವಿಶೇಷ ನಿರೀಕ್ಷೆಯೇನಿಲ್ಲ.

ಒಲಿಂಪಿಕ್ಸ್‌ ನಲ್ಲಿ ಭಾರತ: ಶನಿವಾರದ ಸ್ಪರ್ಧೆ
· ಬ್ಯಾಡ್ಮಿಂಟನ್‌
ಪುರುಷರ ಸಿಂಗಲ್ಸ್‌: ಎಚ್‌.ಎಸ್‌. ಪ್ರಣಯ್‌, ಲಕ್ಷ್ಯ ಸೇನ್‌.
ವನಿತಾ ಸಿಂಗಲ್ಸ್‌: ಪಿ.ವಿ. ಸಿಂಧು.
ಪುರುಷರ ಡಬಲ್ಸ್‌: ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ.
ವನಿತಾ ಡಬಲ್ಸ್‌: ತನಿಷಾ ಕ್ರಾಸ್ಟೊ-ಅಶ್ವಿ‌ನಿ ಪೊನ್ನಪ್ಪ.
ಸಮಯ: ಅಪರಾಹ್ನ 12.30
· ರೋಯಿಂಗ್‌
ಪುರುಷರ ಸಿಂಗಲ್‌ ಸ್ಕಲ್ಸ್‌ ಹೀಟ್ಸ್‌: ಬಲರಾಜ್‌ ಪನ್ವರ್‌
ಸಮಯ: ಅಪರಾಹ್ನ 12.30
· ಶೂಟಿಂಗ್‌
10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದ ಅರ್ಹತಾ ಸುತ್ತು
ಸಂದೀಪ್‌ ಸಿಂಗ್‌, ಅರ್ಜುತ್‌ ಬಬುಟ, ಇಳವೆನಿಲ್‌ ವಲರಿವನ್‌, ರಮಿತಾ ಜಿಂದಾಲ್‌.
ಸಮಯ: ಅಪರಾಹ್ನ 12.30
10 ಮೀ. ಏರ್‌ ಪಿಸ್ತೂಲ್‌ ಅರ್ಹತಾ ಸುತ್ತು
ಪುರುಷರ ವಿಭಾಗ: ಸರಬೊjàತ್‌ ಸಿಂಗ್‌, ಅರ್ಜುನ್‌ ಚೀಮ.
ಸಮಯ: ಅಪರಾಹ್ನ 2.00
10 ಮೀ. ಏರ್‌ ರೈಫ‌ಲ್‌ ಮಿಶ್ರ ತಂಡ ವಿಭಾಗ, ಪದಕ ಸುತ್ತು
ಸಮಯ: ಅಪರಾಹ್ನ 2.00
10 ಮೀ. ಏರ್‌ ರೈಫ‌ಲ್‌ ವನಿತಾ ಅರ್ಹತಾ ಸುತ್ತು
ರಿದಂ ಸಂಗ್ವಾನ್‌, ಮನು ಬಾಕರ್‌.
ಸಮಯ: ಸಂಜೆ 4.00
· ಟೆನಿಸ್‌
ಪುರುಷರ ಸಿಂಗಲ್ಸ್‌: ಸುಮಿತ್‌ ನಾಗಲ್‌.
ಪುರುಷರ ಡಬಲ್ಸ್‌: ರೋಹನ್‌ ಬೋಪಣ್ಣ-ಎನ್‌. ಶ್ರೀರಾಮ್‌ ಬಾಲಾಜಿ.
ಸಮಯ: ಅಪರಾಹ್ನ 3.30
· ಟೇಬಲ್‌ ಟೆನಿಸ್‌
ಪುರುಷರ ಸಿಂಗಲ್ಸ್‌: ಅಚಂತ ಶರತ್‌ ಕಮಲ್‌, ಹರ್ಮೀತ್‌ ದೇಸಾಯಿ.
ವನಿತಾ ಸಿಂಗಲ್ಸ್‌: ಮಣಿಕಾ ಬಾತ್ರಾ, ಶ್ರೀಜಾ ಅಕುಲಾ.
ಸಮಯ: ಸಂಜೆ 6.30
· ಬಾಕ್ಸಿಂಗ್‌
ವನಿತೆಯರ 54 ಕೆಜಿ ವಿಭಾಗ: ಪ್ರೀತಿ ಪವಾರ್‌.
ಸಮಯ: ರಾತ್ರಿ 7.00
· ಪುರುಷರ ಹಾಕಿ
ಭಾರತ-ನ್ಯೂಜಿಲ್ಯಾಂಡ್‌
ಸಮಯ: ರಾತ್ರಿ 9.00

Advertisement

Udayavani is now on Telegram. Click here to join our channel and stay updated with the latest news.

Next