ಪ್ಯಾರಿಸ್: ಮೂರು ದಶಕದ ಬಳಿಕ ಒಲಿಂಪಿಕ್ ಫೈನಲ್ ಪ್ರವೇಶ ಮಾಡುವ ಭಾರತದ ಕನಸು ನನಸಾಗಲಿಲ್ಲ. ಮಂಗಳವಾರ (ಆ 06) ನಡೆದ ಜರ್ಮನಿ ವಿರುದ್ದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತವು 3-2 ಅಂತರದ ಸೋಲು ಕಂಡಿದೆ.
ಪ್ರಮುಖ ಡಿಫೆಂಡರ್ ಅಮಿತ್ ರೋಹಿದಾಸ್ ಅನುಪಸ್ಥಿತಿಯಲ್ಲಿ ಆಡಿದ ಭಾರತ ಕೊನೆಯ ಕ್ಷಣದವರೆಗೆ ಹೋರಾಡಿತಾದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಟೋಕಿಯೊ ಒಲಿಂಪಿಕ್ಸ್ ಸೇಡು ತೀರಿಸಿಕೊಂಡ ಜರ್ಮನಿ ಫೈನಲ್ ಗೆ ಎಂಟ್ರಿ ಕೊಟ್ಟಿತು. ನೆದರ್ಲ್ಯಾಂಡ್ ಮತ್ತು ಜರ್ಮನಿ ನಡುವೆ ಫೈನಲ್ ನಡೆಯಲಿದೆ.
ಭಾರತದ ನಾಯಕ ಹರ್ಮನ್ ಪ್ರೀತ್ ಅವರು ಮೊದಲ ಅವಧಿಯ 7ನೇ ನಿಮಿಷದಲ್ಲಿ ಒಂದು ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. ಆದರೆ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಜರ್ಮನಿಯ ಗೊಂಜಾಲೊ ಪೀಲಾಟ್ ಮೊದಲ ಗೋಲು ಗಳಿಸಿ ಸಮ ಗೊಳಿಸಿದರು.
ಇದಾದ್ ಬಳಿಕ ಕ್ರಿಸ್ಟೋಫರ್ ರೂಚರ್ 27ನೇ ನಿಮಿಷದಲ್ಲಿ ಗೋಲು ಗಳಿಸಿ ಜರ್ಮನಿಗೆ ಮುನ್ನಡೆ ಒದಗಿಸಿದರು. ಮೊದಲಾರ್ಧದ ವೇಳೆಗೆ ಜರ್ಮನಿ 2-1ರಿಂದ ಮುಂದಿತ್ತು.
ಮೂರನೇ ಅವಧಿಯಲ್ಲಿ ಸಿಕ್ಕ ಪೆನಾಲ್ಟಿ ಅವಕಾಶ ಸದುಪಯೋಗ ಮಾಡಿದ ಹರ್ಮನ್ ಪ್ರೀತ್ ಮತ್ತೊಂದು ಗೋಲು ಬಾರಿಸಿ ಮತ್ತೆ ಸಮಬಲ ಮಾಡಿದರು. ಆದರೆ ಕೆಲವೇ ನಿಮಿಷ ಬಾಕಿ ಇರುವಾಗ ಮಾರ್ಕೊ ಮಿಲ್ಟ್ಕೌ ಗೋಲು ಬಾರಿಸಿ ಜರ್ಮನಿಗೆ 3-2 ಮುನ್ನಡೆ ಒದಗಿಸಿದರು.
ಕೊನೆಯ 2 ಸೆಕೆಂಡ್ಸ್ ತನಕ ಸಾಗಿದ ಪಂದ್ಯದಲ್ಲಿ ಕೊನೆಗೂ ಭಾರತ ಕೈಸೋತಿತು. ಇನ್ನು ಕಂಚಿನ ಪದಕದ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ.