ಅಹಮದಾಬಾದ್: ಕಡಿಮೆ ದರದಲ್ಲಿ ಅಡುಗೆ ಅನಿಲದ ಸಿಲಿಂಡರ್ ಪಡೆದುಕೊಂಡು ಏನು ಮಾಡುತ್ತೀರಿ…ಅದರಿಂದ ಬಂಗಾಳಿಯವರಿಗೆ ಮೀನು ಬೇಯಿಸಿ ಕೊಡುತ್ತೀರಾ? ಎಂದು ಬಾಲಿವುಡ್ ನಟ, ರಾಜಕಾರಣಿ ಪರೇಶ್ ರಾವಲ್ ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಮತದಾರರ ಬಳಿ ಪ್ರಶ್ನಿಸಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕ್ಷಮೆಯಾಚಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಹೊಸ ವರ್ಷದಲ್ಲಿ ಇಂಧನ ದರ ಇಳಿಕೆ? ಗ್ರಾಹಕರ ಮೇಲಿನ ಹೊರೆ ಇಳಿಕೆಗೆ ಸಚಿವ ಸುನಿಲ್ ಸೂಚನೆ
ಚುನಾವಣೆಗೆ ದಿನಗಣನೆ ಆರಂಭವಾಗಿರುವ ಗುಜರಾತ್ ನ ವಲ್ಸಾಡ್ ನಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದ ಪರೇಶ್ ರಾವಲ್ ಈ ಹೇಳಿಕೆ ನೀಡಿದ್ದರು. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪರೇಶ್, ಗುಜರಾತ್ ನ ಜನರು ಈಗಲೂ ಹಣದುಬ್ಬರವನ್ನು ಸಹಿಸಿಕೊಳ್ಳಬಹುದು, ಆದರೆ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾಗಳನ್ನಲ್ಲ ಎಂದು ತಿಳಿಸಿದ್ದರು.
ಜನರಿಗೆ ಉದ್ಯೋಗವೂ ದೊರೆಯುತ್ತದೆ. ಆದರೆ ಒಂದು ವೇಳೆ ದೆಹಲಿ ರೀತಿ ಬಾಂಗ್ಲಾದೇಶ ಮತ್ತು ರೋಹಿಂಗ್ಯಾ ವಲಸಿಗರು ನಿಮ್ಮ ಸುತ್ತಮುತ್ತ ವಾಸಿಸಲು ಆರಂಭಿಸಿದರೆ ಏನಾಗಬಹುದು? ಗ್ಯಾಸ್ ಸಿಲಿಂಡರ್ ಬೆಲೆ ದುಬಾರಿಯಾಗಿದೆ, ಆದರೆ ಅದರ ಬೆಲೆ ಕಡಿಮೆಯಾಗಬಹುದು. ಸಿಲಿಂಡರ್ ಇಟ್ಟುಕೊಂಡು ಏನು ಮಾಡುತ್ತೀರಿ, ಬಂಗಾಲಿಗಳಿಗೆ ಮೀನು ಬೇಯಿಸಿ ಕೊಡುತ್ತೀರಾ? ಎಂದು ಪರೇಶ್ ರಾವಲ್ ಪ್ರಶ್ನಿಸಿದ್ದರು.
ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪರೇಶ್, ನಾನು ಬಂಗಾಲಿ ಅಂತ ಹೇಳಿದ್ದು, ಅಕ್ರಮ ಬಾಂಗ್ಲಾದೇಶಿ ವಲಸಿಗರ ಬಗ್ಗೆ. ಹೌದು ಮೀನಿನ ವಿಚಾರ ಅನಗತ್ಯ, ಯಾಕೆಂದರೆ ಗುಜರಾತಿಗಳು ಕೂಡಾ ಮೀನಿನ ಅಡುಗೆ ಮಾಡಿ ತಿನ್ನುತ್ತಾರೆ. ಆದರೆ ನಾನು ಬೆಂಗಾಲಿ ಅಂತ ಹೇಳಿದ್ದು ಬಾಂಗ್ಲಾ ಮತ್ತು ರೋಹಿಂಗ್ಯಾ ಅಕ್ರಮ ವಲಸಿಗರ ಬಗ್ಗೆ. ಒಂದು ವೇಳೆ ನನ್ನ ಹೇಳಿಕೆ ಯಾರಿಗಾದರೂ ನೋವನ್ನುಂಟು ಮಾಡಿದ್ದರೆ ಕ್ಷಮೆಯಾಚಿಸುವುದಾಗಿ ಟ್ವೀಟ್ ಮಾಡಿದ್ದಾರೆ.