ನವದೆಹಲಿ: ಪರೀಕ್ಷೆಯ ಸಿದ್ಧತೆ ಸಂದರ್ಭದಲ್ಲಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಬಾರದು. ಆತ್ಮವಿಶ್ವಾಸ ಹೊಂದಲು ಕಠಿನವಾಗಿ ಅಭ್ಯಾಸ ನಡೆಸಬೇಕು. ನೀವು ಹೆಚ್ಚು ಶ್ರಮವಹಿಸಿದಷ್ಟು ಹೆಚ್ಚು ವಿಶ್ವಾಸ ಹೊಂದಲು ಸಾಧ್ಯವಾಗುತ್ತದೆ..ಇದು ವಿವಿಧ ಪರೀಕ್ಷೆಗಳನ್ನು ಎದುರಿಸಲು ಅಣಿಯಾಗಿರುವ ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಸಲಹೆಯಾಗಿದೆ.
ಇದನ್ನೂ ಓದಿ:Elections: ಕರ್ನಾಟಕ ಸೇರಿ 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಫೆ. 27ರಂದು ಚುನಾವಣೆ
ಸೋಮವಾರ (ಜನವರಿ 29) ದೆಹಲಿಯಲ್ಲಿ ನಡೆದ 7ನೇ ಆವೃತ್ತಿಯ “ಪರೀಕ್ಷಾ ಪೇ ಚರ್ಚೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕ ವೃಂದದ ಜತೆ ಸಂವಾದ ನಡೆಸಿದರು.
“ನೀರು ಎಷ್ಟು ಆಳವಾಗಿದೆ ಎಂಬುದು ಮುಖ್ಯವಲ್ಲ, ಈಜಲು ತಿಳಿದಿದ್ದರೆ ಮುಂದೆ ಸಾಗಬಹುದಾಗಿದೆ. ಅದೇ ರೀತಿ ಪ್ರಶ್ನೆ ಪತ್ರಿಕೆ ಎಷ್ಟು ಕಠಿಣವಾಗಿದೆ ಎಂಬುದು ಮುಖ್ಯವಲ್ಲ, ಒಂದು ವೇಳೆ ನೀವು ಕಠಿನವಾಗಿ ಅಭ್ಯಸಿಸಿದ್ದರೆ, ನಿಮ್ಮ ಸಾಧನೆಯೂ ಒಳ್ಳೆಯದಾಗಿರುತ್ತದೆ. ನಿಮ್ಮ ಸುತ್ತಮುತ್ತ ಇದ್ದವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಗಮನಹರಿಸುವುದನ್ನು ನಿಲ್ಲಿಸಿ. ನಿಮ್ಮೊಂದಿಗೆ ನೀವು ಸ್ಪರ್ಧಿಸಬೇಕು, ಇತರರ ಜತೆಗಲ್ಲ. ನೀವೇನು, ನೀವೇನು ಮಾಡುತ್ತೀರಿ, ನೀವೇನು ಅಭ್ಯಾಸ ಮಾಡುತ್ತೀರಿ ಎಂಬುದರ ಮೇಲೆ ನಿಮ್ಮ ಭವಿಷ್ಯ ನಿರ್ಧಾರವಾಗುತ್ತದೆ” ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.
ವಿದ್ಯಾರ್ಥಿಗಳ ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ಪ್ರಧಾನಿ ಮೋದಿ ಅವರು ಭಾರತ್ ಮಂಟಪದಲ್ಲಿನ ಪ್ರದರ್ಶನವನ್ನು ವೀಕ್ಷಿಸಿದರು. ನಾನು ಇಂದು ವಿದ್ಯಾರ್ಥಿಗಳ ಅತ್ಯಾಧುನಿಕ ತಂತ್ರಜ್ಞಾನದ ಎಐ ಸೇರಿದಂತೆ ವಿವಿಧ ಪ್ರಾಜೆಕ್ಟ್ ಗಳನ್ನು ವೀಕ್ಷಿಸಿದೆ..ನಿಜಕ್ಕೂ ಅದ್ಭುತವಾಗಿದ್ದು, ನಾನು ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಅಭಿನಂದಿಸುವುದಾಗಿ ತಿಳಿಸಿದ್ದರು.